ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4ರಂದು ಮಂಡಿಸಿದ ರಾಜ್ಯ ಆಯವ್ಯಯದ ಬಗ್ಗೆ ವಿಧಾನಮಂಡಳದ ಉಭಯ ಸದನಗಳಲ್ಲೂ ಚರ್ಚೆ ಮುದುವರಿದಿದೆ. ಇಂದು ವಿಧಾನಸಭೆಯಲ್ಲಿಕಾಂಗ್ರೆಸ್ ಶಾಸಕ ಕೆ. ಆರ್. ರಮೇಶ್ ಕುಮಾರ್, ಸಾಮಾಜಿಕ ಕ್ಲಬ್ ಗಳೆಂದು ಮಾಡುತ್ತಾರೆ, ಆದರೆ ಅಲ್ಲಿ ನಡೆಯುವುದೆಲ್ಲಾ ಗ್ಯಾಂಬ್ಲಿಂಗ್. ಬಹಳ ದೊಡ್ಡ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ ಎಂದರು. ನಾವು ಏನಾದರೂ ದಾಳಿ ನಡೆಸಿದರೆ ಮರುದಿನ ಠಾಣೆಯಲ್ಲಿ ಜಾಮೀನು ಪಡೆದು ಹೊರಬರುತ್ತಾರೆ. ದಿನಕ್ಕೆ 20 ರಿಂದ 30 ಲಕ್ಷ ವಹಿವಾಟು ನಡೆಯುತ್ತಿದೆ. ಕಾನೂನಿನಲ್ಲಿ 500 ದಂಡ ಕಟ್ಟಿ ಹೊರ ಬರಲು ಅವಕಾಶ ಇದೆ. ಇಷ್ಟು ವರ್ಷ ಸರ್ಕಾರ ಮಾಡಿದ್ದೇವಲ್ಲಾ, ಸಣ್ಣ ಕಾನೂನು ಬದಲಾವಣೆ ಮಾಡುವ ಕೆಲಸ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂತಹ ದಂಧೆಯಿಂದ ಎಷ್ಟು ಮನೆಗಳು ಹಾಳಾಗಿರಬಹುದು? ಇಲ್ಲಿಯವರೆಗೆ, ರೆಡ್ ಹ್ಯಾಂಡ್ ಹಿಡಿದರೂ ಏನು ಮಾಡಲು ಆಗಲ್ಲ ಎಂದಾಗ ಹತ್ತು ಪಟ್ಟು ಮಾಡ್ತಾನೆ. ನಾನು ಗೃಹ ಸಚಿವನಾಗಿದ್ದಾಗ ಕಾನೂನು ಸಚಿವರ ಜೊತೆ ಚರ್ಚೆ ಮಾಡಿ ಕಾಗ್ನಿಸೆಬುಲ್ ಅಫೆನ್ಸ್ ಎಂದು ಮಾಡಿ ಸದನದಲ್ಲಿ ಕಾನೂನು ಮಾಡಿದ್ದೇವೆ. ಇದೀಗ, ಮೊದಲ ರೀತಿಯಲ್ಲಿ 500 ದಂಡ ಕಟ್ಟಿ ಠಾಣೆಯಲ್ಲಿ ಜಾಮೀನು ಪಡೆದುಕೊಳ್ಳಲು ಸಾಧ್ಯವಿಲ್ಲ. ಮೂರು, ಐದು ವರ್ಷ ಶಿಕ್ಷೆಗೆ ಅವಕಾಶ ಇದೆ.
ಆನ್ ಲೈನ್ ಜೂಜು ದೊಡ್ಡ ಪ್ರಮಾಣದಲ್ಲಿ ದೇಶ-ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಅದನ್ನು ತಡೆಗಟ್ಟಲು ಪ್ರಾರಂಭ ಮಾಡಿದಾಗ, ಅದಕ್ಕೊಂದು ಗಟ್ಟಿಯಾದ ಕಾನೂನು ಮಾಡಕ್ಕಾಗಲ್ಲ ಎಂದೆಲ್ಲ ಅಡೆತಡೆಗಳು ವ್ಯಕ್ತವಾಗಿದ್ದವು. ಅವರನ್ನು ಹಿಡಿಯಲು ಸಾಧ್ಯವಿಲ್ಲ ಎಂದೆಲ್ಲಾ ಅಭಿಪ್ರಾಯ ಬಂದಿದ್ದವು ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
ಎಲ್ಲಾ ರಾಜ್ಯಗಳಲ್ಲೂ ಮತ್ತೆ ಶುರುವಾಗಿದೆ. ಆನ್ ಲೈನ್ ಗ್ಯಾಂಬ್ಲಿಂಗ್ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ಆಟ. ನನ್ನ ಮೇಲೆ ಬೇರೆ ಬೇರೆ ರೂಪದಲ್ಲಿ ಬಹಳ ಒತ್ತಡ ಬಂತು. ಒಬ್ಬರು ಬಂದು ನಿಮ್ಮ ಕ್ಷೇತ್ರಕ್ಕೆ ಎಷ್ಟು ಬೇಕೋ ಅಷ್ಟು ಫ್ರೀ ವ್ಯಾಕ್ಸಿನ್ ಕೊಡ್ತೀನಿ ಅಂತ ಆಮಿಷ ಕೊಟ್ಟರು. ನಾನು ನಿಮ್ಮ ಪಾಪ ಬೇಡ ಅಂತ ಒಪ್ಪಲಿಲ್ಲ. ನಾವು ಆನ್ ಲೈನ್ ಗ್ಯಾಂಬ್ಲಿಂಗ್ ತಡೆ ಕಾನೂನು ತಂದೆವು. ಕಾನೂನು ತಂದ್ರೂ ಅದನ್ನು ಜಾರಿ ಮಾಡಲಾಗದ ಅಸಹಾಯಕತೆಯಲ್ಲಿದ್ದೇವೆ ಎಂದು ಸದನದಲ್ಲಿ ಸಿಎಂ ಬೊಮ್ಮಾಯಿ ಖುದ್ದಾಗಿ ತಮ್ಮ ಅಸಹಾಯಕತೆ ತೋಡಿಕೊಂಡರು.