ಕಾರ್ಲ್‌ ಮಾರ್ಕ್ಸ್‌ ಹುಟ್ಟಿದ ದಿನ : ಮಾರ್ಕ್ಸ್‌ ಅವರ ಪ್ರಧಾನ ಕೊಡುಗೆಗಳು

ಜಿ ಎನ್‌ ನಾಗರಾಜ್

ಮಾರ್ಕ್ಸ್‌ರ ಹುಟ್ಟುಹಬ್ಬ ಇಂದು. ಪ್ರಜಾಪ್ರಭುತ್ವದ ವಿರೂಪದ ಸಾಧ್ಯತೆ, ಅದನ್ನು ಅತ್ಯಂತ ವಿಸ್ತಾರವಾಗಿಸುವ ತುರ್ತು, ಜ್ಞಾನದ ಅಖಂಡತೆ, ಸಮಗ್ರತೆ, ಅದನ್ನು ತುಂಡು ತುಂಡು ಮಾಡುವ ಹುನ್ನಾರ, ಅದರಿಂದ ಉಂಟಾಗುವ ವ್ಯಕ್ತಿತ್ವದ ವಿಘಟನೆ , ಪ್ರಜಾಪ್ರಭುತ್ವದ ವಿಕಾರ. ಜ್ಞಾನ ಮಾತ್ತು ಕ್ರಿಯೆಯ ನಿರಂತರ ಐಕ್ಯತೆ , ಕ್ರಿಯೆಯ ಪ್ರಾಧಾನ್ಯತೆಯನ್ನು ಸಾಧಿಸುವ ಜನಮುಖಿ ತತ್ವಶಾಸ್ತ್ರ, ಸಮಾಜದ ವಿಷಮ ಅಸಮ ರಚನೆಯ ಆಳವಾದ ಅರಿವು, ಶೋಷಣೆ, ದಮನಗಳ ಮೂಲಚೂಲಗಳ ಶೋಧಿಸಿದ ಅರ್ಥಶಾಸ್ತ್ರ, ಸಮಾಜದ ವಿಷಮ ರಚನೆಯನ್ನು ಬೇಧಿಸುವ ಹೊಸ ಸಮಾಜವನ್ನು ಕಟ್ಟುವ ಕ್ರಾಂತಿಕಾರಿ ಇಂಜನಿಯರಿಂಗ್ , ಜಗತ್ತಿನ ಕೋಟ್ಯಾಂತರ ಜನಕ್ಕೆ ಸಂಪೂರ್ಣ ಉದ್ಯೋಗ, ಸಾಂಸ್ಕೃತಿಕ , ವೈಜ್ಞಾನಿಕ ಔನ್ನತ್ಯ, ವ್ಯಕ್ತಿತ್ವದ ನಿರಂಕುಶ ವಿಕಸನದಿಂದ ಕೂಡಿದ ಹೊಸ ಮಾನವನ, ಹೊಸ ಜಗತ್ತಿನ ಹಿರಿಗನಸು ಇವು ನಾವೆಲ್ಲ ನೆನಪಿಸಿಕೊಳ್ಳಬೇಕಾದ ಮಾರ್ಕ್ಸ್‌ರವರ ಪ್ರಧಾನ ಕೊಡುಗೆಗಳು.

ಇಡೀ ಮಾನವ ಸಮಾಜವನ್ನು – ಕ್ರಾಂತಿಕಾರಿ ಬದಲಾವಣೆ, ರಾಜಕೀಯ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಮನಶ್ಶಾಸ್ತ್ರ, ಗಣಿತ, ವಿಜ್ಞಾನ , ಸಾಹಿತ್ಯ, ಕಲೆ, ಸಿನಿಮಾ ಮೊದಲಾದ ಅದರ ಎಲ್ಲ ಆಯಾಮಗಳಲ್ಲಿ ಪ್ರಭಾವಿಸಿದ ಮಾರ್ಕ್ಸ್‌ರವರಂತಹ ಅಸಾಮಾನ್ಯ ಪ್ರತಿಭೆಯನ್ನು ವಿಶ್ವ ಮರೆಯಲಾಗದು. ಮರೆಯಬೇಕೆಂದವರೂ ಅನಿವಾರ್ಯವಾಗಿ ಮತ್ತೆ ಮತ್ತೆ ನೆನೆಸಿಕೊಳ್ಳಲೇಬೇಕಾಗಿದೆ. ಅವರ ನೆನಪನ್ನು ಅಳಿಸಿ ಹಾಕಲೆಂದೇ ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಸಾಹಿತ್ಯ, ರಾಜಕೀಯ ಶಾಸ್ತ್ರಗಳಲ್ಲಿ ಹೊಸ ಹೊಸ ಮಾರ್ಕ್ಸ್‌ವಾದ ವಿರೋಧಿ ಸಿದ್ಧಾಂತಗಳನ್ನು ನೂರಾರು ಮಹಾ ಪ್ರಾಧ್ಯಾಪಕರುಗಳು ಶ್ರಮಿಸಿದ್ದಾರೆ, ಇನ್ನೂ ಶ್ರಮಿಸುತ್ತಿದ್ದಾರೆ. ಅವರ ಪುಸ್ತಕಗಳು ಪುಸ್ತಕ ಭಂಡಾರಗಳಲ್ಲಿ ಕಣ್ಣಿಗೆ ಬೀಳಬಾರದೆಂದು, ಅವರ ಹೆಸರು ಪತ್ರಿಕೆಗಳಲ್ಲಿ ಕಾಣಬಾರದೆಂದು ವಿಶ್ವದಾದ್ಯಂತ ಸೆನ್ಸಾರ್‌ಗಳು ಕುತಂತ್ರಗಳು ನಡೆಯುತ್ತಾ ಇವೆ. ಆದರೂ ಮಾರ್ಕ್ಸ್‌ವಾದ ತನ್ನ ಒಳಗಿನ ಪ್ರಖರ ವೈಜ್ಞಾನಿಕತೆ, ವೈಚಾರಿಕತೆಯಿಂದ ಹಬ್ಬುತ್ತಲೇ ಇದೆ.

ತತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ, ವಿಜ್ಞಾನ,ಸಾಹಿತ್ಯ,ಕಲೆ, ಹೀಗೆ ಮೇಲೆ ಹೇಳಿದ ಎಲ್ಲ ಜ್ಞಾನ ವಿಭಾಗಗಳನ್ನೂ ಒಗ್ಗೂಡಿಸಿ ಐಕ್ಯಗೊಳಿಸಿ ಅದಕ್ಕೊಂದು ಹೊಸ ಹೊಳಪನ್ನು, ವಿಶ್ವವನ್ನು ಅರಿಯುವ ಪ್ರಖರ ಸಾಮರ್ಥ್ಯವನ್ನು ಮಾರ್ಕ್ಸ್‌ – ಎಂಗೆಲ್ಸ್‌ ರವರು ನೀಡಿದರು. ಇಂತಹ ಪ್ರಖರತೆಯ ಮೂಲ ಕಾರಣ ಮತ್ತು ಅಡಿಪಾಯವೇ ಮಾರ್ಕ್ಸ್ ಮತ್ತು ಎಂಗೆಲ್ಸ್‌‌ರವರ ನಿರಂತರ ಅಧ್ಯಯನ , ವೈವಿಧ್ಯಮಯವಾದ ಹತ್ತಾರು ಸಾವಿರ ಗ್ರಂಥಗಳ, ಪ್ರಬಂಧಗಳ ಅಧ್ಯಯನ ಮಾತ್ರವಲ್ಲದೆ ನಿರಂತರವಾದ ಕ್ರಿಯಾಶೀಲತೆ.

ಇದನ್ನೂ ಓದಿ: ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ

1848 ರಲ್ಲಿ ಯುರೊಪಿನ ಹಲವು ದೇಶಗಳಲ್ಲಿ ವ್ಯಾಪಿಸಿದ ಕ್ರಾಂತಿಗಳಲ್ಲಿ ನೇರವಾಗಿ ಭಾಗವಹಿಸಿದರು. ಕಮ್ಯುನಿಸ್ಟ್ ಲೀಗ್ ‌ನ ಭಾಗವಾದರು. ಅದಕ್ಕೊಂದು ಹೊಸ ವೈಚಾರಿಕತೆಯನ್ನು, ಹೊಸ ರೂಪವನ್ನು ನೀಡಿದರು. ಸ್ವತಃ ವಿಶ್ವದ ಮೊತ್ತ ಮೊದಲ ಕಾರ್ಮಿಕ ಅಂತರರಾಷ್ಟ್ರೀಯವನ್ನು ಕಟ್ಟಿದರು. ಕ್ರಾಂತಿಕಾರಿ ವೈಚಾರಿಕತೆ ಮತ್ತು ಕಾರ್ಮಿಕ ಚಳುವಳಿಯನ್ನು ವಿಶ್ವಾದ್ಯಂತ ಹಬ್ಬಿಸಲು ಶ್ರಮಿಸಿದರು. ಕಾರ್ಮಿಕರನ್ನು, ಜನರನ್ನು ತಪ್ಪುದಾರಿಗೆಳೆಯುತ್ತಿದ್ದ, ವೈಜ್ಞಾನಿಕ ಸಿದ್ಧಾಂತದ ವಿರುದ್ಧವಾದ ಎಲ್ಲ ವಿಚಾರಗಳ ವಿರುದ್ಧ ಹೋರಾಡುತ್ತಾ ಮಾರ್ಕ್ಸ್‌ವಾದವನ್ನು ರೂಪಿಸಿದರು‌. ಹೀಗೆ ತತ್ವ ಮತ್ತು ಕ್ರಿಯೆಯ ಏಕತ್ವವೇ ಮಾರ್ಕ್ಸ್‌ವಾದದ ಅಡಿಪಾಯವಾಯಿತು.

ಬಂಡವಾಳಶಾಹಿಗಳು ಒಂದೊಂದು ರೀತಿಯ ಜ್ಞಾನವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುವ ವಿಧಾನವನ್ನು ಈ ಸಮಾಜದ ಮೇಲೆ ಹೇರಿದ್ದಾರೆ. ವಿಜ್ಞಾನ ಬೇರೆ, ಸಮಾಜ ವಿಜ್ಞಾನ ಬೇರೆ, ಸಾಹಿತ್ಯವಂತೂ ಇನ್ನೂ ಬೇರೆ. ವಿಜ್ಞಾನಿಗಳಿಗೆ ತಾವು ಬೆಳೆದು ಬಂದ ಸಮಾಜ, ಅದರ ಇತಿಹಾಸದ ಅರಿವೇ ಇಲ್ಲದಂತಾಗಿದೆ. ಇದರಿಂದಾಗಿ ವಿಜ್ಞಾನ ತಂತ್ರಜ್ಞಾನ ಪದವೀಧರರು ವಿಶ್ವಾದ್ಯಂತ ಫ್ಯಾಸಿಸಮ್ ಬೆಂಬಲಿಗರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಮೋದಿಯ ಮಬ್ಬಕ್ತರಾಗಿದ್ದಾರೆ. ವಿಜ್ಞಾನಗಳ ಒಳಗೂ ವಿಭಜನೆ. ಹೀಗಾಗಿ ಜ್ಞಾನ ತನ್ನ ಪ್ರಖರತೆಯ , ಸರ್ವವ್ಯಾಪಿತ್ವಕ್ಕೆ ಆಧಾರವಾದ ಸಮಗ್ರತೆಯನ್ನು ಕಳೆದುಕೊಂಡು ವಿಭಜನೆಗೆ ತುತ್ತಾಗಿದೆ. ಪರಿಣಾಮವಾಗಿ ಮನುಷ್ಯರ ವ್ಯಕ್ತಿತ್ವವೇ ವಿಭಜನೆಗೆ ಒಳಗಾಗಿದೆ. ಒಡೆದ ಕನ್ನಡಿಯಂತಾಗಿದೆ. ಅದರಿಂದಾಗಿ ಮಾನವ ಸಮಾಜವನ್ನು ವಿರೂಪಗೊಳಿಸಿದ ಮೂಲಭೂತ ಕಾರಣ ಶೋಷಣೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು , ಈ ಶೋಷಣೆಯನ್ನು ದಿನನಿತ್ಯ ಅನುಭವಿಸುತ್ತಾ ಸಂಕಟಪಡುವವರಿಗೂ ದೊಡ್ಡ ಅಡ್ಡಿಯನ್ನು ಉಂಟುಮಾಡಿದೆ.

ಡಾರ್ವಿನ್ನರ ವಿಕಾಸವಾದ, ನ್ಯೂಟನ್ನನ ನಿಯಮಗಳು, ಗುರುತ್ವಾಕರ್ಷಣೆಯ ತತ್ವ, ಐನ್‌ಸ್ಟೀನರ ಸಾಪೇಕ್ಷತಾವಾದಗಳು ಹೇಗೆ ಜಗತ್ತಿನ ಎಲ್ಲರೂ ಅಧ್ಯಯನ ಮಾಡುತ್ತಿದ್ದಾರೋ, ಅವುಗಳನ್ನು ತಮ್ಮದೇ ಸಂಶೋಧನೆಗಳ ಮುಂದುವರೆಸಿ ಬೆಳೆಸುತ್ತಿರುವರೋ ಅದೇ ರೀತಿ ಮಾರ್ಕ್ಸ್‌ರವರು ಎಂಗೆಲ್ಸ್‌ರವರ ಜೊತೆಗೂಡಿ ರೂಪಿಸಿದ ಮಾರ್ಕ್ಸ್‌ವಾದವನ್ನೂ ಜಗತ್ತಿನೆಲ್ಲ ಜನರು ಅಧ್ಯಯನ ಮಾಡಲೇಬೇಕಾಗುತ್ತದೆ. ಅದರ ಮೂಲಕ ಜಗತ್ತನ್ನು ಶೋಷಣೆ ರಹಿತವಾದ ಹೊಸ ಸಮಾಜವನ್ನು ರೂಪಿಸುತ್ತಾರೆ. ಮನುಷ್ಯರ ವ್ಯಕ್ತಿತ್ವದ ಬೆಳವಣಿಗೆಗೆ ಕಲ್ಲುಬಂಡೆಯಂತೆ ಅಡ್ಡಿಯಾಗಿರುವ ಸಾಮಾಜಿಕ,ಆರ್ಥಿಕ ಅಡ್ಡಿಗಳನ್ನೂ ತೊಡೆದು ಸ್ವಾರ್ಥ, ಅಸೂಯೆ, ದುರಾಸೆಗಳನ್ನು ದೂರ ಇಟ್ಟ ಹೊಸ ಮಾನವರನ್ನು ರೂಪಿಸುತ್ತದೆ.

ಇದನ್ನೂ ನೋಡಿ: english gramer Janashakthi Media

ಮಾರ್ಕ್ಸ್, ಎಂಗೆಲ್ಸ್ ಪದೇ ಪದೇ ಹೇಳಿದಂತೆ ಮಾರ್ಕ್ಸ್‌ವಾದ ರೂಪುಗೊಂಡದ್ದು ಇಡೀ ಮಾನವ ಸಮಾಜದ ಜ್ಞಾನ ಸಂಪಾದನೆ ಮತ್ತು ಅದನ್ನು ವಾಸ್ತವಗೊಳಿಸುವ ಕ್ರಿಯೆಗಳ ಹೆದ್ದಾರಿಯಲ್ಲಿ. ಅದನ್ನು ಆಯಾ ದೇಶಗಳ ವಿಶಿಷ್ಟ ಪರಿಸ್ಥಿತಿ, ಸಮಾಜಕ್ಕೆ ಅನ್ವಯಿಸಿ ಕ್ರಿಯೆಗಿಳಿಸಬೇಕು. ಬೃಹತ್ ಅಣೆಕಟ್ಟುಗಳನ್ನು ಕಟ್ಟುವ ಮೂಲಭೂತ ತತ್ವಗಳು ಒಂದೇ ಇದ್ದರೂ ಕನ್ನಂಬಾಡಿ, ತುಂಗಭದ್ರಾ , ಭಾಕ್ರಾ‌ನಂಗಲ್ ಅಣೆಕಟ್ಟುಗಳನ್ನು ಕಟ್ಟಿದ ವಿಧಾನ, ರೀತಿ ಒಂದೇ ಅಲ್ಲ. ಅದೇ ರೀತಿ ವೈದ್ಯಕೀಯ ವಿಜ್ಞಾನ , ಒಂದು ರೋಗದ ಮೂಲಭೂತ ಕಾರಣ, ಚಿಕಿತ್ಸಾ ವಿಧಾನ ಒಂದೇ ಆದರೂ ಅದನ್ನು ವಿವಿಧ ದೇಶಗಳ ಪ್ರದೇಶಗಳ ಮನುಷ್ಯರ ದೈಹಿಕ ಬೆಳವಣಿಗೆ, ದಾರ್ಢ್ಯತೆ, ವಾತಾವರಣ ಇವುಗಳಿಗೆ ಅನ್ವಯಿಸಿ ಮಾರ್ಪಾಡುಗಳನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ. ಹೀಗೆ ಅನ್ವಯಿಸುವ ದಾರಿಯಲ್ಲಿ ಆಯಾ ತಂತ್ರಜ್ಞಾನ, ವಿಜ್ಞಾನಗಳು ಬೆಳೆಯುತ್ತವೆ.

ಹಾಗೆಯೇ ಮಾರ್ಕ್ಸ್‌ವಾದವನ್ನೂ ಭಾರತಕ್ಕೆ ,ಕರ್ನಾಟಕಕ್ಕೆ, ವಿವಿಧ ಪ್ರದೇಶಗಳ ವಿಶಿಷ್ಟ ಪರಿಸ್ಥಿತಿಗೆ ಅನ್ವಯಿಸಿ ವಾಸ್ತವಗೊಳಿಸಬೇಕಾಗುತ್ತದೆ, ಬೆಳೆಸಬೇಕಾಗುತ್ತದೆ.
ಮಾರ್ಕ್ಸ್‌ವಾದದ ಮೂಲಭೂತ ಅರಿವನ್ನು- ತತ್ವಶಾಸ್ತ್ರ, ಅರ್ಥಶಾಸ್ತ್ರ, ಕ್ರಾಂತಿಕಾರಿ ರಾಜಕೀಯದ ಅರಿವನ್ನು ಭಾರತದ ತತ್ವಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ರಾಜಕೀಯದ ಅಧ್ಯಯನದ ಜೊತೆಗೆ ಮೇಳೈಸಬೇಕಾಗಿದೆ. ಇಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಇಲ್ಲಿಯ ಜನರಿಗೆ ವಿವರಿಸಿ ಜನರನ್ನು ಮಾರ್ಕ್ಸ್‌ವಾದದತ್ತ, ಕ್ರಾಂತಿಕಾರಿ ಬದಲಾವಣೆಯತ್ತ ಸೆಳೆಯಬೇಕಾಗಿದೆ. ಲೆನಿನ್, ಮಾವೋ, ಹೊಚಿಮಿನ್, ಕ್ಯಾಸ್ಟ್ರೋ ರಂತಹ ನಾಯಕರು ಮಹಾನ್ ಆಗಿದ್ದು, ಕೋಟ್ಯಾಂತರ ಜನರನ್ನು ಶೋಷಣೆಯಿಂದ ವಿಮೋಚನೆಗೊಳಿಸಿದ್ದು ಇದೇ ದಾರಿಯಲ್ಲಿ.

ಮಾರ್ಕ್ಸ್‌ರವರು ಹುಟ್ಟಿದ ಈ ದಿನ ಈ ಮುಖ್ಯ ಅಂಶಗಳನ್ನು ಮನಸ್ಸಿಗೆ ತಂದುಕೊಳ್ಳೋಣ. ಮಾರ್ಕ್ಸ್‌ವಾದ ಮತ್ತು ಭಾರತ,ಕರ್ನಾಟಕದ ಪರಿಸ್ಥಿತಿಗಳ ಅಧ್ಯಯನವನ್ನು ಬೆಸೆಯೋಣ.

Donate Janashakthi Media

Leave a Reply

Your email address will not be published. Required fields are marked *