ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಾಲ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಉತ್ತರಪ್ರದೇಶದಿಂದ ರಾಜ್ಯಸಭೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕಪಿಲ್ ಸಿಬಲ್ ಇಂದು(ಮೇ 25) ಲಕ್ನೋದಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ರಾಮ್ ಗೋಪಾಲ್ ಯಾದವ್ ಕೂಡ ಹಾಜರಿದ್ದರು.
ನಾವು ಪ್ರತಿಪಕ್ಷದಲ್ಲಿರುವಾಗ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ವಿರೋಧಿಸಲು ಮೈತ್ರಿಯನ್ನು ರಚಿಸಲು ಬಯಸುತ್ತೇವೆ. 2024ರಲ್ಲಿ ಮೋದಿ ಸರ್ಕಾರದ ತಪ್ಪುಗಳು ಜನರಿಗೆ ತಲುಪುವಂತೆ ಮಾಡಬೇಕಾಗಿದೆ ಎಂದು ನಾನು ಬಯಸುತ್ತೇನೆ. ಅದಕ್ಕಾಗಿ ನಾವು ಪ್ರಯತ್ನಿಸುತ್ತೇವೆ ಎಂದು ಕಪಿಲ್ ಸಿಬಲ್ ಹೇಳಿದರು.
ನಾನು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಇಂದು ಬಹಿರಂಗಪಡಿಸಿರುವ ಅವರು, ಕಾಂಗ್ರೆಸ್‌ನ 23 ಭಿನ್ನಮತೀಯರ ಗುಂಪಿನ “ಜಿ-23” ನ ಭಾಗವಾಗಿದ್ದರು. 2016 ಇಸವಿಯಲ್ಲಿ ಆಗಿನ ಆಡಳಿತಾರೂಢ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುಪಿಯಿಂದ ರಾಜ್ಯಸಭೆಗೆ ಕಪಿಲ್ ಸಿಬಲ್ ಆಯ್ಕೆಯಾಗಿದ್ದರು. ಜುಲೈ 4 ರಂದು ಕಪಿಲ್ ಸಿಬಲ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ.
ಕಪಿಲ್ ಸಿಬಾಲ್ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಝಂ ಖಾನ್ ಅವರನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು. ಎರಡು ವರ್ಷಗಳ ಜೈಲುವಾಸದ ನಂತರ ಅಝಂ ಖಾನ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.
ಜುಲೈ 4ರಂದು ಖಾಲಿಯಾಗಲಿರುವ 11 ರಾಜ್ಯಸಭಾ ಸ್ಥಾನಗಳಲ್ಲಿ 5 ಬಿಜೆಪಿ, 4 ಸಮಾಜವಾದಿ ಪಕ್ಷ, 2 ಬಿಎಸ್‌ಪಿ ಮತ್ತು ಒಂದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 403 ಶಾಸಕರಲ್ಲಿ 2 ಸ್ಥಾನಗಳು ಖಾಲಿಯಿದ್ದು, ಸದ್ಯ 401 ಶಾಸಕರಿದ್ದಾರೆ. ಒಬ್ಬ ರಾಜ್ಯ ಸಭಾ ಸದಸ್ಯರನ್ನು ಆಯ್ಕೆ ಮಾಡಲು 36 ಶಾಸಕರ ಮತ ಬೇಕಾಗಿದೆ. ಬಿಜೆಪಿ ಮೈತ್ರಿಕೂಟ 273 ಶಾಸಕರನ್ನು ಹೊಂದಿದ್ದು, ಈ ಸಂದರ್ಭದಲ್ಲಿ 7 ಸ್ಥಾನ ಗೆಲ್ಲಲು ಯಾವುದೇ ತೊಂದರೆ ಇಲ್ಲ. ಸಮಾಜವಾದಿ ಪಕ್ಷ 125 ಶಾಸಕರನ್ನು ಹೊಂದಿದೆ. 3 ಸ್ಥಾನ ಗೆಲ್ಲಲು ಯಾವುದೇ ತೊಂದರೆ ಇಲ್ಲ ಆದರೆ 11 ಸ್ಥಾನಕ್ಕಾಗಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಪೈಪೋಟಿ ಇದೆ.
ರಾಜ್ಯಸಭೆಯ 245 ಸ್ಥಾನಗಳಲ್ಲಿ 31 ಸದಸ್ಯರು ಉತ್ತರ ಪ್ರದೇಶ ರಾಜ್ಯದಿಂದ ಆಯ್ಕೆಯಾಗುತ್ತಾರೆ.