ಬಿಎಂಎಸ್ ಶಿಕ್ಷಣ ಟ್ರಸ್ಟ್ ಅಕ್ರಮ: ಕಾನೂನು ತಜ್ಞರ ಸಲಹೆ ಪಡೆದು ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಬಿಎಂಎಸ್ ಶಿಕ್ಷಣ ಟ್ರಸ್ಟ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವ ಕುರಿತು ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ನಂತರ ಅವರು ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಇದು ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಟ್ರಸ್ಟಿ ಆಸ್ತಿಯನ್ನು ಕಬಳಿಸುವ ಭಾರೀ ಹಗರಣವಾಗಿದೆ. ಇದರಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆದು ಹೋಗಿವೆ. ರಾಜ್ಯ ಬಿಜೆಪಿ ಸರಕಾರಕ್ಕೆ ತನಿಖೆ ನಡೆಸುವ ಧೈರ್ಯವಿಲ್ಲ. ಭ್ರಷ್ಟಾಚಾರ ಹೊರಬಂದರೆ ಈ ಸರಕಾರದ ಬುಡಕ್ಕೇ ಬರುತ್ತದೆ ಎಂಬ ಭಯ ಅವರದ್ದು. ಯಾಕೆಂದರೆ, ಕಾಣದ ಕೈ ಒಂದು ಇಡೀ ಅಕ್ರಮದ ಹಿಂದೆ ಅಡಗಿದೆ. ಈ ಕಾರಣಕ್ಕಾಗಿಯೇ ಸರಕಾರ ತನಿಖೆಗೆ ಸುತರಾಂ ಒಪ್ಪುತ್ತಿಲ್ಲ ಎಂದು ದೂರಿದರು.

ಸಾರ್ವಜನಿಕರಿಗೆ ಸೇರಿದ ಟ್ರಸ್ಟ್ ಅನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಎಲ್ಲ ರೀತಿಯ ಕುಮ್ಮಕ್ಕು ನೀಡಿ ಖಾಸಗಿ ಕುಟುಂಬ ಒಂದಕ್ಕೆ ಪರಭಾರೆ ಮಾಡಿಕೊಳ್ಳಲು ಹೊರಟ್ಟಿದ್ದಾರೆ. ಇದನ್ನು ಸದನದಲ್ಲಿ ನಾನು ದಾಖಲೆಗಳ ಸಮೇತ ಬಿಚ್ಚಿಟ್ಟಿದ್ದೇನೆ. ಆದರೂ, ಸಚಿವರು ಉಢಾಪೆ ಉತ್ತರ ಕೊಟ್ಟು ಏನೂ ಆಗಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸರಕಾರ ಕೂಡ ಎಲ್ಲ ಗೊತ್ತಿದ್ದರೂ, ಏನೂ ಗೊತ್ತೇ ಇಲ್ಲ ಎನ್ನುವಂತೆ ನಾಟಕ ಆಡುತ್ತಿದೆ ಎಂದು ಆರೋಪಿಸಿದರು.

ಸಚಿವ ಅಶ್ವತ್ಥನಾರಾಯಣ ಸೂಚನೆ ಮೇರೆಗೆ ಅನುಮೋದನೆ ಕೊಟ್ಟಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ತನಿಖೆ ನಡೆದರೆ ಸತ್ಯಾಂಶ ಹೊರ ಬರುತ್ತದೆ. ನಾನು ಕೇವಲ ಅಶ್ವತ್ಥನಾರಾಯಣ ವಿರುದ್ಧ ಹೋರಾಟ ಮಾಡುವುದಿಲ್ಲ. ಸರಕಾರದ ವಿರುದ್ಧವೂ ನನ್ನ ಹೋರಾಟ ಮುಂದುವರೆಯಲಿದೆ ಎಂದರು. ಇದು ಕೇವಲ 40 ಪರ್ಸೆಂಟ್ ಕಮಿಷನ್ ಸರಕಾರವಲ್ಲ. ನಾನು ಪ್ರಸ್ತಾಪಿಸಿರುವುದು 100 ಪರ್ಸೆಂಟ್ ಕಮೀಷನ್ ಪ್ರಕರಣವನ್ನು. ಇದಕ್ಕಾಗಿಯೇ ದಾಖಲೆಗಳನ್ನು ಸಂಗ್ರಹ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಹಾಗೆ ನೋಡಿದರೆ ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಅವರದೇ ಪಕ್ಷದ ಸರಕಾರದಲ್ಲಿ ಸಚಿವರೊಬ್ಬರ ಬ್ರಹ್ಮಾಂಡ ಅಕ್ರಮ ಕುರಿತಂತೆ ನಾನೇ ದಾಖಲೆಗಳ ಸಮೇತ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ. ಕಾದು ನೋಡೊಣ, ಪ್ರಧಾನಿ ಅವರು ಏನು ಕ್ರಮ ಕೈಗೊಳ್ಳುತ್ತಾರೋ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಶಾಸಕ ಮತ್ತು ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಕೆ.ಎನ್.ತಿಪ್ಪೇಸ್ವಾಮಿ ಅವರು ಸೇರಿದಂತೆ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *