ಕಾನೂನು ಜಾರಿಗೊಳಿಸಿ ಅತ್ಯಾಚಾರ ಪ್ರಕರಣಗಳು ನಡೆಯದಂತೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು: ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌

ಕೋಲಾರ: ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದರಿಗೆ ಶೀಘ್ರವಾಗಿ ಶಿಕ್ಷೆಯಾಗಬೇಕು ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕುವ ವಾತಾವರಣ ಸೃಷ್ಟಿಸಬೇಕು ಎಂದು ಒತ್ತಾಯಿಸಿ ನಗರದ ಮೆಕ್ಕೆ ವೃತ್ತದಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ “ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜಕ್ಕೆ ಶೋಭೆ ತರುವಂತದಲ್ಲ. ಇಂತಹ ಪ್ರಕರಣಗಳು ನಡೆದಾಗ ಶಿಕ್ಷೆಗೆ ಒತ್ತಾಯಿಸಿ ಮಹಿಳೆಯರು ಪುರುಷರು ಬೆಂಬಲವಾಗಿ ನಿಲ್ಲಬೇಕಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದರಿಗೆ ಶೀಘ್ರವಾಗಿ ಕಠಿಣವಾದ ಕಾನೂನು ಕ್ರಮಗಳನ್ನು ಜಾರಿ ಮಾಡಲು ಎಂ.ಸಿ.ನಾರಾಯಣ್ ಮತ್ತು ವಿ.ಎಸ್.ಉಗ್ರಪ್ಪ ಅವರ ವರದಿ ಸರ್ಕಾರದ ಮುಂದೆ ಇದ್ದು ಕೂಡಲೇ ಜಾರಿ ಮಾಡಬೇಕು. ಜನಪ್ರತಿನಿಧಿಗಳು ಇಂತಹ ಸಂದರ್ಭಗಳಲ್ಲಿ ರಾಜಕಾರಣ ಮಾಡುವುದು ಬಿಟ್ಟು ಜವಾಬ್ದಾರಿಯುತವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕುʼʼ ಎಂದು ಒತ್ತಾಯಿಸಿದರು.

ಶಾಂತಮ್ಮ ಮಾತನಾಡಿ ʻʻಸಮಾಜದಲ್ಲಿ ಕಾಮುಕರಿಂದ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ.  ಇದರಿಂದ ಹೆಣ್ಣು ಮಕ್ಕಳು ಭಯಭೀತರಾಗಿ ಓಡಾಡುವ ಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆ ಕಾಪಾಡುವ ಹೊಣೆಹೊತ್ತಿರುವಂತಹ ಜನಪ್ರತಿನಿಧಿಗಳು ಬಾಯಿಗೆ ಬಂದಂತಹ ರೀತಿಯಲ್ಲಿ ಮಾತನಾಡಿ ಜನಸಾಮಾನ್ಯರಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಿದ್ದಾರೆ. ಮಹಿಳೆಯರು ಪುರುಷರಂತೆ ಬದುಕುವ ಅವಕಾಶ ಕಲ್ಪಿಸಬೇಕಾಗಿದೆʼʼ ಎಂದರು

ಸಂವಾದ ಸಂಸ್ಥೆಯ ಸುನಿತಾ ಮಾತನಾಡಿ ʻʻಶಿಕ್ಷಣ ಪಡೆಯುವ ಹಕ್ಕನ್ನು ಕಸಿದುಕೊಳ್ಳವ ವಾತಾವರಣದಲ್ಲಿ ನಾವು ಇದ್ದು ಹೆಣ್ಣಿಗೆ ಅನ್ಯಾಯವಾಗಿದೆ. ಆ ಹೆಣ್ಣಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮಾತನಾಡುವುದು ಬಿಟ್ಟು ಅವರಿಗೆ ಬೆಂಬಲವಾಗಿ ನಿಲ್ಲಬೇಕು ಅತ್ಯಾಚಾರ ವೆಸಗಿರುವಂತಹ ಆರೋಪಿಗಳಿಗೆ ಕೂಡಲೇ ಶಿಕ್ಷೆ ನೀಡಿದರೆ ಮಾತ್ರ ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸದೇ ಪ್ರಕರಣಗಳು ಕಡಿಮೆಯಾಗುತ್ತದೆʼʼ ಎಂದರು

ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟನೆಗಳ ಮುಖಂಡರಾದ ಈಧರೆ ವೆಂಕಟಾಚಲಪತಿ, ಎ.ನಳಿನಿಗೌಡ, ಕೊಂಡರಾಜನಹಳ್ಳಿ ಮಂಜುಳ, ನಾರಾಯಣಸ್ವಾಮಿ, ವಿನೋದ್, ರೂಪ, ಕೃಷ್ಣಮೂರ್ತಿ, ನವ್ಯ, ರುದ್ರೇಶ್ ಮುಂತಾದವರು ವಹಿಸಿದ್ದರು.

ವರದಿ: ಸಿ.ಅಮರೇಶ್‌

Donate Janashakthi Media

Leave a Reply

Your email address will not be published. Required fields are marked *