- ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಾಗದ ಸಾಮಾಗ್ರಿಗಳನ್ನು ಖರೀದಿಸಿ ನೂರಾರು ಕೋಟಿ ಅವ್ಯವಹಾರ
- ಕಾರ್ಮಿಕರು ಎಂದರೆ ದೇಶದ ಆಸ್ತಿ ಇವರು ಇದ್ದರೆ ಮಾತ್ರ ಸಮಾಜದಲ್ಲಿ ರಾತ್ರಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ
ಕೋಲಾರ: ರಾಜ್ಯ ಸರಕಾರದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದು. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರು, ತೀವ್ರ ಸ್ವರೂಪದ ಹೋರಾಟಕ್ಕೆ ಸಿದ್ದವಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದರು.
ನಗರದ ಲಯನ್ಸ್ ಭವನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ 4 ನೇ ಜಿಲ್ಲಾ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಮತ್ತು ಕೊರೊನೋತ್ತರದ ಕಾಲಘಟ್ಟದಲ್ಲಿ ಕಾರ್ಮಿಕ ಸಚಿವರು ಮತ್ತು ಮಂಡಳಿ ಕಾರ್ಯದರ್ಶಿ ಹಾಗೂ ಕಾರ್ಮಿಕ ಆಯುಕ್ತರು ಸೇರಿ ಮಂಡಳಿ ಸಭೆಯನ್ನು ಸೇರಿಸದೇ, ಎಲ್ಲ ನಿಯಮಾವಳಿ ಹಾಗೂ ಕೇಂದ್ರ ಕಾರ್ಮಿಕ ಇಲಾಖೆಯ ಆದೇಶವನ್ನು ಉಲ್ಲಂಘಿಸಿ ರೇಷನ್ ಕಿಟ್, ಟೂಲ್ ಕಿಟ್, ಬೂಸ್ಟರ್ ಕಿಟ್ ಗಳನ್ನು, ದುಬಾರಿ ಕಾರುಗಳು, ಅಂಬ್ಯೂಲೆನ್ಸ್ ಗಳನ್ನು ಹಾಗೂ ಕಾರ್ಮಿಕ ಇಲಾಖೆಗೆ ಸ್ವತಂತ್ರ ತಂತ್ರಾಂಶ, ಕ್ಯಾಲೆಂಡರ್ ಮುದ್ರಣ ಹೀಗೆ ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಾಗದ ಸಾಮಾಗ್ರಿಗಳನ್ನು ಖರೀದಿಸಿ ನೂರಾರು ಕೋಟಿಗಳ ಅವ್ಯವಹಾರವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರು ಎಂದರೆ ದೇಶದ ಆಸ್ತಿ ಇವರು ಇದ್ದರೆ ಮಾತ್ರ ಸಮಾಜದಲ್ಲಿ ರಾತ್ರಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಆದರೆ ಅಂತಹ ಕಾರ್ಮಿಕರಿಗೆ ಸೇರಬೇಕಾದ ಸೌಲಭ್ಯಗಳಲ್ಲಿ ಭ್ರಷ್ಟಾಚಾರ ನಡೆಸಲು ಕಾರ್ಮಿಕ ಮಂಡಳಿಯ ಅವ್ಯವಹಾರಕ್ಕೆ ಕಾರಣವಾಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಜಾ ಮಾಡಬೇಕು, ಹಾಗೂ ಆಯುಕ್ತ ಅಕ್ರಂ ಪಾಷಾ ಅವರನ್ನು ವರ್ಗಾಯಿಸಬೇಕು ಎಂದು ಆಗ್ರಹಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ಗಾಂಧಿನಗರ ನಾರಯಣಸ್ವಾಮಿ ಮಾತನಾಡಿ ಮಂಡಳಿಯ ಎಲ್ಲ ಘೋಷಿತ ಸೌಲಭ್ಯಗಳನ್ನು ಫಲಾನುಭವಿ ಕಾರ್ಮಿಕರ ಖಾತೆಗೆ ನೇರಹಣ ವರ್ಗಾವಣೆ ಮೂಲಕವೇ ನೀಡಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಕಾರ್ಮಿಕರ ಶ್ರಮದಿಂದ ಸಂಗ್ರಹವಾಗಿರುವ ಹಣವನ್ನು ಭ್ರಷ್ಟಾಚಾರ ಮೂಲಕ ಕಬಳಿಸುತ್ತಿರುವುದು ಅತ್ಯಂತ ಖಂಡನೀಯ. ಈ ಬಗ್ಗೆ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಜ್ ಕಳೆದ ಸಮ್ಮೇಳನದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ನಡೆಸಲಾದ ಹೋರಾಟ ಹಾಗೂ ಚಟುವಟಿಕೆಗಳು ಹಾಗೂ ಸಂಘಟನಾ ಮತ್ತು ಲೆಕ್ಕಪತ್ರ ವರದಿ ಮಂಡಿಸಿದರು. ಅದರ ಮೇಲೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಚರ್ಚೆ ನಡೆಸಿದರು ನಂತರ ನೂತನ ಜಿಲ್ಲಾ ಸಮಿತಿಯನ್ನು ಮುಂದಿನ ಮೂರು ವರ್ಷದ ಅವಧಿಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಿ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ನವೀನ್ ಕುಮಾರ್, ನಾಗರಾಜಪ್ಪ, ಕೃಷ್ಣೋಜಿರಾವ್, ಗುರಪ್ಪ, ಕಾರ್ಯದರ್ಶಿಯಾಗಿ ಎಂ.ಭೀಮರಾಜ್, ಸಹ ಕಾರ್ಯದರ್ಶಿಯಾಗಿ ಜಿ.ಶ್ರೀನಿವಾಸ್, ಎಂ. ವಿಜಯಕೃಷ್ಣ, ಆರ್ ಜಯರಾಮನ್, ಸಿ.ಮುನಿಸ್ವಾಮಿ, ಖಜಾಂಜಿಯಾಗಿ ಆಶಾ ಮತ್ತು 14 ಮಂದಿ ಸದಸ್ಯರಾಗಿ ಆಯ್ಕೆಯಾಗಿದ್ದರು.
ಸಮಾರಂಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಮುಖಂಡರಾದ ಆಶಾ, ಪಿ.ಶ್ರೀನಿವಾಸ್, ನವೀನ ಕುಮಾರ್ ಹೊಗರಿ ನಾಗರಾಜಪ್ಪ, ಟೇಕಲ್ ಮಂಜುನಾಥ್, ಜಯರಾಮ್ ಮುಂತಾದವರು ಇದ್ದರು, ಸಭೆಯಲ್ಲಿ ಇದೇ ಜೂನ್ 26-27 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯ ಸಮ್ಮೇಳನಕ್ಕೆ 12 ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.