ಕರಾಳ ಶಾಸನಗಳ ಹೊಳೆಯಲ್ಲಿ ಮಾನವ ಹಕ್ಕುಗಳ ನಾವೆ

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ವಿಶ್ವದ ಯಾವುದೇ ದೇಶದಲ್ಲಿನ ಆಳುವ ವರ್ಗಗಳ ಧೋರಣೆಯನ್ನು ಬದಲಿಸಿಲ್ಲ. ಭಾರತವೂ ಅಪವಾದವಲ್ಲ. ಸ್ವತಂತ್ರ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಇತಿಹಾಸವನ್ನು ಶೋಧಿಸಿದರೆ ನಾವು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಗಣತಂತ್ರದಲ್ಲಿ ವಾಸಿಸುತ್ತಿದ್ದೇವೆಯೇ ಎಂಬ ಅನುಮಾನ ಮೂಡುತ್ತದೆ. 1970ರ ದಶಕದಲ್ಲಿ ಆರಂಭವಾದ ಕರಾಳ ಶಾಸನಗಳ ಪರ್ವ ಇಂದು ಪರಾಕಾಷ್ಠೆ ತಲುಪಿದೆ. ಇಂದು ಭಾರತದ ಸಾರ್ವಭೌಮ ಪ್ರಜೆಗಳು ಕರಾಳ ಶಾಸನಗಳ ಆಡಳಿತ ವ್ಯವಸ್ಥೆಯಲ್ಲಿ ಬದುಕು ಸವೆಸಬೇಕಿದೆ.  ಚುನಾಯಿತ ಸರ್ಕಾರಗಳು ವಿಧಾನಸಭೆ, ವಿಧಾನ ಮಂಡಲ , ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಸಾಂವಿಧಾನಿಕ ನಿಯಮಗಳನ್ನೂ ಲೆಕ್ಕಿಸದೆ ಜನವಿರೋಧಿ ಶಾಸನಗಳನ್ನು ಜಾರಿಮಾಡುತ್ತಿವೆ. ಮಸೂದೆಗಳನ್ನು ಮಂಡಿಸದೆಯೇ ಅನುಮೋದಿಸುವ ಒಂದು ವಿಕೃತ ಪರಂಪರೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ದೇಶದ ಶೇ 60ಕ್ಕೂ ಹೆಚ್ಚು ಜನತೆಯ ಬದುಕನ್ನು ರೂಪಿಸುವ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರುವ ಮೂಲಕ ದೇಶದ ಕೃಷಿ ವಲಯವನ್ನು ಕಾರ್ಪೋರೇಟ್ ಉದ್ಯಮಿಗಳ ನಿಯಂತ್ರಣಕ್ಕೊಳಪಡಿಸುವ ಮೂರು ಕಾಯ್ದೆಗಳು ಯಾವುದೇ ಚರ್ಚೆ ಇಲ್ಲದೆ ಸಂಸತ್ತಿನ ಅನುಮೋದನೆ ಪಡೆಯುತ್ತದೆ. ಈ ಪ್ರಜಾತಂತ್ರದ ಅಣಕವನ್ನು ಪ್ರಶ್ನಿಸುವ ಹಕ್ಕು ನ್ಯಾಯಾಂಗಕ್ಕೆ ಇದ್ದರೂ ಮೌನವಾಗಿದೆ.

– ನಾ ದಿವಾಕರ

ನಾಗರಿಕ ಹಕ್ಕುಗಳು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭ. ಭಾರತ ಬ್ರಿಟೀಷ್ ವಸಾಹತು ಆಳ್ವಿಕೆಯಿಂದ ವಿಮೋಚನೆ ಹೊಂದಿದ ನಂತರ ಆಯ್ದುಕೊಂಡಿದ್ದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು. ಈ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ವಹಿಸಿಕೊಳ್ಳುವ ಪ್ರತಿಯೊಂದು ಚುನಾಯಿತ ಸರ್ಕಾರ ಮಾನ್ಯತೆ ನೀಡಬೇಕಾದ್ದು ಈ ದೇಶದ ಸಂವಿಧಾನದ ಮೂಲ ತತ್ವಗಳಿಗೆ ಮತ್ತು ಪ್ರಜಾತಂತ್ರ ಮೌಲ್ಯಗಳಿಗೆ. ಮಾನವ ಹಕ್ಕುಗಳು ಅಥವಾ ನಾಗರಿಕ ಹಕ್ಕುಗಳ ಪರಿಕಲ್ಪನೆ ಮಾನವ ಸಮಾಜ ಉಗಮವಾದ ದಿನದಿಂದಲೂ ಇದೆ. ಮಾನವ ತನ್ನ ಅಭ್ಯುದಯದ ಹಾದಿಯಲ್ಲಿ ತನ್ನ ಬದುಕುವ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಆಧುನಿಕ ಯುಗವನ್ನು ತಲುಪಿದ್ದಾನೆ. ಸ್ವತಂತ್ರವಾಗಿ ಜೀವಿಸುವ ಮತ್ತು ಬದುಕನ್ನು ಕಟ್ಟಿಕೊಳ್ಳುವ ಹಕ್ಕುಗಳಿಗಾಗಿ ಮನುಕುಲ ಹೋರಾಡುತ್ತಲೇ ಬಂದಿದೆ.

ಆದರೆ ಈ ಮಾನವ ಹಕ್ಕುಗಳ ಪರಿಕಲ್ಪನೆಗೆ ಸಾಂಸ್ಥಿಕ ಮಾನ್ಯತೆ ಮತ್ತು ಸಾರ್ವತ್ರಿಕ ಸ್ವರೂಪ ದೊರೆತಿದ್ದು ಕೇವಲ 72 ವರ್ಷಗಳ ಹಿಂದೆ, ಡಿಸೆಂಬರ್ 10 1948ರಂದು. 20ನೆಯ ಶತಮಾನದ ಕ್ರಾಂತಿಕಾರಿ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಸಂಭವಿಸಿದ ಎರಡು ಮಹಾಯುದ್ಧಗಳು ಮತ್ತು ಜಾಗತಿಕ ಸಂಪತ್ತಿನ ಹಂಚಿಕೆಗಾಗಿ ನಡೆದ ಈ ಯುದ್ಧಗಳಲ್ಲಿ ಬಲಿಯಾದ ಲಕ್ಷಾಂತರ ಅಮಾಯಕ ಜನರ ಜೀವಗಳು ಮಾನವ ಜಗತ್ತಿನ ಪ್ರಜ್ಞೆಯನ್ನು ಬಡಿದೆಬ್ಬಿಸಿತ್ತು. ಎರಡನೆ ಮಹಾಯುದ್ಧದಲ್ಲಿ  ಜರ್ಮನಿಯ ನಾಝಿಗಳ ಕ್ರೌರ್ಯಕ್ಕೆ ಬಲಿಯಾದ ಲಕ್ಷಾಂತರ ಯಹೂದಿಗಳು ಮತ್ತು ಮಹಾಸಮರದಲ್ಲಿ ಮಡಿದ ಕೋಟ್ಯಂತರ ಜನರು,  ಅಣುಬಾಂಬ್ ಗೆ ಬಲಿಯಾದ ಜಪಾನಿನ ಅಮಾಯಕ ಜನತೆ ಈ ಎಲ್ಲ ಹಿಂಸಾತ್ಮಕ ಕೃತ್ಯಗಳು ಮಾನವ ಸಮಾಜದ ಘನತೆಗೆ ಧಕ್ಕೆ ತರುವಂತಹ ಬೆಳವಣಿಗೆಗಳಾಗಿದ್ದವು.

ಇದೇ ಸಂದರ್ಭದಲ್ಲಿ ವಿಶ್ವದಾದ್ಯಂತ ವಸಾಹತು ಆಳ್ವಿಕೆ ಕೊನೆಗೊಳ್ಳುತ್ತಿತ್ತು. ರಷ್ಯಾದ ಮಹಾಕ್ರಾಂತಿಯ ನೇರ ಪ್ರಭಾವ ಅನೇಕ ರಾಷ್ಟ್ರಗಳಲ್ಲಿ ಕಂಡುಬಂದಿದ್ದೇ ಅಲ್ಲದೆ ಸಾಮ್ರಾಜ್ಯಶಾಹಿಗಳಿಂದ, ವಸಾಹತು ಆಳ್ವಿಕೆಯಿಂದ ವಿಮೋಚನೆ ಹೊಂದಲು ಎಲ್ಲ ದೇಶಗಳೂ ಸಜ್ಜಾದವು. ಭಾರತವನ್ನೂ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮದೇ ಆದ ಸ್ವತಂತ್ರ ಆಳ್ವಿಕೆಯ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಯಿತು. ಆದರೆ ಇದೇ ಸಂದರ್ಭದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳು ಬಂಡವಾಳ ವ್ಯವಸ್ಥೆಯಲ್ಲಿ ಉಳಿದುಕೊಂಡಿತ್ತು  ರಷ್ಯಾ ಮತ್ತು ಚೀನಾ ಕ್ರಾಂತಿಯ ನಂತರ ಲ್ಯಾಟಿನ್ ಅಮೆರಿಕ, ಪೂರ್ವ ಯೂರೋಪ್ ಮತ್ತು ಆಫ್ರಿಕಾದ ದೇಶಗಳಲ್ಲಿ ಜನತೆ ಕ್ರಾಂತಿಕಾರಿ ಹೋರಾಟಗಳತ್ತ ಹೆಚ್ಚು ಒಲವು ತೋರಲಾರಂಭಿಸಿದ್ದರು. ಭಾರತದಲ್ಲೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ, ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ನಂತರವೂ, ಭೂ ಹೋರಾಟಗಳು ಹೆಚ್ಚಾದವು.

ಆಡಳಿತ ವ್ಯವಸ್ಥೆಯಲ್ಲಿ ತಮ್ಮ ದನಿಗೆ ಮಾನ್ಯತೆ ನೀಡಬೇಕೆನ್ನುವ ಜನಸಾಮಾನ್ಯರ, ದುಡಿಯುವ ವರ್ಗಗಳ ಆಗ್ರಹ ಎಲ್ಲೆಡೆ ಪ್ರತಿಧ್ವನಿಸತೊಡಗಿತ್ತು. ವಿಶ್ವದಾದ್ಯಂತ ಮಹಿಳೆಯರು, ಆದಿವಾಸಿಗಳು, ಅಭಿವೃದ್ಧಿ ವಂಚಿತರು, ಸಾಮಾಜಿಕವಾಗಿ ಶೋಷಣೆಗೊಳಗಾದವರು, ಸಮಾಜೋ ಆರ್ಥಿಕ ಪ್ರಗತಿಯಲ್ಲಿ ಅವಕಾಶವಂಚಿತರು ಮತ್ತು ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಲಾರಂಭಿಸಿದರು.  ಭಾರತದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ, ತಾರತಮ್ಯಗಳ ವಿರುದ್ಧ, ಆಫ್ರಿಕಾ ದೇಶಗಳಲ್ಲಿ, ಅಮೆರಿಕದಲ್ಲಿ ವರ್ಣಭೇದ ನೀತಿಯ ವಿರುದ್ಧ, ಕಪ್ಪು ಜನರ ಶೋಷಣೆಯ ವಿರುದ್ಧ ಜನಸಮುದಾಯಗಳ ಪ್ರತಿರೋಧದ ದನಿ ಹೆಚ್ಚಾಗತೊಡಗಿತ್ತು.

ಈ ಎಲ್ಲ ಹೋರಾಟಗಳು ತಾರ್ಕಿಕ ಅಂತ್ಯ ಕಂಡಿದ್ದು 1950-60ರ ದಶಕದಲ್ಲೇ ಆದರೂ ಇದರ ಒಳಸುಳಿವುಗಳು ಜಾಗತಿಕ ನೆಲೆಯಲ್ಲಿ ವ್ಯಕ್ತವಾಗತೊಡಗಿದ್ದು 1940ರ ದಶಕದ ಅಂತ್ಯದ ವೇಳೆಗೆ. ಸಾಮ್ರಾಜ್ಯಶಾಹಿ ಯುದ್ಧಗಳು ಉಂಟುಮಾಡಿದ ಹಾನಿ ಮತ್ತು ಜಗತ್ತಿನ ಸಾಮಾನ್ಯ ಜನತೆಯ ಮೇಲೆ ಇದರಿಂದ ಉಂಟಾದ ಭೀಕರ ಪರಿಣಾಮಗಳು ಶೋಷಿತ ಸಮುದಾಯಗಳನ್ನು ಎಚ್ಚರಿಸಿದ್ದವು. ವಸಾಹತುಶಾಹಿ ಆಳ್ವಿಕೆಯಿಂದ, ಸಾಮ್ರಾಜ್ಯಶಾಹಿ ಹಿಡಿತದಿಂದ ವಿಮೋಚನೆ ಪಡೆಯುವ ಉತ್ಸುಕತೆಯೊಡನೆಯೇ ಜಗತ್ತಿನ ಎಲ್ಲ ಪ್ರಜೆಗಳು ಸಮಾನ ಹಕ್ಕುಗಳೊಂದಿಗೆ ಬದುಕುವ ಒಂದು ವಾತಾವರಣವನ್ನು ಸೃಷ್ಟಿಸಲು ಕೆಲವು ಮನಸುಗಳು ಜಾಗೃತವಾಗಿದ್ದವು.

ಈ ಹಿನ್ನೆಲೆಯಲ್ಲೇ ರೂಪುಗೊಂಡ ಒಂದು ತಾತ್ವಿಕ ಪರಿಕಲ್ಪನೆ ಮಾನವ ಹಕ್ಕುಗಳು. ಎರಡನೆ ಮಹಾಯುದ್ಧದ ನಂತರದಲ್ಲಿ ಯುದ್ಧಗಳ ಭೀಕರತೆ ಮತ್ತು ಅದರಿಂದುಂಟಾಗುವ ಸಾವು ನೋವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವಶಾಂತಿಗಾಗಿ ರೂಪುಗೊಂಡ ವಿಶ್ವ ಸಂಸ್ಥೆಯು, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಹಕ್ಕುಗಳಿರುವುದನ್ನು ಮನಗಂಡು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಕರಡು ಸಿದ್ಧಪಡಿಸಲು ಒಂದು ಸಮಿತಿಯನ್ನು ರಚಿಸಿತ್ತು. ಇದನ್ನು ಪ್ರತಿನಿಧಿಸುವುದೇ ಅಲ್ಲದೆ ಮೊದಲ ಅಧ್ಯಕ್ಷೆಯಾಗಿ ಕರಡು ಸಿದ್ಧಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು 1933 ರಿಂದ 45ರವರೆಗೆ ಅಮೆರಿಕದ  ಅಧ್ಯಕ್ಷ ರೂಸ್‍ವೆಲ್ಟ್ ಅವರ ಪತ್ನಿ ಇಲೆನಾರ್ ರೂಸ್‍ವೆಲ್ಟ್.  ಪೂರ್ವ ಪಶ್ಚಿಮಗಳ ಸಂಘರ್ಷದ ನೆಲೆಯಲ್ಲೇ ಒಂದು ಸರ್ವಸಮ್ಮತ ಮಾನವ ಹಕ್ಕುಗಳ ಒಡಂಬಡಿಕೆಯನ್ನು ಸಿದ್ಧಪಡಿಸುವಲ್ಲಿ ಇಲೆನಾರ್ ಯಶಸ್ವಿಯಾಗಿದ್ದರು.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಜಾರಿಗೊಳಿಸಿದ ಹತ್ತು ವರ್ಷಗಳ ನಂತರ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ “ ಮಾನವ ಹಕ್ಕುಗಳು ಎಲ್ಲಿ ಆರಂಭವಾಗುತ್ತವೆ ” ಎನ್ನುವ ವಿಷಯವನ್ನು ಕುರಿತು ಉಪನ್ಯಾಸ ನೀಡಿದ್ದ ರೂಸ್‍ವೆಲ್ಟ್ ಹೀಗೆ ಹೇಳುತ್ತಾರೆ :
“ ಮಾನವ ಹಕ್ಕುಗಳು ಮೂಲತಃ ಎಲ್ಲಿ ಆರಂಭವಾಗುತ್ತದೆ.  ಸಣ್ಣ ಪುಟ್ಟ ಸ್ಥಳಗಳಲ್ಲಲಿ, ನಮ್ಮ ಮನೆಗಳ ಹತ್ತಿರ. ಇದು ಎಷ್ಟು ಸಣ್ಣ ಪ್ರಮಾಣದ್ದಾಗಿರುತ್ತದೆ ಎಂದರೆ ಇದನ್ನು ವಿಶ್ವ ಭೂಪಟದಲ್ಲಿ ಗುರುತಿಸಲಾಗುವುದಿಲ್ಲ. ಆದರೂ ಅದು ಪ್ರತಿಯೊಬ್ಬ ವ್ಯಕ್ತಿಯ ಪ್ರಪಂಚವೇ ಆಗಿರುತ್ತದೆ. ಆ ವ್ಯಕ್ತಿಯ ಬದುಕಿನ ನೆರೆಹೊರೆ, ವ್ಯಾಸಂಗ ಮಾಡುವ ಶಾಲೆ ಕಾಲೇಜು, ನೌಕರಿ ಮಾಡುವ ಕಾರ್ಖಾನೆ, ಕಚೇರಿ, ತೋಟ, ಎಸ್ಟೇಟ್ ಎಲ್ಲೆಡೆಯೂ ಇದು ಪ್ರಕಟವಾಗುತ್ತದೆ.  ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು ಸಮಾನ ನ್ಯಾಯ ಕೇಳುವ, ಸಮಾನ ಅವಕಾಶಕ್ಕಾಗಿ ಹಂಬಲಿಸುವ, ಸಮಾನ ಘನತೆಗಾಗಿ ಹೋರಾಡುವ, ಯಾವುದೇ ತಾರತಮ್ಯವಿಲ್ಲದ ಈ ಜಾಗಗಳಿಗಾಗಿ ಮನುಷ್ಯ ಹಂಬಲಿಸುತ್ತಾನೆ.  ಈ ಜಾಗಗಳಲ್ಲಿ ಈ ಹಕ್ಕುಗಳಿಗೆ ಅರ್ಥವಿಲ್ಲದೆ ಹೋದರೆ ಅವುಗಳಿಗೆ ಮತ್ತೆಲ್ಲಿಯೂ ಮಾನ್ಯತೆ ಇರುವುದಿಲ್ಲ. ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣದಲ್ಲಿ ಈ ಹಕ್ಕುಗಳನ್ನು ಕಾಪಾಡುವ ಪ್ರಯತ್ನವನ್ನು ಪ್ರತಿಯೊಬ್ಬ ಪ್ರಜೆಯೂ ಮಾಡದೆ ಹೋದರೆ ನಾವು ವಿಶಾಲ ವಿಶ್ವದ ಪ್ರಗತಿಯನ್ನು ನಿರೀಕ್ಷಿಸುವುದು ವ್ಯರ್ಥ ಎನಿಸುತ್ತದೆ ”.

ಇಲೆನಾರ್ ಅವರ ಮಾತುಗಳು ಇಂದು ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ ? ಅದೂ ಭಾರತದ ಸಂದರ್ಭದಲ್ಲಿ. ಮಾನವ ಹಕ್ಕುಗಳು ಎನ್ನುವ ಒಂದು ಉದಾತ್ತ ಪರಿಕಲ್ಪನೆ ಇದೆ ಎನ್ನುವುದನ್ನೇ ಮರೆತಂತೆ ನಮ್ಮ ಸಮಾಜ ವರ್ತಿಸುತ್ತಿದೆ. ಸಂವಿಧಾನಾತ್ಮಕ ನಾಗರಿಕ ಹಕ್ಕುಗಳು ಪದೇ ಪದೇ ಉಲ್ಲಂಘನೆಯಾಗುತ್ತಲೇ ಇದ್ದರೂ, ದೇಶದ ಪ್ರಜೆಯ ಬದುಕುವ ಹಕ್ಕನ್ನೂ ಕಸಿದುಕೊಳ್ಳುತ್ತಿದ್ದರೂ, ಸಾರ್ವಭೌಮ ಪ್ರಜೆಗಳ ಮೂಲಭೂತ ಹಕ್ಕುಗಳ ನಿರಾಕರಣೆಯಾಗುತ್ತಿದ್ದರೂ, ಸಮೂಹ ಸನ್ನಿಗೊಳಗಾಗಿ ತಮ್ಮ ಸ್ವಪ್ರಜ್ಞೆಯನ್ನೇ ಕಳೆದುಕೊಂಡಂತಿರುವ ಭಾರತದ ಹಿತವಲಯದ ಮಧ್ಯಮ ವರ್ಗಗಳು ಭ್ರಮಾವಲಯದಲ್ಲಿ ತೇಲುತ್ತಿವೆ. ಈ ವರ್ಗಗಳಿಗೆ ಇಲೆನಾರ್ ಅವರ ನುಡಿಗಳು ಎಚ್ಚರಿಕೆಯ ಸಂದೇಶವಾಗಲೂಬಹುದು.

ಇಲೆನಾರ್ ಅವರ ಈ ಮಾತುಗಳಾಗಲೀ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಾಗಲೀ ವಿಶ್ವದ ಯಾವುದೇ ದೇಶದಲ್ಲಿನ ಆಳುವ ವರ್ಗಗಳ ಧೋರಣೆಯನ್ನು ಬದಲಿಸಿಲ್ಲ. ಭಾರತವೂ ಅಪವಾದವಲ್ಲ.  ಸ್ವತಂತ್ರ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಇತಿಹಾಸವನ್ನು ಶೋಧಿಸಿದರೆ ನಾವು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಗಣತಂತ್ರದಲ್ಲಿ ವಾಸಿಸುತ್ತಿದ್ದೇವೆಯೇ ಎಂಬ ಅನುಮಾನ ಮೂಡುತ್ತದೆ. 1970ರ ದಶಕದಲ್ಲಿ ಆರಂಭವಾದ ಕರಾಳ ಶಾಸನಗಳ ಪರ್ವ ಇಂದು ಪರಾಕಾಷ್ಠೆ ತಲುಪಿದೆ. ಇಂದು ಭಾರತದ ಸಾರ್ವಭೌಮ ಪ್ರಜೆಗಳು ಕರಾಳ ಶಾಸನಗಳ ಆಡಳಿತ ವ್ಯವಸ್ಥೆಯಲ್ಲಿ ಬದುಕು ಸವೆಸಬೇಕಿದೆ.

ಚುನಾಯಿತ ಸರ್ಕಾರಗಳು ವಿಧಾನಸಭೆ, ವಿಧಾನ ಮಂಡಲ , ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಸಾಂವಿಧಾನಿಕ ನಿಯಮಗಳನ್ನೂ ಲೆಕ್ಕಿಸದೆ ಜನವಿರೋಧಿ ಶಾಸನಗಳನ್ನು ಜಾರಿಮಾಡುತ್ತಿವೆ. ಮಸೂದೆಗಳನ್ನು ಮಂಡಿಸದೆಯೇ ಅನುಮೋದಿಸುವ ಒಂದು ವಿಕೃತ ಪರಂಪರೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ದೇಶದ ಶೇ 60ಕ್ಕೂ ಹೆಚ್ಚು ಜನತೆಯ ಬದುಕನ್ನು ರೂಪಿಸುವ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರುವ ಮೂಲಕ ದೇಶದ ಕೃಷಿ ವಲಯವನ್ನು ಕಾರ್ಪೋರೇಟ್ ಉದ್ಯಮಿಗಳ ನಿಯಂತ್ರಣಕ್ಕೊಳಪಡಿಸುವ ಮೂರು ಕಾಯ್ದೆಗಳು ಯಾವುದೇ ಚರ್ಚೆ ಇಲ್ಲದೆ ಸಂಸತ್ತಿನ ಅನುಮೋದನೆ ಪಡೆಯುತ್ತದೆ. ಈ ಪ್ರಜಾತಂತ್ರದ ಅಣಕವನ್ನು ಪ್ರಶ್ನಿಸುವ ಹಕ್ಕು ನ್ಯಾಯಾಂಗಕ್ಕೆ ಇದ್ದರೂ ಮೌನವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಪ್ರತಿರೋಧದ ದನಿಗಳನ್ನು ಅಡಗಿಸಲು ಯುಎಪಿಎ ಕಾಯ್ದೆಯನ್ನು ಅವ್ಯಾಹತವಾಗಿ ಬಳಸುತ್ತಿವೆ. ಪ್ರತಿಯೊಂದು ವಿರೋಧಿ ದನಿಯಲ್ಲೂ ಭಯೋತ್ಪಾದಕರನ್ನು, ನಗರ ನಕ್ಸಲರನ್ನು ಕಾಣುವ ಆಳುವ ವರ್ಗಗಳು ಯುಎಪಿಎ ಎಂಬ ಕರಾಳ ಶಾಸನವನ್ನು ಬಳಸುವ ಮೂಲಕ ಪ್ರಜಾತಂತ್ರದ ಮೌಲ್ಯಗಳ ಅವಸಾನಕ್ಕೆ ನಾಂದಿ ಹಾಡುತ್ತಿವೆ. ಮೂಲತಃ ಪ್ರಭುತ್ವ ವಿರೋಧಿ ಅಭಿವ್ಯಕ್ತಿಯನ್ನು ನಿರ್ಬಂಧಿಸುವ ಈ ಕರಾಳ ಶಾಸನವನ್ನು ಎಡರಂಗ ಸರ್ಕಾರಗಳನ್ನೂ ಸೇರಿದಂತೆ ಯಾವುದೇ ಆಡಳಿತಾರೂಢ ರಾಜಕೀಯ ಪಕ್ಷವೂ ತಾತ್ವಿಕ ನೆಲೆಯಲ್ಲಿ ವಿರೋಧಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಇತ್ತೀಚೆಗೆ ಕೇರಳದ ಎಡರಂಗ ಸರ್ಕಾರವೂ ಸಾಮಾಜಿಕ ತಾಣಗಳನ್ನು ನಿರ್ಬಂಧಿಸಲು ಯುಎಪಿಎ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿ ನಂತರ ಹಿಂದೆ ಸರಿದಿದೆ.

ಆಡಳಿತಾರೂಢ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಟಾಡಾ, ಕೋಪ್ರಾ, ಯುಎಪಿಎ ಮುಂತಾದ ಕರಾಳ ಶಾಸನಗಳನ್ನು ಬಳಸುತ್ತಲೇ ಬಂದಿವೆ. ನ್ಯಾಯ ವ್ಯವಸ್ಥೆಯ ವಿಧಿ ವಿಧಾನಗಳನ್ನು ಅನುಸರಿಸದೆಯೇ ಪ್ರತಿರೋಧದ ದನಿಗಳನ್ನು, ಹೋರಾಟದ ದನಿಗಳನ್ನು ಅಡಗಿಸಲು ಈ ಶಾಸನಗಳು ಮುಕ್ತ ಅವಕಾಶ ನೀಡುತ್ತವೆ. ಎನ್ಕೌಂಟರ್ ಹತ್ಯೆಗಳು, ಪೊಲೀಸರ ದೌರ್ಜನ್ಯ ಮತ್ತು ಚಿತ್ರಹಿಂಸೆ ಯಾವುದೇ ನಿರ್ಬಂಧವಿಲ್ಲದೆ ನಡೆಯುತ್ತಿದೆ. ವರಾವರರಾವ್, ಗೌತಮ್ ನವಲಖ, ಸುಧಾ ಭರದ್ವಾಜ್, ಆನಂದ್ ತೇಲ್ತುಂಬ್ಡೆ, ಪ್ರೊ ಸಾಯಿಬಾಬಾ, ಉಮರ್ ಖಲೀದ್ ಹೀಗೆ ಕರಾಳ ಶಾಸನಗಳಿಗೆ ಬಲಿಯಾಗಿ ಸೆರೆವಾಸ ಅನುಭವಿಸುತ್ತಿರುವವರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ವಿರೋಧ ಪಕ್ಷಗಳೂ ಸಹ ಈ ಕರಾಳ ಶಾಸನಗಳ ವಿರುದ್ಧ ಜನಾಂದೋಲನಗಳನ್ನು ರೂಪಿಸುತ್ತಿಲ್ಲ ಎನ್ನುವುದು ಚಿಂತೆಗೀಡುಮಾಡುವ ವಿಚಾರ.
ಇದರ ಪರಿಣಾಮವನ್ನು ಇಂದು ಕೃಷಿ ಮಸೂದೆಗಳ ಮೂಲಕ, ಗೋ ಹತ್ಯೆ ನಿಷೇಧದ ಮೂಲಕ, ಭೂ ಸ್ವಾಧೀನ ಕಾಯ್ದೆಗಳ ಮೂಲಕ ಅನುಭವಿಸುತ್ತಿದ್ದೇವೆ. ಸರ್ಕಾರಗಳ ಆಡಳಿತ ನೀತಿಗಳನ್ನು ಪ್ರಶ್ನಿಸುವುದೂ ಅಪರಾಧ ಎನಿಸಿಕೊಳ್ಳುವ ವಿಷಮ ಸನ್ನಿವೇಶದಲ್ಲಿ ಭಾರತ ಮುನ್ನಡೆಯುತ್ತಿದೆ. ದೆಹಲಿಯಲ್ಲಿ ಮುಷ್ಕರ ನಿರತರಾಗಿರುವ ರೈತ ಸಮುದಾಯದ ಮೇಲೆ ಕೇಂದ್ರ ಸರ್ಕಾರ ನಡೆಸಿದ ದೌರ್ಜನ್ಯ, ಎಲ್ಲ ಸಂಪರ್ಕ ಸಾಧನಗಳನ್ನೂ ಸ್ಥಗಿತಗೊಳಿಸುವ ಅಮಾನುಷ ಪ್ರವೃತ್ತಿ, ಒಂದು ಇಡೀ ರಾಜ್ಯದ ದಿಗ್ಬಂಧನ, ಪ್ರತಿಭಟಿಸುವ ನಾಗರಿಕರ ಅನಗತ್ಯ ಬಂಧನ ಇವೆಲ್ಲವೂ ದೇಶದ ರಾಜಧಾನಿಯಲ್ಲೇ ಕಂಡುಬರುತ್ತಿದೆ. ಆದರೂ ಈ ದೇಶದ ಪ್ರಜ್ಞಾವಂತ ಸಮಾಜ ಮೌನ ವಹಿಸುತ್ತದೆ.

ಪ್ರಜ್ಞೆ ಸತ್ತ ಸಮಾಜದಲ್ಲಿ ನಾವು ಮಾನವ ಹಕ್ಕುಗಳು ಎನ್ನುವ ಉದಾತ್ತ ಚಿಂತನೆಯ ಬೀಜಗಳನ್ನು ಬಿತ್ತಬೇಕಿದೆ. ಈಗಾಗಲೇ ವ್ಯವಸ್ಥಿತವಾಗಿ ಬಿತ್ತಲಾಗಿರುವ ದ್ವೇಷ ರಾಜಕಾರಣದ, ಮತಾಂಧತೆಯ, ಜಾತಿ ದ್ವೇಷದ ಮತ್ತು ಜನಾಂಗೀಯ ದ್ವೇಷದ ಬೀಜಗಳನ್ನು ಕಿತ್ತೆಸೆದು, ಹೊಸ ಜಗತ್ತಿಗೆ ನಾಂದಿ ಹಾಡಬೇಕಿದೆ. ನವ ಉದಾರವಾದ, ಸಾಂಸ್ಕೃತಿಕ ರಾಷ್ಟ್ರೀಯವಾದ ಮತ್ತು ಮತಾಂಧತೆ ಈ ದೇಶದ ಬೃಹತ್ ಸಮುದಾಯವನ್ನು ಆವರಿಸಿದ್ದು, ಸುಶಿಕ್ಷಿತ ವಲಯದ ಪ್ರಜ್ಞಾವಂತರೂ ಸಮೂಹ ಸನ್ನಿಗೊಳಗಾಗಿದ್ದಾರೆ. ಈ ಉನ್ಮತ್ತ ಮನಸುಗಳಿಗೆ ರೈತರ ಆಕ್ರಂದನ  ದೇಶದ್ರೋಹದ ದನಿಯಂತೆ ಕೇಳಿಸುತ್ತದೆ, ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗುವ ಅಸ್ಪೃಶ್ಯ ಮಹಿಳೆಯರ ವೇದನೆ ನಿಕೃಷ್ಟವಾಗಿ ಕಾಣುತ್ತದೆ.

ಭಾರತ ಮತ್ತೊಮ್ಮೆ ಕಂಪನಿ ಆಡಳಿತಕ್ಕೆ ಒಳಪಡುವ ಕಾಲ ಸನ್ನಿಹಿತವಾಗುತ್ತಿದೆ. ಕಾರ್ಪೋರೇಟ್ ರಾಜಕಾರಣದ ಮಾರುಕಟ್ಟೆ ನೀತಿಗಳು ದೇಶದ ಎಲ್ಲ ಸಂಪನ್ಮೂಲಗಳನ್ನೂ ಹಣಕಾಸು ಬಂಡವಾಳದ ನಿಯಂತ್ರಣಕ್ಕೊಳಪಡಿಸಲು ಭೂಮಿಕೆಯನ್ನು ಸಿದ್ಧಪಡಿಸುತ್ತಿವೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ಕೃಷಿ ಮಸೂದೆಗಳಲ್ಲಿ, ಭೂ ಸ್ವಾಧೀನ ಕಾಯ್ದೆಯಲ್ಲಿ ಕಾಣಲು ಸಾಧ್ಯ. ಈ ಜನವಿರೋಧಿ ಕಾರ್ಯನೀತಿಗಳ ವಿರುದ್ಧ ದನಿ ಎತ್ತುವವರ ಸಾಂವಿಧಾನಿಕ ಹಕ್ಕುಗಳು ದಮನಕ್ಕೊಳಗಾಗುತ್ತಿವೆ. ಆಹಾರ, ಶಿಕ್ಷಣ, ಆರೋಗ್ಯ ಮತ್ತು ಬದುಕುವ ಹಕ್ಕುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ.

ಈ ಹಕ್ಕುಗಳನ್ನು ನಿರಾಕರಿಸುವ ಪ್ರಭುತ್ವದ ವಿರುದ್ಧ ದನಿ ಎತ್ತುವವರೊಡನೆ ನಾವು ನಿಲ್ಲಬೇಕಿದೆ. ಆಗಲೇ ಡಿಸೆಂಬರ್ 10ರ ಮಾನವ ಹಕ್ಕುಗಳ ದಿನಾಚರಣೆ ಅರ್ಥಪೂರ್ಣವಾಗುತ್ತದೆ.

 

 

Donate Janashakthi Media

One thought on “ಕರಾಳ ಶಾಸನಗಳ ಹೊಳೆಯಲ್ಲಿ ಮಾನವ ಹಕ್ಕುಗಳ ನಾವೆ

  1. ಅಮೆರಿಕದ ಅಧ್ಯಕ್ಷೆಯಾಗಿದ್ದ—-ಇಲೆನಾರ್ ರೂಸ್‍ವೆಲ್ಟ್.    TO BE READ AS ಅಮೆರಿಕದ ಪ್ರಥಮ ಮಹಿಳಾ ಪ್ರಜೆಯಾಗಿದ್ದ ಅಧ್ಯಕ್ಷ ರೂಸ್‍ವೆಲ್ಟ್ ಅವರ ಪತ್ನಿ SORRY FOR THE ERROR- NA DIVAKAR

Leave a Reply

Your email address will not be published. Required fields are marked *