ಕಾರ್ಕಳ: ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಪಡುಗಿರಿಗೆ ಹೋಗುವ ರಸ್ತೆಗೆ ನಾಥೂರಾಮ್ ಗೋಡ್ಸೆ ಎಂದು ನಾಮಫಲಕ ಅಳವಡಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಎಚ್ಚೆತ್ತಕೊಂಡ ಕಾರ್ಕಳ ಪೊಲೀಸರು ಬೋಳ ಗ್ರಾಮ ಪಂಚಾಯತಿ ಪಿಡಿಒ ಅವರುಗಳ ಸಮ್ಮುಖದಲ್ಲಿ ನಾಮಫಲಕವನ್ನು ತೆರವುಗೊಳಿಸಿದ್ದಾರೆ.
ಮೂರು ದಿನಗಳ ಹಿಂದೆ ಅನಾಮಧೇಯ ವ್ಯಕ್ತಿಗಳು ರಾತ್ರೋರಾತ್ರಿ ವಿವಾದಾತ್ಮಕ ನಾಮಫಲಕವನ್ನು ಅಳವಡಿಸಿದ್ದರೆನ್ನಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೊಗೀಶ್ ಇನ್ನಾ ನೇತೃತ್ವದಲ್ಲಿ ಬೋಳ ಪಂಚಾಯತ್ ಕಚೇರಿಗೆ ಧಾವಿಸಿ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿದರು.
ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯ ಹೆಸರು ರಸ್ತೆಗೆ ಇಡುವ ಮೂಲಕ ದೇಶದ್ರೋಹಿಗಳನ್ನು ವೈಭವೀಕರಿಸಲಾಗುತ್ತಿದೆ ಎಂದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ದೇಶಭಕ್ತನನ್ನು ಕೊಂದವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ – ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಳ ಪಂಚಾಯತಿ ಪಿಡಿಒ “ಇದು ಖಾಸಗಿಯವರು ಹಾಕಿದ ನಾಮಫಲಕ. ಪಂಚಾಯತಿಯು ಈ ಹೆಸರಿಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪಂಚಾಯತ್ ಈ ನಾಮಫಲಕ ಹಾಕಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಭೇಟಿ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಶಾಸಕ, ಸಚಿವ ವಿ.ಸುನೀಲ್ ಕುಮಾರ್, ‘ಇದು ಪಂಚಾಯತ್ ನಿಂದ ಅಧಿಕೃತವಾಗಿ ಹಾಕಲಾದ ನಾಮಫಲಕವಲ್ಲ. ಖಾಸಗಿಯವರು ಹಾಕಿದ್ದಾರೆ. ಈ ಬಗ್ಗೆ ಪಂಚಾಯತ್ ನವರು ಪರಿಶೀಲಿಸಿ ಅಧಿಕೃತ ವಸ್ತುಸ್ಥಿತಿಯನ್ನು ಸಾರ್ವಜನಿಕರ ಮುಂದಿಡುತ್ತಾರೆ’ ಎಂದರು.
ಹಿರಿಯ ಪರ್ತಕರ್ತರಾದ ದಿನೇಶ್ ಅಮಿತ್ ಮಟ್ಟು ಅವರು ಈ ಕುರಿತು ಪೋಸ್ಟ್ ಮಾಡಿದ್ದು, “ನಮ್ಮ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿ ಇಂತಹದ್ದೊಂದು ರಸ್ತೆ ಫಲಕ ಬಿದ್ದಿದೆ. ಇದಕ್ಕೆ ಸಚಿವರ ಒಪ್ಪಿಗೆ ಇಲ್ಲ ಎಂದಾದರೆ, ಅವರೇ ಮುಂದೆ ನಿಂತು ಇದನ್ನು ಒಡೆದು ಹಾಕಿ, ಸಂಬಂಧಿತ ದುರುಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಬೇಕು. (ಅಚ್ಚರಿಯ ಸಂಗತಿ ಎಂದರೆ ಈ ಫಲಕವನ್ನು ವಿರೋಧಿಸಿ ಚಿತ್ರವನ್ನು ಕಳಿಸಿದವರು ಸ್ಥಳೀಯ ಬಿಜೆಪಿ ಕಾರ್ಯಕರ್ತರು)” ಎಂದಿದ್ದಾರೆ.
ಯುವ ಬರಹಗಾರ ಚರಣ್ ಐವರ್ನಾಡು ಅವರು ಘಟನೆಯನ್ನು ಖಂಡಿಸಿದ್ದು, “ಸಚಿವ ಸುನಿಲ್ ಕುಮಾರ್ ಅವರೇ, ಇದನ್ನು ಕಿತ್ತು ನಿಮ್ಮ ಅಪ್ಪ ಇಲ್ಲವೇ ಅಮ್ಮನ ಹೆಸರನ್ನೇ ರಸ್ತೆಗೆ ಇಡಿ. ಅದಕ್ಕೆ ಒಂದು ಮರ್ಯಾದೆ ಇದೆ! ಶ್ರಮಿಕರ ಹೆಸರು ರಸ್ತೆಗೆ ಇರಲಿ. ಇದು ತುಳುನಾಡಿನ ಜನಕ್ಕೆ ಮಾಡಿದ ಅವಮಾನ. ಗಾಂಧಿಯನ್ನು ತುಳುನಾಡು ಗೌರವಿಸಿದ ರೀತಿ ನಿಮಗೆ ಗೊತ್ತಿಲ್ಲ! ಗೊತ್ತಿದ್ದರೆ ಇಂದೇ ಪಿಕ್ಕಾಸು ತೆಗೊಂಡು ಇದನ್ನು ಜರಿದು ಹಾಕಬೇಕಿತ್ತು” ಎಂದಿದ್ದಾರೆ.