ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನೇತೃತ್ವದ ಸರ್ಕಾರವು ಅಲ್ಲಿನ ಸರಣಿ ಹತ್ಯೆಗಳು, ಹಿಂಸಾಕಾಂಡವನ್ನು ತಡೆಯಲು ಮತ್ತು ಶಾಂತಿ, ‘ಸೌಹಾರ್ದತೆ’ ಯನ್ನು ನೆಲೆಗೊಳಿಸಲು ಮಾಡುತ್ತಿರುವ ಕಸರತ್ತುಗಳು ‘ಊರು ಕೊಳ್ಳೆ ಹೋದ ಮೇಲೆ ಗೌಡ ದಿಡ್ಡಿ ಬಾಗಿಲು ಹಾಕಿಸಿದ’ ಎನ್ನುವ ಗಾದೆ ಮಾತನ್ನು ನೆನಪಿಸುತ್ತವೆ. ಕಾಂಗ್ರೆಸ್ ಸರ್ಕಾರ ತನ್ನ ಎರಡು ವರ್ಷಗಳ ಸಾಧನೆಯ ಸಮಾವೇಶ ನಡೆಸುತ್ತಿರುವಾಗಲೇ ಕರಾವಳಿಯಲ್ಲಿ ಕೋಮು ದ್ವೇಷದ ಕಿಚ್ಚು ಹೊತ್ತಿಸಿ ಸಂಘಪರಿವಾರ ಸವಾಲು ಒಡ್ಡಿತು. ಕಗ್ಗೊಲೆಗಳ ಸರಣಿಯನ್ನೇ ಆರಂಭಿಸಿತು. ಮುಖ್ಯಮಂತ್ರಿ, ಸಂಪುಟದ ಕೆಲವು ಸಚಿವರು ಮತ್ತು ಇತರೆ ಒಂದೆರಡು ನಾಯಕರು ಕೋಮುವಾದಿಗಳ ವಿರುದ್ಧ ಎಷ್ಟೇ ಅಬ್ಬರಿಸಿದರೂ ಕಾಂಗ್ರೆಸ್ ಪಕ್ಷದ ಸೆಕ್ಯುಲರ್ ಬದ್ಧತೆ ಸತ್ವ ಪರೀಕ್ಷೆಗೆ ಒಳಗಾಯಿತು.
-ಎಸ್. ವೈ. ಗುರುಶಾಂತ್
ಕಾಂಗ್ರೆಸ್ ನೇತೃತ್ವದ ಸರ್ಕಾರಿ ಆಡಳಿತ, ಉಸ್ತುವಾರಿ ಸಚಿವರನ್ನೂ ಒಳಗೊಂಡು ಅಲ್ಲಿನ ರಾಜಕೀಯ ನಾಯಕತ್ವದ ನಿಷ್ಕ್ರಿಯತೆ ಹಾಗೂ ವೈಫಲ್ಯಗಳು ಜಗಜ್ಜಾಹೀರಾದವು. ಉನ್ನತ ಮಟ್ಟದಿಂದ ಹಿಡಿದು ಪೊಲೀಸ್ ಇಲಾಖೆ ಮತ್ತು ಆಡಳಿತದ ವರ್ತನೆ, ವಹಿಸಿದ ಕ್ರಮಗಳು ಕಣ್ಣೊರೆಸುವ ಕ್ರಮಗಳಾಗಿದ್ದವು. ಹಿಂಸಾದಾಹಿ ಕೋಮುವಾದಿಗಳೊಂದಿಗೆ ಕಾಂಗ್ರೆಸ್ ಪಕ್ಷದ ಮೃದುತ್ವ, ಶಾಮೀಲುತನ ಗಳು ಸಾರ್ವಜನಿಕರಲ್ಲಿ ಉಂಟು ಮಾಡಿದ ಆಕ್ರೋಶ, ಸಿಪಿಐ(ಎಂ) ಮತ್ತು ಜಾತ್ಯಾತೀತ ಶಕ್ತಿಗಳ ನಿರಂತರ ಒತ್ತಡ, ಸ್ವತಃ ಕಾಂಗ್ರೆಸ್ ಪಕ್ಷವನ್ನು ಸದಾ ಬೆಂಬಲಿಸಿಕೊಂಡು ಬಂದಿದ್ದ ಅಲ್ಪಸಂಖ್ಯಾತರ ಬಹಿರಂಗ ಬಂಡಾಯಗಳ ನಂತರವೇ ಕೆಲವು ಕ್ರಮಗಳಿಗೆ ಸರಕಾರ ಮುಂದಾಯಿತು ಎನ್ನುವುದನ್ನು ಗಮನಿಸಬೇಕು.
ಸೆಕ್ಯುಲರ್ ಎಂದು ಹೇಳಿಕೊಳ್ಳುವ ಹಲವು ಪಕ್ಷಗಳ ಬಗ್ಗೆ ಮತ್ತೆ ಎದ್ದು ಬರುವ ಪ್ರಶ್ನೆ ಎಂದರೆ ಸೆಕ್ಯುಲರ್ ಎನ್ನುವುದು ಬೈ ಕನ್ವಿಕ್ಷನ್ ಆರ್ ಕನ್ವೀನಿಯಂಟ್ (-ಬದ್ಧತೆಯಿಂದಲೋ ಅಥವಾ ಸಂದರ್ಭ ಸಾಧಕದಿಂದಲೋ) ಎನ್ನುವುದು ಕಾಂಗ್ರೆಸ್ಸಿಗೂ ಹೆಚ್ಚಾಗಿ ಅನ್ವಯವಾಗುತ್ತದೆ. ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳ ಧ್ವನಿಯನ್ನು ಅಡಗಿಸುತ್ತೇವೆ ಎಂದು ಈಗ ಕ್ರಮ ಕೈಗೊಳ್ಳುತ್ತಿರುವ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಈ ಅಂಶಗಳನ್ನು ಆಳವಾಗಿ ವಿಮರ್ಶಿಸಿಕೊಳ್ಳಬೇಕಾಗುತ್ತದೆ.
ಕೆಲವು ಕ್ರಮಗಳು
ಕೋಮು ದ್ವೇಷದ ಹಿಂಸಕಾಂಡ ತಾರಕಕ್ಕೆ ಏರುತ್ತಿದೆ ಎನ್ನುವಾಗ ಆಡಳಿತವನ್ನು ಬಿಗಿಗೊಳಿಸುವ ಕ್ರಮಗಳನ್ನು ಕೈಗೊಂಡಿರುವುದು ಸಹ ಮುಖ್ಯ ಇವೆ. ಕೋಮುವಾದಿಗಳ ಅಟ್ಟಹಾಸಕ್ಕೆ ಅವಕಾಶ ನೀಡಿ ಸಹಕರಿಸಿದ ಉನ್ನತ ಸ್ಥಾನಗಳಲ್ಲಿ ಇದ್ದ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸ ಬೇಕಾಗಿ ಬಂತು. ಕೆಲ ಪೇದೆಗಳನ್ನೂ ವರ್ಗಾಯಿಸಬೇಕಾಯ್ತು. ಅಂದರೆ ಸಂಘಪರಿವಾರಕ್ಕೆ ಸಹಕರಿಸುತ್ತಿದ್ದ ಪೊಲೀಸರ ಬಗ್ಗೆ ಮಾಹಿತಿ ಇತ್ತು ಎಂದಾಯ್ತು. ಅಸಹಾಯಕತೆ ಮತ್ತು ಅಸಮರ್ಥತೆಯನ್ನು ಪ್ರದರ್ಶಿಸುತ್ತಿದ್ದ ಗೃಹ ಮಂತ್ರಿಗಳು ಸ್ವಲ್ಪ ಗಟ್ಟಿದನಿಯಲ್ಲಿ ಮಾತನಾಡ ತೊಡಗಿದರು. ಗೃಹ ಇಲಾಖೆ ದೇಶದಲ್ಲೇ ‘ಪ್ರಥಮ’ ಎನ್ನುವ ಕೋಮು ನಿಗ್ರಹ ಪಡೆಯೊಂದನ್ನು ರಚಿಸಿತು.
ಇದನ್ನೂ ಓದಿ: ಎಂ.ಬಿ. ಪಾಟೀಲರ ಹೇಳಿಕೆ ಒಡೆದಾಳುವ ತಂತ್ರವಲ್ಲದೆ ಮತ್ತೇನೂ ಅಲ್ಲ – ಸಂಯುಕ್ತ ಹೋರಾಟ ಕರ್ನಾಟಕ
ಕೋಮುವಾದಿ ಮತ್ತು ಮತೀಯ ಮೂಲಭೂತವಾದಿ ಶಕ್ತಿಗಳ ಮೇಲೆ ಕ್ರಮ ಜರುಗಿಸುವ ಹೆಜ್ಜೆಯಾಗಿ ಹಲವರನ್ನು ಗಡಿಪಾರು ಮಾಡಿತು, ಎಚ್ಚರಿಸಿತು. ಕೋಮು ದ್ವೇಷ ವಿಸ್ತರಿಸುವ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಮತ್ತು ನಿಯಂತ್ರಣಕ್ಕೆ ಮುಂದಾಯಿತು. ಆಕ್ರೋಶಿತ ಸಾರ್ವಜನಿಕರನ್ನು ಮತ್ತು ಸ್ವಪಕ್ಷೀಯರನ್ನು ಸಾಂತ್ವನ ಗೊಳಿಸಲು ಕೋಮುವಾದಿ ಶಕ್ತಿಗಳ ವಿರುದ್ಧ ಕಠಿಣ ಮಾತುಗಳನ್ನು ಆಡುತ್ತಿರುವ ಶಾಸಕ ಬಿ.ಕೆ. ಹರಿಪ್ರಸಾದ್ ರವರ ಸಮ್ಮುಖದಲ್ಲಿ ‘ಸಮಾನ ಮನಸ್ಕರ’ ಸಭೆ ನಡೆಸಿ ಆಹವಾಲುಗಳನ್ನು ಸ್ವೀಕರಿಸಿತು. ರಾಜ್ಯಸಭೆಯ ಸದಸ್ಯ ನಾಸೀರ್ ಹುಸೇನ್ ರವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯೊಂದು ಕರಾವಳಿಯಲ್ಲಿನ ಕೋಮು ಸ್ಥಿತಿ ಮತ್ತು ಅದನ್ನು ಎದುರಿಸುವ ಕುರಿತಾದಂತೆ ಒಂದು ಬಹು ಶಯಾಮಗಳ ಕಾನ್ಫಿಡೆನ್ಷಿಯಲ್ ವರದಿಯನ್ನು ಕೆಪಿಸಿಸಿಗೆ ಅದ್ಯಕ್ಷರಿಗೆ ನೀಡಿದೆ.
ವಿಪರ್ಯಾಸ
ಕೋಮುವಾದಿ ಮತ್ತು ಮತಿಯ ಮೂಲಭೂತವಾದಿ ವ್ಯಕ್ತಿಗಳ, ಶಕ್ತಿಗಳ ಅಟ್ಟಹಾಸವನ್ನು ಮಟ್ಟ ಹಾಕಲು ಆಡಳಿತಾತ್ಮಕ ಮತ್ತು ರಾಜಕೀಯ, ಸಾಮಾಜಿಕ ಕ್ರಿಯಾಶೀಲ ಕಾರ್ಯ ಯೋಜನೆ ಬಹಳ ಮುಖ್ಯ ಎನ್ನುವುದು ನಿಜ. ಆ ದೆಸೆಯಲ್ಲಿ ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹ. ಆದರೆ ಕಾಂಗ್ರೆಸ್ ಪಕ್ಷದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಚಿಂತನೆಗಳು ಮತ್ತು ಕ್ರಮಗಳ ಅನುಭವಗಳನ್ನು ಗಮನಿಸಿದರೆ ಇವೆಲ್ಲವೂ ಎಷ್ಟು ಕಾಲ ಬಿಗಿಯಾಗಿ ಜಾರಿಯಾಗುತ್ತವೆ ಎನ್ನುವ ಪ್ರಶ್ನೆ ಎದ್ದು ಬರುತ್ತದೆ.

ಸರ್ಕಾರದಲ್ಲಿ ಮುಖ್ಯಸ್ಥಾನಗಳಲ್ಲಿರುವ ಅವರಲ್ಲಿಯೇ ಕೆಲವರು ಕೋಮುವಾದದ ವಿರುದ್ಧವಾಗಿ ಮಾತನಾಡುತ್ತಿದ್ದರೆ ಇನ್ನೂ ಕೆಲವರು ಕಡು ಕೋಮುವಾದಿಗಳ ಬೆನ್ನೆಲುಬಾಗಿರುವ ಪಾಳೇಗಾರಿ ಧರ್ಮಧಾರಿಗಳನ್ನು, ಮತೀಯವಾದಿ, ಸಾಮಾಜಿಕ ನ್ಯಾಯದ ವಿರೋಧಿಗಳನ್ನು ಬೆಂಬಲಿಸುವ, ಅವರ ವಿರುದ್ಧದ ಪ್ರತಿರೋಧಕ್ಕೆ ಸಾಂತ್ವನ ಹೇಳುವ ಕೆಲವರು ಇದ್ದಾರೆ ಎನ್ನುವುದು ಅತ್ಯಂತ ವಿಪರ್ಯಾಸದ ಸ್ಥಿತಿ. ಅಧಿಕಾರ ಕೇಂದ್ರಿತ ರಾಜಕಾರಣದಲ್ಲಿ ಈ ಅಂತರ್ ವೈರುದ್ಯಗಳನ್ನು ನಿವಾರಿಸಿಕೊಳ್ಳದ ಆದರೆ ನಿಭಾಯಿಸಲೇ ಬೇಕಾದ ಒತ್ತಡದಲ್ಲಿರುವ ಕಾಂಗ್ರೆಸ್ ಸರ್ಕಾರ ಎಷ್ಟರಮಟ್ಟಿಗೆ ದೃಢವಾಗಿ ತನ್ನ ಕ್ರಮಗಳನ್ನು ಮುಂದುವರಿಸುತ್ತದೆ ಎನ್ನುವ ಪ್ರಶ್ನೆ, ಸದಾ ಕಾಲ ಇದ್ದದ್ದೇ ಆಗಿದೆ.
ಸೋಗಲಾಡಿತನ
ಸರಕಾರದ ಕ್ರಮಗಳನ್ಮು ಸ್ವಾಗತಿಸುವಾಗಲೇ ಪೊಲೀಸ್ ಇಲಾಖೆ ಬಹು ಎಚ್ಚರದಿಂದ ಹೆಜ್ಜೆ ಇಡಬೇಕಿದೆ. ಶಾಂತಿ, ಸೌಹಾರ್ದತೆಯನ್ನು ಕಾಪಾಡುವ ಶಕ್ತಿಗಳು ಯಾವುವು? ಕದಡುವ ಶಕ್ತಿಗಳು ಯಾವುವು ಎನ್ನುವುದನ್ನು ಸ್ಪಷ್ಟವಾಗಿ ವಿಂಗಡಿಸಿಕೊಳ್ಳ ಬೇಕಿದೆ. ಇಲ್ಲವಾದಲ್ಲಿ ಅವರ ಅತಿರೇಕದ ಕ್ರಮಗಳು ಆತಂಕಕಾರಿ ಮತ್ತು ಅಪಾಯದ ಸೂಚನೆಯನ್ನು ನೀಡುತ್ತವೆ. ಪೊಲೀಸ್ ಇಲಾಖೆಯ ವಿಳಂಬ ಮತ್ತು ವೈಫಲ್ಯಗಳ ಬಗ್ಗೆ ಪ್ರಶ್ನಿಸಿದ ಸಜಿತ್ ಶೆಟ್ಟಿ ಎಂಬ ಸಾಮಾಜಿಕ ಕಾರ್ಯಕರ್ತನಿಗೆ ನೀಡುತ್ತಿರುವ ಕಿರುಕುಳ, ಹಾಕಿರುವ ಬೆದರಿಕೆಗಳು ಕೋಮುವಾದಿ ಶಕ್ತಿಗಳನ್ನು ಜನತೆಯಿಂದ ಪ್ರತ್ಯೇಕಿಸುವ, ದಮನಿಸುವ ಕಾರ್ಯವನ್ನು ದುರ್ಬಲಗೊಳಿಸುತ್ತವೆ.
ಆಡಳಿತ ಶಾಂತಿ ಸೌಹಾರ್ದತೆಗೆ ಬದ್ಧವಾಗಿರುವವರನ್ನೇ ದಮನಿಸಲು ಅಧಿಕಾರದ ದಂಡ ಪ್ರಯೋಗಿಸುತ್ತಿರುವುದು ಖಂಡನೀಯ. ಶಾಂತಿ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ ಮತ್ತು ವಸ್ತುನಿಷ್ಠ ವಿಮರ್ಶಿಸುವ ಶಕ್ತಿಗಳಿಗೆ ಮುಕ್ತ ಅವಕಾಶ ಕಲ್ಪಿಸದೇ, ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಸದಾವಕಾಶ ಎಂದು ಭಾವಿಸದೇ ಅಂತಹ ಶಕ್ತಿಗಳ ದಮನಕ್ಕೆ ಮುಂದಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ. ಹಾಗಾದರೆ ಒಂದು ಸ್ಪಷ್ಟ ರಾಜಕೀಯ, ಆಡಳಿತಾತ್ಮಕ ಸೂಚನೆಗಳನ್ನೇ ನೀಡದೇ ಸರ್ಕಾರ ವರ್ತಿಸುತ್ತಿದೆಯೇ? ಇಂತಹ ನಡೆಗಳು ಆತ್ಮವಿಶ್ವಾಸ, ನಂಬಿಕೆ ಹುಟ್ಟಿಸುವ ಬದಲು ಕರಾವಳಿಯಲ್ಲಿ ಶಾಂತಿ ಕಾಪಾಡುವ ಅದರ ಬದ್ಧತೆಯನ್ನೇ ಪ್ರಶ್ನಿಸುವಂತೆ ಮಾಡುತ್ತವೆ. ಮುಖ್ಯಮಂತ್ರಿ, ಗೃಹ ಸಚಿವರು ಇದರತ್ತ ತೀವ್ರ ಗಮನ ಹರಿಸಬೇಕು, ಇನ್ನೂ ಯಾವುದೂ ಮುಗಿದಿಲ್ಲ ಎಂಬುದನ್ನು ಅರಿತು ಬೆಳವಣಿಗೆಗಳ ಬಗ್ಗೆ ಸತತ ನಿಗಾ ವಹಿಸಬೇಕು.
ಕೆಂಡ-ಮುಚ್ಚಿರುವ ಬೂದಿ
ಕರಾವಳಿಯಲ್ಲಿ ಈಗಿನ ಎಲ್ಲಾ ಕ್ರಮಗಳಿಂದ ಕೊಂಚ ಶಾಂತಿ ನೆಲಸಿದೆ ಎಂಬಂತೆ ಕಂಡರೂ ಅದು ಬೂದಿ ಮುಚ್ಚಿದ ಕೆಂಡವಾಗಿದೆ. ಪೊಲೀಸರ ಕ್ರಮಗಳಿಂದ ಕೆರಳಿ ಕೆಂಡವಾದ ಬಿಜೆಪಿ ಅದರ ನಾಯಕರು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಆಡಳಿತಕ್ಕೆ ಅಡ್ಡಿ ಪಡಿಸಿರುವುದು ಮತ್ತು ಅದನ್ನು ರಾಷ್ಟ್ರ ಮಟ್ಟದ ಪ್ರಶ್ನೆಯೆಂಬಂತೆ ಕೇಂದ್ರ ಸಚಿವರಾದಿಯಾಗಿ ಬಿಂಬಿಸುತ್ತಿರುವುದು ಮುಂಬರುವ ಬೆಳವಣಿಗೆಗಳ ಎಚ್ಚರಿಕೆಯ ಗಂಟೆಯೂ ಆಗಿದೆ.
ಕರಾವಳಿಯಲ್ಲಿ ಫ್ಯಾಶಿಸ್ಟ್ ಮನೋಭಾವದ ಕೋಮುವಾದಿ ಹಾಗೂ ಮತೀಯ ಮೂಲಭೂತವಾದಿ ಶಕ್ತಿಗಳನ್ನು ಎದುರಿಸುವುದು ಅಷ್ಟು ಸಲೀಸಲ್ಲ ಎಂಬುದು ತಿಳಿದ ಸಂಗತಿಯಾಗಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದಿಗಳು ಪರಸ್ಪರ ಪೂರಕ, ಪ್ರೇರಕರಾಗಿಯೇ ಕೆಲಸ ಮಾಡುತ್ತಿವೆ. ಅವುಗಳ ವಿರುದ್ಧದ ಈ ಹೋರಾಟ ದೀರ್ಘವಾದುದು. ಇಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಯ ಸಂಘಟನಾತ್ಮಕ, ರಾಜಕೀಯ ಮತ್ತು ಸೈದ್ಧಾಂತಿಕ ಪ್ರಭಾವ ಮತ್ತು ಒಟ್ಟು ಅದರ ಶಕ್ತಿ, ಸಾಮರ್ಥ್ಯವನ್ನು ಕಡಿಮೆ ಅಂದಾಜಿಸಲಾಗದು.
ಅಲ್ಪಸಂಖ್ಯಾತ ಮೂಲಭೂತವಾದಿಗಳ ಅಪಾಯವನ್ನೂ ಕಡೆಗಣಿಸಲಾಗದು. ಕಾಂಗ್ರೆಸ್ ಗೆ ಕರಾವಳಿಯ ಜನತೆ ರಾಜಕೀಯವಾಗಿ ಅನೇಕ ಬಾರಿ ಬೆಂಬಲಿಸಿದ್ದರೂ ಅದನ್ನು ಸೂಕ್ತವಾಗಿ ಬಳಸಿಲ್ಲ. ಸ್ವಹಿತಾಸಕ್ತಿಯಿಂದ, ಬಹಳಷ್ಟು ಬಾರಿ ರಾಜೀ ಹೊಂದಾಣಿಕೆಯಿಂದ ಕಾಲ ಕಳೆದಧ್ದೇ ಹೆಚ್ಚು. ಪರಿಸ್ಥಿತಿ ಇಷ್ಟೊಂದು ಗಂಭೀರತೆಯತ್ತ ಸಾಗಿ ಬರಲು ಬಿಜೆಪಿ ಅಲ್ಲದೇ ಕಾಂಗ್ರೆಸ್, ಜೆ.ಡಿ. ಎಸ್ ಪಕ್ಷಗಳ ಪಾಲು ಇರುವುದನ್ನು ಮರೆಯಲಾಗದು. ಹೀಗಾಗಿ ಕರಾವಳಿ ಇಂದು ಹತ್ತಿ ಉರಿಯುತ್ತಿದೆ, ಆರದ ಬೆಂಕಿಯಾಗಿಯೇ ಇದೆ.
ಪರ್ಯಾಯ
ಈ ಎಲ್ಲಾ ಅಂಶಗಳನ್ನು ಗಮನಿಸುವಾಗಲೇ ಎಲ್ಲಾ ಶಾಂತಿ, ಸೌಹಾರ್ದತೆ, ಮಾನವನ ಪ್ರಗತಿಯನ್ನು ಬಯಸುವ ಎಲ್ಲಾ ಶಕ್ತಿಗಳು, ವ್ಯಕ್ತಿಗಳೂ, ಸೆಕ್ಯುಲರ್ ಮತ್ತು ಪ್ರಜಾಪ್ರಭುತ್ವೀಯ ಶಕ್ತಿಗಳು, ಪಕ್ಷಗಳು ಐಕ್ಯತೆಯಿಂದ ಹೋರಾಡಬೇಕಿದೆ. ಕೋಮುವಾದ, ಮತೀಯ ಮೂಲಭೂತವಾದ ಹುಲುಸಾಗಿ ಬೆಳೆಯಲು ಕಾರಣವಾದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನೀತಿಗಳನ್ನು ಎದುರಿಸಬೇಕಿದೆ. ವಾಸ್ತವದಲ್ಲಿ ಬಲಪಂಥೀಯ ಪಕ್ಷಗಳ ನೀತಿಗಳಿಗೆ ಎದುರಾಗಿ ಪರ್ಯಾಯ ನೀತಿಗಳಿಗಳಿಗಾಗಿ ಜನಾಂದೋಲನ ನಡೆಯಬೇಕು. ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಮತ್ತು ನಿಜ ಪರ್ಯಾಯ ರೂಪಿಸುವಲ್ಲಿ ಎಡ ಶಕ್ತಿಗಳು ವಹಿಸಬೇಕಾದ ಸ್ವತಂತ್ರ ಪಾತ್ರವೂ ಅಷ್ಟೇ ಅತೀ ಮಹತ್ವದ್ದು.
ಇದನ್ನೂ ನೋಡಿ: ಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ
