ಕಾರ್ಮಿಕ ಹಕ್ಕುಗಳಿಂದ ವಂಚಿತ ಅಂತರ-ರಾಜ್ಯ ವಲಸೆ ಕಾರ್ಮಿಕರು

ಬಿಜೆಪಿ ಸರ್ಕಾರವು ಒಂದೆಡೆ – ರಾಜ್ಯ ಸರ್ಕಾರಗಳು, ಕಾರ್ಮಿಕ ಇಲಾಖೆ, ಕಾರ್ಮಿಕ ಸಂಘಟನೆಗಳು – ಇವರೆಲ್ಲರನ್ನೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ದೂಷಿಸುತ್ತಿದೆ. ಮತ್ತೊಂದೆಡೆ ಸರ್ಕಾರದ OSH ಸಂಹಿತೆಯು ಹಿಂದೆ ಇದ್ದ ವಲಸೆ ಕಾರ್ಮಿಕರ ಕಾಯಿದೆ ಒದಗಿಸಿದ್ದ ಸವಲತ್ತುಗಳಿಂದ ಅವರನ್ನು ವಂಚಿತರಾಗಿಸಿವೆ ಮತ್ತು ಕಾನೂನು ರಕ್ಷಣೆಯಿಂದ ಇವರಲ್ಲಿ ಬಹುತೇಕರನ್ನು ಹೊರದೂಡಿದೆ. ನೀತಿ ಆಯೋಗದ ಕಾರ್ಯಕಾರಿ ಪಡೆಯು ವಲಸೆ ಕಾರ್ಮಿಕರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರ ಕಾಯಿದೆಯನ್ನು ಕಾಯಿದೆಯ ಆಶಯಗಳಿಗೆ ತಕ್ಕಂತೆ ಜಾರಿ ಮಾಡಲಿಲ್ಲ; ಇರುವ ಸ್ಥಳೀಯ ವೇತನಕ್ಕಿಂತಲೂ ಅತ್ಯಂತ ಕಡಿಮೆ ವೇತನ ಪಡೆಯುವ ಮೂಲಕ ವಲಸೆ ಕಾರ್ಮಿಕರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ; ಎಂದು ಹೇಳಿದೆ. ವಲಸೆ ಕಾರ್ಮಿಕರ ದುರಂತಕ್ಕೆ ಮೂಲ ಕಾರಣಗಳನ್ನು ಗುರುತಿಸಿರುವ ನೀತಿ ಆಯೋಗದ ಈ ರಾಷ್ಟ್ರೀಯ ನೀತಿ ಡಾಕ್ಯೂಮೆಂಟ್ ಕೇವಲ ವಲಸೆ ಕಾರ್ಮಿಕರ ಮತ ಚಲಾವಣೆ ಬಗ್ಗೆ ಮಾತ್ರ ಪ್ರಸ್ತಾಪಿಸಿದೆ! ಇಷ್ಟೆಲ್ಲಾ ಆದ ಮೇಲೆ, ವಲಸೆ ಕಾರ್ಮಿಕರು ವಿದ್ಯುನ್ಮಾನದ ಮೂಲಕ ರಾಜಕೀಯವಾಗಿ ಸಬಲರಾಗುವುದನ್ನು ವಿರೋಧಿಸುವ ಧೈರ್ಯ ಯಾರಿಗಿರುತ್ತದೆ? ಮಿಕ್ಕ ಕಾರ್ಯಗಳನ್ನು `ಜಿಯೋ’ಗೆ ನಿರ್ವಹಿಸಲು ಬಿಡಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ ಜೆ.ಎಸ್. ಮಜುಂದಾರ್  ಅವರು

ಜೆ.ಎಸ್. ಮಜುಂದಾರ್

ಸಂಸತ್ತಿನಲ್ಲಿ ಫೆಬ್ರವರಿ 2021ರಲ್ಲಿ ಕೇಂದ್ರ ಕಾರ್ಮಿಕ ಸಚಿವರಾದ ಶ್ರೀ ಸಂತೋಷ ಗಾಂಗ್ವರ ನೀತಿ ಆಯೋಗದ `ವಲಸೆ ಕಾರ್ಮಿಕರ ರಾಷ್ಟ್ರೀಯ ನೀತಿ’ಯ ಕರಡನ್ನು ಮಂಡಿಸಿದರು. ಆದರೆ ಅದಕ್ಕೆ “ವಲಸೆ ಹೋದವರ ಮೇಲೆ ಕೋವಿಡ್-19 ಪರಿಣಾಮಗಳಿಗೆ ಸ್ಪಂದನೆ” ಎಂಬ ಸ್ವಲ್ಪ ಬೇರೆಯಾದ ಶೀರ್ಷಿಕೆ ಕೊಡಲಾಗಿತ್ತು. ಮಾರ್ಚ್ 24, 2020ರಂದು ಪ್ರಧಾನ ಮಂತ್ರಿಗಳು ದಿಢೀರ್ ಆಗಿ ಘೋಷಿಸಿದ ಲಾಕ್‌ಡೌನ್ ನಂತರ ಸುಮಾರು ಒಂದು ಕೋಟಿ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಸುದೀರ್ಘ ನಡಿಗೆ ಪ್ರಾರಂಭಿಸಿದರು ಎಂದು ಈ ವರದಿ ಹೇಳುತ್ತದೆ. ಈ ಲಾಕ್‌ಡೌನ್‌ನಿಂದಾಗಿ ದಿಢೀರ್ ಆಗಿ ಕೆಲಸ ಮತ್ತು ಆದಾಯ ಕಳೆದುಕೊಂಡಿದ್ದು, ವಸತಿ ಮತ್ತು ಆಹಾರ ಇಲ್ಲವಾಗಿದ್ದು, ರೈಲು ಮತ್ತು ರಸ್ತೆ ಸಾರಿಗೆಯ ಸಂಪೂರ್ಣ ನಿಲುಗಡೆ-ಲಕ್ಷಗಟ್ಟಲೆ ಅಂತರರಾಜ್ಯ ವಲಸೆ ಕಾರ್ಮಿಕರು ಕೆಲವರು ತಮ್ಮ ಕುಟುಂಬ ಮತ್ತು ಮಕ್ಕಳೊಡನೆ ರಸ್ತೆ ಮತ್ತು ರೈಲು ಹಳಿಗಳ ಮೇಲೆ ನಡಿಗೆ ಶುರು ಮಾಡಿದರು. ನೂರಾರು ಜನರು ಹಿಂದೆಂದೂ ಅನುಭವಿಸಿರದ ಲಾಕ್‌ಡೌನ್ ಮತ್ತು ತಕ್ಷಣದ ಪರಿಹಾರದ ಕೊರತೆಯಿಂದಾಗಿ ಮಾರ್ಗ ಮಧ್ಯದಲ್ಲಿ ನಿಧನರಾದರು, ಕೋವಿಡ್-19 ಸೋಂಕಿನಿಂದಲ್ಲ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಬಂದ ವಿವರಗಳು, ಪ್ರಕಟಿಸಿದ ಛಾಯಾ ಚಿತ್ರಗಳು ದೇಶದಾದ್ಯಂತ ಜನರ ಪ್ರಜ್ಞೆಯನ್ನೂ ಕಲಕಿದವು.

ಹುಸಿ ಹೆಗ್ಗಳಿಕೆಗಳು:

ಲಾಕ್‌ಡೌನ್ ದುರಂತದ ನಂತರ ಬೃಹತ್ ಪ್ರಮಾಣದಲ್ಲಿ ಮೂಡಿ ಬಂದ ಸಾರ್ವಜನಿಕ ಅನುಕಂಪವನ್ನು ಬಳಸಿಕೊಂಡು, ಈ ಕರಡು ನೀತಿಯು “ವಿವಿಧ ರಾಜ್ಯಗಳು, ತಜ್ಞರು ಮತ್ತು ನಾಗರಿಕ ಸಮಾಜದ ಬೇಡಿಕೆಗಳಿಗೆ ಸ್ಪಂದನೆಯಾಗಿದೆ” ಎಂದು ಕೇಂದ್ರ ಕಾರ್ಮಿಕ ಸಚಿವರು ಫೆಬ್ರವರಿ 8ರಂದು ಸಂಸತ್ತಿನಲ್ಲಿ ಘೋಷಿಸಿದರೂ ಸರ್ಕಾರದ ಈ ಹೆಗ್ಗಳಿಕೆ ಪೂರ್ಣ ಸುಳ್ಳು. ಮಾರ್ಚ್ 24, 2020 ರಂದು ಲಾಕ್‌ಡೌನ್ ಘೋಷಣೆಯಾಗಿದ್ದು; ಮನೆಗೆ ಮರಳುತ್ತಿದ್ದ ವಲಸೆ ಕಾರ್ಮಿಕ ದುರಂತ ವರದಿಗಳು ಬರುತ್ತಲೇ ಇದ್ದವು; ವಲಸೆ ಕಾರ್ಮಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲು ಸರ್ಕಾರ ತೋರಿದ ಸಂವೇದನಾಶೂನ್ಯತೆ, ಉಚಿತ ಪಡಿತರ ನೀಡದಿರುವುದು, ಕಾರ್ಮಿಕ ಸಂಘಟನೆಗಳು ಮತ್ತು ಇತರ ವಿಭಾಗಗಳು ಅಗತ್ಯವಿದ್ದವರಿಗೆ ನೇರ ನಗದು ನೀಡುವಂತೆ ಒತ್ತಾಯಿಸಿದರೂ ಇದನ್ನೂ ಕೇಳಿಸಿಕೊಳ್ಳದ ಸರ್ಕಾರದ ಧೋರಣೆಗಳ ವಿರುದ್ಧ ಏಪ್ರಿಲ್-ಜೂನ್ ಅವಧಿಯಲ್ಲಿ ಪ್ರತಿಭಟನೆಗಳು ಸಹ ನಡೆದಿದ್ದವು. ಇದಕ್ಕೆ ಬದಲಾಗಿ ಮೋದಿ ಸರ್ಕಾರವು ಸೆಪ್ಟೆಂಬರ್ 2020ರಲ್ಲಿ ಅಂತರ-ರಾಜ್ಯ ವಲಸೆ ಕಾರ್ಮಿಕರು (ಉದ್ಯೋಗ ಮತ್ತು ಸೇವಾ ನಿಯಮಗಳ ನಿಯಂತ್ರಣ) ಕಾಯಿದೆ 1979 (ವಲಸೆ ಕಾರ್ಮಿಕರ ಕಾಯಿದೆ)ಯನ್ನು ರದ್ದುಗೊಳಿಸಿತು. ಈಗ, ಫೆಬ್ರವರಿ 2021ರಲ್ಲಿ ಮೋದಿ ಸರ್ಕಾರವು ವಲಸೆ ಕಾರ್ಮಿಕರ ನೋವು ಬವಣೆಗಳಿಗೆ ಸ್ಪಂದಿಸುತ್ತಿದೆಯಂತೆ!

ಕಾರ್ಪೋರೇಟ್‌ಗಳಿಗೆ ಅನುಕೂಲವಾಗಿರುವ ಮೂರು ರೈತ ವಿರೋಧಿ ಮಸೂದೆಗಳು ಮತ್ತು ಮೂರು ಕಾರ್ಮಿಕ ವಿರೋಧಿ ಕಾರ್ಮಿಕ ಮಸೂದೆಗಳನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ತೀವ್ರ ಪ್ರತಿರೋಧ ಮತ್ತು ಬಹಿಷ್ಕಾರದ ನಡುವೆ ಯಾವುದೇ ರೀತಿಯ ಮತ ಚಲಾವಣೆಗೆ ಅವಕಾಶ ನೀಡದೆ ಅಂಗೀಕಾರಗೊಳಿಸಲಾಯಿತು. ಒಂದೇ ಬಾರಿಗೆ ಈ ಎರಡೂ ಮಸೂದೆಗಳು ಲೋಕಸಭೆಯಲ್ಲಿ ಸೆಪ್ಟೆಂಬರ್ 17ರಂದು ಮತ್ತು ರಾಜ್ಯಸಭೆಯಲ್ಲಿ ಸೆಪ್ಟೆಂಬರ್ 20ರಂದು ಅಂಗೀಕಾರವಾದವು ಮತ್ತು ಸೆಪ್ಟೆಂಬರ್ 27, 2020 ರಂದು ರಾಷ್ಟ್ರಪತಿಗಳು ತಮ್ಮ ಅಂಕಿತ ನೀಡಿದರು. ಕೇವಲ 10 ದಿನಗಳಲ್ಲಿ ಮೂರು ಕೃಷಿ ಮಸೂದೆಗಳು ಮತ್ತು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ನಂತರ ದಶಕಗಳ ಹೋರಾಟ, ತ್ಯಾಗಗಳ ಮೂಲಕ ಕಾರ್ಮಿಕರು ಗಳಿಸಿಕೊಂಡಿದ್ದ ಕಾರ್ಮಿಕ ಕಾನೂನುಗಳನ್ನು ಬದಲಿಸಿ ರೂಪಿಸಿದ ಮೂರು ಕಾರ್ಮಿಕ ಸಂಹಿತೆಗಳು ಜಾರಿಗೆ ಬಂದವು. ಈ ಕ್ರಮಗಳಿಂದಾಗಿ ಭಾರತದ ಕೋಟ್ಯಾಂತರ ರೈತರು ಮತ್ತು ಕಾರ್ಮಿಕರು ಕೋವಿಡ್ ನಂತರದ ನವಭಾರತದಲ್ಲಿ ಮೋದಿ ಸರ್ಕಾರವು “ಆತ್ಮನಿರ್ಭರ ಭಾರತ” ಎಂದು ನೀಡಿರುವ ದಿಕ್ಕು ತಪ್ಪಿಸುವ ಘೋಷಣೆಯಡಿ ವಿದೇಶಿ ಮತ್ತು ಆಂತರಿಕ ಕಾರ್ಪೋರೇಟ್‌ಗಳ ಮರ್ಜಿಗೆ ಒಳಪಡುತ್ತಿದ್ದಾರೆ.

ಯಾವ ಕಾನೂನು ಸುರಕ್ಷೆಗಳನ್ನು ಮತ್ತು ಹೇಗೆ ತೆಗೆದು ಹಾಕಲಾಗಿದೆ

ಸೆಪ್ಟೆಂಬರ್ 2020ರಲ್ಲಿ ಅಂಗೀಕಾರವಾದ ಮೂರು ಕಾರ್ಮಿಕ ಸಂಹಿತೆಗಳಲ್ಲಿ ಉದ್ಯೋಗದ ಸುರಕ್ಷತೆ, ಆರೋಗ್ಯ ಮತ್ತು ದುಡಿಮೆಯ ಸ್ಥಿತಿಗಳ ಸಂಹಿತೆ 2020 (OSH ಸಂಹಿತೆ) ಕೂಡಾ ಒಂದು. ಈ OSH ಸಂಹಿತೆಯ ಕಲಮು 143(1) ಮೂಲಕ ವಲಸೆ ಕಾರ್ಮಿಕರ ಕಾಯಿದೆ ಮತ್ತು ಉದ್ಯಮ ಆಧಾರಿತ ಕಾರ್ಮಿಕರಿಗಿದ್ದ 12 ಇನ್ನಿತರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ವಲಸೆ ಕಾರ್ಮಿಕರಿಗಿದ್ದ ನಗಣ್ಯ ಕಾನೂನು ಸುರಕ್ಷತೆಯನ್ನೂ ಸಹ ತೆಗೆದು ಹಾಕಲಾಗಿದೆ.

ಕಾರ್ಮಿಕ ಕಾನೂನುಗಳು ಅನ್ವಯವಾಗುವುದರ ಜೊತೆಯಲ್ಲಿಯೇ ಈಗ ರದ್ದುಗೊಳಿಸಲಾದ ವಲಸೆ ಕಾರ್ಮಿಕರ ಕಾಯಿದೆಯಲ್ಲಿ ಕಡ್ಡಾಯವಾಗಿ ಪಾಲಿಸಲೇಬೇಕಿದ್ದ ಕೆಲವು ನಿರ್ದಿಷ್ಟ ಅವಕಾಶಗಳು ವಲಸೆ ಕಾರ್ಮಿಕರಿಗೆ ಇದ್ದವು – ಅವು ಯಾವುವೆಂದರೆ.

(1)       (ಎ) ಸಮಾನ ಕೆಲಸಕ್ಕೆ ಬೇರೆ ಕಾರ್ಮಿಕರಿಗೆ ನೀಡುವ ಸಮಾನ ವೇತನ ಅಥವಾ ಕನಿಷ್ಟ ವೇತನ ಕಾಯಿದೆ 1984 ಪ್ರಕಾರ ಕನಿಷ್ಠ ವೇತನ ನೀಡುವುದು (ಯಾವುದು ಹೆಚ್ಚೋ ಅದನ್ನು); (ಬಿ) ಸ್ಥಳಾಂತರ ಅಲೊಯೆನ್ಸ್; (ಸಿ) ಪ್ರಯಣದ ಅವಧಿಯ ವೇತನವೂ ಒಳಗೊಂಡಂತೆ ಮನೆಗೆ ಪ್ರಯಾಣಿಸುವ ಅಲೋಯೆನ್ಸ್; (ಡಿ) ಉಚಿತವಾದ ಸೂಕ್ತ ವಸತಿ ಮತ್ತು ವೈದ್ಯಕೀಯ ಸೌಲಭ್ಯ.

(2)       ವಲಸೆ ಕಾರ್ಮಿಕರನ್ನು ನೇಮಿಸುವ ಗುತ್ತಿಗೆದಾರರ ಮೇಲೆ ಜವಾಬ್ದಾರಿ ಹೇರುವುದು – (ಎ) ಮೂಲ ರಾಜ್ಯ ಮತ್ತು ವಲಸೆಗೆ ಹೋದ ರಾಜ್ಯಗಳೆರಡರಲ್ಲೂ ಕಡ್ಡಾಯ ನೋಂದಣಿ; (ಬಿ) 15 ದಿನಗಳೊಳಗೆ ಎರಡೂ ರಾಜ್ಯ ಸರ್ಕಾರಗಳಿಗೆ ವಲಸೆ ಕಾರ್ಮಿಕರ ವಿವರ ಮತ್ತು ನೇಮಕ ಮಾಡಲ್ಪಟ್ಟ ಸಂಸ್ಥೆಯ ವಿವರ ನೀಡುವುದು; (ಸಿ) ವಲಸೆ ಕಾರ್ಮಿಕರ ವಿವರಗಳಿರುವ ರಿಜಿಸ್ಟರ್ ಇಟ್ಟುಕೊಳ್ಳುವುದು ಮತ್ತು (ಡಿ) ಪ್ರಮುಖವಾಗಿ ಪ್ರತಿಯೊಂದು ವಲಸೆ ಕಾರ್ಮಿಕರಿಗೆ ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿರುವ ಪಾಸ್ ಬುಕ್ ನೀಡಬೇಕು. ವಲಸೆ ಕಾರ್ಮಿಕನ ಪೋಟೋ ಜೊತೆಯಲ್ಲಿ (ಇ) ಹೆಸರು ಮತ್ತು ಉದ್ಯೋಗದ ಸ್ಥಳ; (ಎಫ್) ಉದ್ಯೋಗದ ಅವಧಿ; (ಜಿ) ವೇತನದ ದರ ಮತ್ತು ಪಾವತಿ ವಿಧಾನ; (ಹೆಚ್) ಸ್ಥಳಾಂತರ ಅಲೋಯೆನ್ಸ್ ಪಾವತಿ (ಐ) ಮರಳಿ ಬರುವ ಪ್ರಯಾಣ ವೆಚ್ಚ ನೀಡುವುದು; (ಜೆ) ವೇತನದಲ್ಲಿ ಏನಾದರೂ ಕಡಿತಗೊಳಿಸಿದರೆ, ಅದರ ವಿವರ, ಇತ್ಯಾದಿ; (ಕೆ) ಮಾರಣಾಂತಿಕ ಅಪಘಾತ ಅಥವಾ ಗಂಭೀರ ಗಾಯಗಳ ವರದಿಯನ್ನು ಎರಡೂ ರಾಜ್ಯ ಸರ್ಕಾರಗಳು ಮತ್ತು ವಲಸೆ ಕಾರ್ಮಿಕರ ಸಂಬಂಧಿಕರಿಗೆ ನೀಡುವುದು; (ಎಲ್) ಈ ಕಾಯಿದೆಯ ಅಂಶಗಳ ಉಲ್ಲಂಘನೆಗೆ ವಿಧಿಸಿರುವ ಶಿಕ್ಷೆಗಳಿಗೆ ಸಿದ್ಧವಾಗಿರುವುದು.

(3)       ಸಂಸ್ಥೆಯೊಳಗಿನ ಮಾಲೀಕರಿಗೆ (ಎ) ನೋಂದಣಿ (ಬಿ) ಅಂತರ ರಾಜ್ಯ ಕಾರ್ಮಿಕರ ವಿವರಗಳಿರುವ ರಿಜಿಸ್ಟರ್‌ಗಳನ್ನು ಇಟ್ಟುಕೊಳ್ಳುವುದು; (ಸಿ) ಪ್ರಮುಖ ಮಾಲೀಕರ ನಿಗಾದಲಿ ವೇತನ ಮತ್ತು ಅಲೋಯೆನ್ಸ್‌ಗಳನ್ನು ಗುತ್ತಿಗೆದಾರರು ನೀಡುವ ಜವಾಬ್ದಾರಿ ಮತ್ತು ಒಂದು ವೇಳೆ ಗುತ್ತಿಗೆದಾರ ಪಾವತಿಸದಿದ್ದಲ್ಲಿ, ಪ್ರಮುಖ ಮಾಲೀಕನೇ ನೀಡುವುದು; (ಡಿ) ಈ ಕಾಯಿದೆಯ ಉಲ್ಲಂಘನೆಗೆ ವಿಧಿಸಿರುವ ಶಿಕ್ಷೆಗೆ ಸಿದ್ಧರಿರುವುದು.

OSH ಸಂಹಿತೆಯಲ್ಲಿ ಉಳಿದಿರುವುದು ಏನು?

ಈ OSH ಸಂಹಿತೆಯ ಎರಡನೇ ಭಾಗವು ಅಂತರ-ರಾಜ್ಯ ವಲಸೆ ಕಾರ್ಮಿಕರಿಗೆ ಸಂಬಂಧಪಟ್ಟ ಕೆಲವು ಉಪಬಂಧಗಳನ್ನು ಹೊಂದಿದೆ. ಆಳುವ ಪ್ರಭುತ್ವವು ವಲಸೆ ಕಾರ್ಮಿಕರ ಕಾಯಿದೆಯ ಉಪಬಂಧಗಳನ್ನು OSH ನಲ್ಲಿ ಅಡಕ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತದೆ. ಆದರೆ, ಇದೂ ಸಹ ಸುಳ್ಳು. ಕೆಳ ಕಾಣಿಸಿದ ಕೆಲವು ಉಪಬಂಧಗಳನ್ನು ಹೊರತುಪಡಿಸಿ, ರದ್ದುಪಡಿಸಲಾದ ವಲಸೆ ಕಾರ್ಮಿಕ ಕಾಯಿದೆಯ ಉಳಿದೆಲ್ಲಾ ಉಪಬಂಧಗಳನ್ನು ತೆಗೆದುಹಾಕಲಾಗಿದೆ.

  1. ವಲಸೆ ಕಾರ್ಮಿಕರ ಕಾಯಿದೆ ಪ್ರಕಾರ ಈ ಕಾಯಿದೆ ಅನ್ವಯವಾಗುವ ಸಂಸ್ಥೆ/ಗುತ್ತಿಗೆದಾರರ ಬಳಿ ಕನಿಷ್ಟ 5 ವಲಸೆ ಕಾರ್ಮಿಕರಿರಬೇಕು ಎಂದಿತ್ತು. ಈಗ OSH ಸಂಹಿತೆಯಲ್ಲಿ ಈ ಕನಿಷ್ಠ ಮಿತಿಯನ್ನು 10ಕ್ಕೆ ಹೆಚ್ಚಿಸಲಾಗಿದೆ. ಅಂದರೆ, ಬಹು ಸಂಖ್ಯೆಯ ಸಣ್ಣ ಕೈಗಾರಿಕೆಗಳು ಮತ್ತು ಸೇವಾ ಉದ್ದಿಮೆಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳ ರಕ್ಷಣೆ ಇರುವುದಿಲ್ಲ ಎಂದು ಅರ್ಥ.
  2. OSH ಸಂಹಿತೆಯು ವಲಸೆ ಕಾರ್ಮಿಕರ ಕಾಯಿದೆಯ ಕೆಳಕಾಣಿಸಿದ ಪರಿಷ್ಕೃತ ಮತ್ತು ದುರ್ಬಲಗೊಳಿಸಿದ ಉಪಸಂಬಂಧಗಳನ್ನು ಹೊಂದಿದೆ.
    • ವಲಸೆ ಕಾರ್ಮಿಕರಿಗೆ ಅಸ್ಪಷ್ಟ `ಸೂಕ್ತ ಕೆಲಸದ ವಾತಾವರಣ’;
    • ಉಳಿದ ಕಾರ್ಮಿಕರಿಗೆ ಅನ್ವಯಿಸುವ ವೇತನ – ಸಂಬಂಧಿ ಮತ್ತು ಇತರ ಸೌಲಭ್ಯಗಳು;
    • ಸ್ವಂತ ಊರಿಗೆ ಹೋಗಲು ಮತ್ತು ಮರಳಲು ಒಂದು ಮೊತ್ತ ಮಾತ್ರ ನೀಡುವುದು.
  1. ಜೊತೆಗೆ OSH ಸಂಹಿತೆಯು ಯಾವ ರಾಜ್ಯದಲ್ಲಿಯಾದರೂ ವಲಸೆ ಕಾರ್ಮಿಕರಿಗೆ ಪಡಿತರ ವಿತರಣಾ ವ್ಯವಸ್ಥೆ ಒದಗಿಸುತ್ತದೆ; ಇವರಿಗೆ ಉಚಿತ ಸಹಾಯವಾಣಿ ಹಾಗೂ ಓದಲು ವ್ಯವಸ್ಥೆ ಮಾಡಿಕೊಡುತ್ತದೆ.

ಮೋದಿ ಸರ್ಕಾರವು ಲಾಕ್‌ಡೌನ್ ನಂತರ ವಲಸೆ ಕಾರ್ಮಿಕರು ಅನುಭವಿಸಿದ ಸಂಕಷ್ಟಗಳಿಗೆ ಈಗ ತಾನು ಸ್ಪಂದಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದೆ ಮತ್ತು ಅದಕ್ಕೆ ತಕ್ಕಂತೆ ನೀತಿ ಆಯೋಗವು ವಲಸೆ ಕಾರ್ಮಿಕರ ರಾಷ್ಟ್ರೀಯ ನೀತಿಯ ಕರಡನ್ನು ತಯಾರಿಸಿದೆ. ಈ ಡಾಕ್ಯುಮೆಂಟ್ ನಾಲ್ಕು ವಿಭಾಗಗಳನ್ನು ಆದ್ಯತೆಯ ವಿಷಯಗಳಾಗಿ ಗುರುತಿಸಿದೆ; (ಎ) ರಾಜಕೀಯ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು; (ಬಿ) ಅಂತರರಾಜ್ಯ ಸಂವಹನ ವ್ಯವಸ್ಥೆಯ ಸ್ಥಾಪನೆ; (ಸಿ) ಪ್ರತಿಯೊಂದು ರಾಜ್ಯದ ಕಾರ್ಮಿಕ ಇಲಾಖೆಗಳಲ್ಲಿ ಒಂದು `ವಲಸೆ ವಿಭಾಗ’ ಸ್ಥಾಪನೆ; (ಡಿ) ಮೂಲ ರಾಜ್ಯ ಮತ್ತು ತಲುಪುದಾಣ ರಾಜ್ಯಗಳು ಪರಸ್ಪರ ಸಹಕರಿಸಿಕೊಳ್ಳುವುದು.

ಆದರೆ, ವಾಸ್ತವವಾಗಿ ಕೇವಲ ಎರಡು ವಿಭಾಗಗಳು ಮಾತ್ರ ಇವೆ. ಮೊದಲನೆಯದು ವಲಸೆ ಕಾರ್ಮಿಕರ `ರಾಜಕೀಯ ಒಳಗೊಳ್ಳುವಿಕೆ’ ಮತ್ತು ಇನ್ನೊಂದು ಅಂತರ-ಸರಕಾರಿ ಸಮನ್ವಯತೆ. ಈ ಕರಡು ಡಾಕ್ಯುಮೆಂಟ್‌ನಲ್ಲಿ ಎಲ್ಲಿಯೂ ಕೂಡಾ ವಲಸೆ ಕಾರ್ಮಿಕರ ಕಾರ್ಮಿಕ ಹಕ್ಕುಗಳು ಮತ್ತು ಔದ್ಯಮಿಕ ಸಂಬಂಧಿ ವಿಷಯಗಳನ್ನು ಪ್ರಸ್ತಾಪಿಸಿಲ್ಲ.

ವೋಟ್ ಬ್ಯಾಂಕ್‌ಗಳಾಗಿ ವಲಸೆ ಕಾರ್ಮಿಕರನ್ನು ಕಾಣುತ್ತಿರುವ ಬಿಜೆಪಿ

ಸರ್ಕಾರದ ಒಟ್ಟಾರೆ ಪ್ರಯತ್ನವು `ರಾಜಕೀಯ ಒಳಗೊಳ್ಳುವಿಕೆಯನ್ನೂ ಖಚಿತಪಡಿಸಿಕೊಳ್ಳುವುದೇ ಆಗಿರುವ ಹಾಗೆ ಕಾಣುತ್ತಿದೆ. ಮತ ಚಲಾವಣೆ ಬಿಟ್ಟರೆ ವಲಸೆ ಕಾರ್ಮಿಕರಿಗಾಗಲೀ ಅಥವಾ ಇನ್ಯಾವುದೇ ಕಾರ್ಮಿಕ ವಿಭಾಗಕ್ಕಾಗಲೀ ಇನ್ಯಾವುದೇ ರೀತಿಯ ರಾಜಕೀಯ ಒಳಗೊಳ್ಳುವಿಕೆ ಇಲ್ಲ. ಹೀಗಾಗಿ, ಈ ಕರಡು ಡಾಕ್ಯುಮೆಂಟ್ ಹೇಳುವುದು ಹೇಗೆ-“ಮತ ಚಲಾವಣೆ” ಮಾಡಲು ಒಂದು ಕಾರ್ಯವಿಧಾನ ಸ್ಥಾಪಿಸುವುದು ಮತ್ತು ಈ ರಾಜಕೀಯ ಒಳಗೊಳ್ಳುವಿಕೆಯು “ಆಯಾ ರಾಜ್ಯಗಳ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜಕೀಯ ನಾಯಕತ್ವಕ್ಕೆ ಒಂದು ಹೊಣೆಗಾರಿಕೆ ಹೆಚ್ಚಿಸುತ್ತದೆ”.

2011ರ ಗಣತಿಯ ಪ್ರಕಾರ ಭಾರತದಲ್ಲಿರುವ ಒಟ್ಟು ಆಂತರಿಕ ವಲಸೆಗಾರರ (ಅಂತರ ರಾಜ್ಯ ಮತ್ತು ರಾಜ್ಯದ ಒಳಗಡೆಯವರು ಸೇರಿದಂತೆ) ಸಂಖ್ಯೆ 45.36 ಕೋಟಿ ಅಥವಾ ದೇಶದ ಜನ ಸಂಖ್ಯೆಯ ಶೇ. 37 ಭಾಗ; 2016ರ ಆರ್ಥಿಕ ಸಮೀಕ್ಷೆಯ ಒಟ್ಟು ಕಾರ್ಮಿಕರ ಸಂಖ್ಯೆ 48.2 ಕೋಟಿ ಇದ್ದು, ಅದರಲ್ಲಿ ಶೇ. 20 ಭಾಗ ಅಥವಾ 10 ಕೋಟಿಯಷ್ಟು ವಲಸೆ ಕಾರ್ಮಿಕರು ಎಂದು ಹೇಳಿದೆ.

NSSO ಸಮೀಕ್ಷೆಗಳು ಮತ್ತು ಆರ್ಥಿಕ ಸಮೀಕ್ಷೆಯು ಭಾರತದಲ್ಲಿ ಒಟ್ಟು 6.5 ಕೋಟಿ ಅಂತರ ರಾಜ್ಯ ವಲಸಿಗರಿದ್ದು, ಅದರಲ್ಲಿ ಶೇ. 33 ಪ್ರಮಾಣದವರು ಕಾರ್ಮಿಕರು ಎಂದು ತಿಳಿಸುತ್ತಿದೆ. ಕಾರ್ಮಿಕರ ಅಂಕಿ-ಅಂಶಗಳೊಳಗೆ ಸೇರ್ಪಡೆಯಾಗದ ಬೀದಿಬದಿ ವ್ಯಾಪಾರಿಗಳನ್ನು ಸೇರಿಸಿಕೊಂಡರೆ. ಒಟ್ಟು ವಲಸೆ ಕಾರ್ಮಿಕರ ಸಂಖ್ಯೆ ಸುಮಾರು 1.2 ರಿಂದ 1.8 ಕೋಟಿ ಆಗಬಹುದು.

ಪ್ರೊ. ಅಮಿತಾಬ್ ಕುಂಡು ರವರ ಅಂದಾಜಿನ ಪ್ರಕಾರ ನಾಲ್ಕು ರಾಜ್ಯಗಳಿಂದ ಬಂದವರು ದೇಶದ ಒಟ್ಟು ವಲಸೆ ಕಾರ್ಮಿಕರ ಶೇ. 50 ಪ್ರಮಾಣದಷ್ಟಿದ್ದಾರೆ. ಉತ್ತರ ಪ್ರದೇಶ (ಶೇ.25), ಬಿಹಾರ-(ಶೇ.14), ರಾಜಸ್ಥಾನ-(ಶೇ.6) ಮತ್ತು ಮಧ್ಯಪ್ರದೇಶ (ಶೇ.5).

ಈ ಅಗಾಧ ಪ್ರಮಾಣದ ವಲಸಿಗರನ್ನು ಭಾವಿ ವೋಟ್ ಬ್ಯಾಂಕ್‌ಗಳಾಗಿ ಆರೆಸ್ಸೆಸ್‌-ಬಿಜೆಪಿ ನೋಡುತ್ತಿದೆ. ಹೀಗಾಗಿಯೇ, ಇವರುಗಳಿಗೆ ಮತ ಚಲಾಯಿಸುವ ಅವಕಾಶ ನೀಡುವ ಸಲುವಾಗಿ ನೀತಿ ಆಯೋಗದ ಕರಡು ರಾಷ್ಟ್ರೀಯ ನೀತಿ ತಯಾರಿಸಿರುವುದು.

ಅನ್‌ಲೈನ್ ಮತ ಚಲಾವಣೆಗೆ ಒತ್ತು

2019ರ ಲೋಕಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ ಆನ್‌ಲೈನ್ ಮತ ಚಲಾವಣೆ ಸಿದ್ಧತೆಯ ಬಗ್ಗೆ – ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಎಲೆಕ್ಟ್ರಾನಿಕ್ ಮತ ಚಲಾವಣೆ ಅವಕಾಶ ಇಲ್ಲದಿದ್ದರೂ-ಬಹಳವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಯುತ್ತಿರುವುದರ ಬಗ್ಗೆ “ದಿ ಹಿಂದು” ಪತ್ರಿಕೆ ಮಾರ್ಚ್ 13, 2019ರಂದು ವರದಿ ಮಾಡಿತ್ತು. ಈ ವರದಿಯ ಆಧಾರದ ಮೇಲೆ ಭಾರತದ ಚುನಾವಣಾ ಆಯೋಗವು ಸಾರ್ವಜನಿಕ ಸ್ಪಷ್ಟೀಕರಣ ನೀಡಬೇಕಾಯಿತು ಮತ್ತು “ಸುಳ್ಳು ಸುದ್ದಿ” ಹರಡುತ್ತಿರುವವರನ್ನು ಹಿಡಿಯುವಂತೆ ದೆಹಲಿ ಪೊಲೀಸ್‌ಗೆ ದೂರು ನೀಡಿತ್ತು.

ಇದೇ ಚುನಾವಣಾ ಆಯೋಗವು ನವೆಂಬರ್ 27, 2020ರಂದು ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರವನ್ನು ಬರೆದು ಅನಿವಾಸಿ ಭಾರತೀಯರಿಗೆ `ವಿದ್ಯುನ್ಮಾನ ಚಾಲಿತ ಅಂಚೆ ಬ್ಯಾಲೆಟ್ ವಿಧಾನ (ETBPS)”ದ ಮೂಲಕ ಮತ ಚಲಾಯಿಸಲು ಅನುವಾಗುವಂತೆ Conduct of Elections Rules, 1961ಗೆ ಸೂಕ್ತ ತಿದ್ದುಪಡಿ ತರುವಂತೆ ಸೂಚಿಸಿದೆ ಮತ್ತು ಮುಂದುವರೆದು ಚುನಾವಣಾ ಆಯೋಗವು “ಅಸ್ಸಾಂ, ಪ. ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಈ ಸೌಲಭ್ಯವನ್ನು ನೀಡಲು ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸಿದ್ಧವಿದೆ” ಎಂದು ಹೇಳಿದೆ. (ವರದಿ: ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ, ಡಿಸೆಂಬರ್ 2, 2020).

ಸಿಪಿಐ(ಎಂ) ಪಕ್ಷವು ಡಿಸೆಂಬರ್ 4, 2020ರಂದು ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಈ ಏಕಪಕ್ಷೀಯ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿತು ಮತ್ತು ಸ್ವಾತಂತ್ರ್ಯ ಪಡೆದ ದಿನದಿಂದ ಇರುವ ರೀತಿಯಲ್ಲಿ ಮತ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ತರುವ ಮೊದಲು ಸರ್ವಪಕ್ಷಗಳ ಸಭೆ ಕರೆಯುವಂತೆ ಆಗ್ರಹಿಸಿತು. ಚುನಾವಣಾ ಆಯೋಗದ ಈ ETBPS ಪ್ರಸ್ತಾಪದ ಸಂಕೇತ ಪಡೆದ ಆಳುವ ಸರ್ಕಾರವು ದೇಶದೊಳಗಿರುವ ಅಪಾರ ಸಂಖ್ಯೆಯ ವಲಸಿಗರನ್ನು ಕೇಂದ್ರೀಕರಿಸಿಕೊಂಡು ಅವರಿಗೂ ಇದೇ ತರಹದ ಮತ ವ್ಯವಸ್ಥೆ ನೀಡಲು ಮುಂದಾಗಿದೆ. ಹೀಗಾಗಿಯೇ, ವಲಸೆ ಕಾರ್ಮಿಕರ ರಾಷ್ಟ್ರೀಯ ನೀತಿಯ ಕರಡು ರಚನೆಯಾಗಿರುವುದು.

ನೀತಿ ಆಯೋಗದ ಕಾರ್ಯಕಾರಿ ಪಡೆಯು ವಲಸೆ ಕಾರ್ಮಿಕರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರ ಕಾಯಿದೆಯನ್ನು ಕಾಯಿದೆಯ ಆಶಯಗಳಿಗೆ ತಕ್ಕಂತೆ ಜಾರಿ ಮಾಡಲಿಲ್ಲ; ಇರುವ ಸ್ಥಳೀಯ ವೇತನಕ್ಕಿಂತಲೂ ಅತ್ಯಂತ ಕಡಿಮೆ ವೇತನ ಪಡೆಯುವ ಮೂಲಕ ವಲಸೆ ಕಾರ್ಮಿಕರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ; ಕಾರ್ಮಿಕ ಇಲಾಖೆಯ ಸ್ಥಾಪಿತ ಹಿತಾಸಕ್ತಿಗಳು ಮುಖ್ಯ ಮಾಲೀಕರು/ಗುತ್ತಿಗೆದಾರರೊಡನೆ ಶಾಮೀಲಾಗುವ ಮೂಲಕ ಕಾಯಿದೆಯ ಜಾರಿಗೆ ಅಡ್ಡಿಯಾಗಿದ್ದಾರೆ ಎಂದು ಹೇಳಿದೆ.

“ವಲಸೆ ಕಾರ್ಮಿಕರನ್ನು ಸಂಘಟಿಸುವಲ್ಲಿ ಈಗಿರುವ ಅಂತರವೂ ಸಹ ಇವರ ಉದ್ಯೋಗದ ಸಂಕಷ್ಟ ಸ್ಥಿತಿಗೆ ಕಾರಣ” ಎಂದು ಈ ಕರಡು ಡಾಕ್ಯುಮೆಂಟ್ ಹೇಳುತ್ತದೆ. ಆದರೆ ವಲಸೆ ಕಾರ್ಮಿಕರ ಸಂಘಟಿಸುವುದರ ಬಗ್ಗೆ ಮತ್ತು ವಲಸೆ ಕಾರ್ಮಿಕರ ಸಂಘಟನೆಗಳನ್ನು ನೋಂದಾಯಿಸುವಲ್ಲಿ ಕೇಂದ್ರ ಸರ್ಕಾರ ತಳೆದಿರುವ ಧೋರಣೆ ನೋಡುವಾಗ ಸರ್ಕಾರವೇ ಈ ನಿಟ್ಟಿನಲ್ಲಿ ದೊಡ್ಡ ಅಡಚಣೆಯಾಗಿ ನಿಂತಿದೆ ಎನ್ನುವುದು ಸ್ಪಷ್ಟ.

ಬಿಜೆಪಿ ಸರ್ಕಾರವು ಒಂದೆಡೆ – ರಾಜ್ಯ ಸರ್ಕಾರಗಳು, ಕಾರ್ಮಿಕ ಇಲಾಖೆ, ಕಾರ್ಮಿಕ ಸಂಘಟನೆಗಳು– ಇವರೆಲ್ಲರನ್ನೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ದೂಷಿಸುತ್ತಿದೆ. ಮತ್ತೊಂದೆಡೆ ಸರ್ಕಾರದ OSH ಸಂಹಿತೆಯು ಹಿಂದೆ ಇದ್ದ ವಲಸೆ ಕಾರ್ಮಿಕರ ಕಾಯಿದೆ ಒದಗಿಸಿದ್ದ ಸವಲತ್ತುಗಳಿಂದ ಅವರನ್ನು ವಂಚಿತರಾಗಿಸಿವೆ ಮತ್ತು ಕಾನೂನು ರಕ್ಷಣೆಯಿಂದ ಇವರಲ್ಲಿ ಬಹುತೇಕರನ್ನು ಹೊರದೂಡಿದೆ.

ಮನರೇಗಾ ಮತ್ತು ರಾಜ್ಯ ಗ್ರಾಮೀಣ ಜೀವನಾಂಶ ಮಿಷನ್‌ಗಳು ಸಹ ಬುಡಕಟ್ಟು ಜನರ ವಲಸೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಈ ಕರಡು ಡಾಕ್ಯುಮೆಂಟ್ ಹೇಳುತ್ತಿದೆ.

ಈ ನೀತಿಯು ಉದ್ಯೋಗದಾತರು ತಮ್ಮ ಮೌಲ್ಯ ಸರಪಳಿಗಳ ಬಗ್ಗೆ ಪಾರದರ್ಶಕವಾಗಿರಬೇಕು, ವಲಸೆ ಕಾರ್ಮಿಕರೊಡನೆ ಕೆಲಸದ ಕಾಂಟ್ರಾಕ್ಟ್ ಮಾಡಿಕೊಳ್ಳಬೇಕು ಮತ್ತು ಕೈ ಭಿಕ್ಷೆ / ನಗದು ವರ್ಗಾವಣೆ ಬದಲು ಹಕ್ಕು ಆಧಾರಿತ ನಿಲುವು ತಾಳಬೇಕು ಎಂದು ಹೇಳಿದೆ. ಇದು ಆಲಿಸುವುದಕ್ಕೆ ಬಹಳ ಇಂಪಾಗಿದೆ.

ಆದರೆ ವಲಸೆ ಕಾರ್ಮಿಕರ ದುರಂತಕ್ಕೆ ಮೂಲ ಕಾರಣಗಳನ್ನು ಗುರುತಿಸಿರುವ ನೀತಿ ಆಯೋಗದ ಈ ರಾಷ್ಟ್ರೀಯ ನೀತಿ ಡಾಕ್ಯೂಮೆಂಟ್ ಕೇವಲ ವಲಸೆ ಕಾರ್ಮಿಕರ ಮತ ಚಲಾವಣೆ ಬಗ್ಗೆ ಮಾತ್ರ ಪ್ರಸ್ತಾಪಿಸಿದೆ! ಇಷ್ಟೆಲ್ಲಾ ಆದ ಮೇಲೆ, ವಲಸೆ ಕಾರ್ಮಿಕರು ವಿದ್ಯುನ್ಮಾನದ ಮೂಲಕ ರಾಜಕೀಯವಾಗಿ ಸಬಲರಾಗುವುದನ್ನು ವಿರೋಧಿಸುವ ಧೈರ್ಯ ಯಾರಿಗಿರುತ್ತದೆ? ಮಿಕ್ಕ ಕಾರ್ಯಗಳನ್ನು `ಜಿಯೋ’ಗೆ ನಿರ್ವಹಿಸಲು ಬಿಡಲಾಗಿದೆ.

ಹೊಮ್ಮಿರುವ ಕಾರ್ಯಭಾರಗಳು:

ಕಾರ್ಮಿಕ ಚಳುವಳಿಯು ವಲಸೆ ಕಾರ್ಮಿಕರ ಸಂಕಷ್ಟ ಪರಿಸ್ಥಿತಿಯೊಡನೆ ಮೋದಿ ಸರ್ಕಾರಕ್ಕೆ ಚೆಲ್ಲಾಟವಾಡಲು ಬಿಡಬಾರದು. ವಲಸೆ ಕಾರ್ಮಿಕರ ವಿಷಯವನ್ನು ಒಂದು ವಸ್ತುನಿಷ್ಠ ಮಾರ್ಗದಲ್ಲಿ ಕೊಂಡೊಯ್ಯಲು ಕಾರ್ಮಿಕ ವರ್ಗವು ತಕ್ಷಣದಲ್ಲಿ ಪರಿಣಾಮಕಾರಿಯಾಗಿ ಮಧ್ಯ ಪ್ರವೇಶ ಮಾಡಬೇಕು.

ಅಂತರ-ರಾಜ್ಯ ವಲಸೆ ಕಾರ್ಮಿಕರ ಕೆಳ ಕಾಣಿಸಿದ ಬೇಡಿಕೆಗಳನ್ನು ಕಾರ್ಮಿಕ ಸಂಘಟನಾ ಚಳುವಳಿಯು ತಕ್ಷಣದಲ್ಲಿ ಕೈಗೆತ್ತಿಕೊಳ್ಳಬೇಕು:

  1. ವಲಸೆ ಕಾರ್ಮಿಕರ ರಾಷ್ಟ್ರೀಯ ನೀತಿ ರೂಪಿಸುವ ಕುರಿತು ಕೇಂದ್ರ ಕಾರ್ಮಿಕ ಸಚಿವಾಲಯವು ಕಾರ್ಮಿಕ ಸಂಘಟನೆಗಳೊಡನೆ ಚರ್ಚಿಸುವುದು.
  2. ಅಂತರ-ರಾಜ್ಯ ವಲಸೆ ಕಾರ್ಮಿಕ (ನಿಯಂತ್ರಣ ಮತ್ತು ಉದ್ಯೋಗ ಮತ್ತು ಸೇವಾ ನಿಯಮಾವಳಿಗಳು) ಕಾಯಿದೆ 1979 ಅನ್ನು ಪುನರ್ ಜಾರಿ ಮಾಡುವುದು.
  3. ಮೂಲ ರಾಜ್ಯ ಮತ್ತು ತಲುಪುದಾಣ ರಾಜ್ಯ ಸರ್ಕಾರಗಳೆರಡೂ ಸಹ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು.
  4. ಸಂಸತ್ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ವಲಸೆ ಕಾರ್ಮಿಕರು ಮತ ಚಲಾಯಿಸಲು ಅನುವಾಗುವ ಕುರಿತು ಚುನಾವಣಾ ಆಯೋಗವು ಸರ್ವ ಪಕ್ಷಗಳ ಸಭೆ ಕರೆಯಬೇಕು.

ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಈ ಬೇಡಿಕೆಗಳನ್ನು ಮುಂದಕ್ಕೆ ಒಯ್ಯಲು ಸಹ ಕಾರ್ಮಿಕ ಸಂಘಟನೆಗಳು ಪರಿಣಾಮಕಾರಿ ಮಧ್ಯಪ್ರವೇಶ ಮಾಡಬೇಕು ಮತ್ತು ಮೂಲ ರಾಜ್ಯ ಹಾಗೂ ತಲುಪುದಾಣ ರಾಜ್ಯಗಳಲ್ಲಿ ವಲಸೆ ಕಾರ್ಮಿಕರನ್ನು ಸಂಘಟಿಸಲು ಮುಂದಾಗಬೇಕು.

ಅನು: ಶೃಂ.ಶಾ.ನಾ

Donate Janashakthi Media

Leave a Reply

Your email address will not be published. Required fields are marked *