- ಎರಡು ಸಮುದಾಯಗಳ ನಡುವೆ ಜಗಳ
- ಟಿವಿ ಸಂವಾದದಲ್ಲಿ ಬಿಜೆಪಿ ವಕ್ತಾರೆ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ
ಲಕ್ನೋ: ಉತ್ತರ ಪ್ರದೇಶದ ಬಿಜೆಪಿಯ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಉತ್ತರ ಪ್ರದೇಶ ರಾಜ್ಯದ ಕಾನ್ಪುರದಲ್ಲಿ ನೆನ್ನೆ(ಜೂನ್ 03) ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 36 ಮಂದಿಯನ್ನು ಬಂಧಿಸಲಾಗಿದೆ.
ಟಿವಿ ಸಂವಾದದಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಒಂದು ಸಮುದಾಯದ ಸದಸ್ಯರು ಬೆಕೊಂಗಂಜ್ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚಲು ಒತ್ತಾಯಿಸಿದ ನಂತರ ಕಾನ್ಪುರದಲ್ಲಿ ಕೋಮು ಘರ್ಷಣೆ ಸಂಭವಿಸಿದೆ.
ಟಿವಿಯಲ್ಲಿ ಮೂಡಿಬಂದ ಚರ್ಚೆಯೊಂದರಲ್ಲಿ, ನೂಪುರ್ ಶರ್ಮಾರ ಹೇಳಿಕೆಯನ್ನು ಖಂಡಿಸಿದ ಸ್ಥಳೀಯ ಮುಸ್ಲಿಂ ಸಂಘಟನೆಯೊಂದು, ಕಾನ್ಪುರದ ಅತೀ ದೊಡ್ಡ ಸಗಟು ವ್ಯಾಪಾರ ಮಾರುಕಟ್ಟೆಯಾದ ಪರೇಡ್ ಮಾರುಕಟ್ಟೆಯನ್ನು ಮುಚ್ಚುವಂತೆ ಕರೆ ನೀಡಿತ್ತು. ಇದರ ನಡುವೆಯೇ ಪರೇಡ್ ಚೌಕದಲ್ಲಿ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಗುಪೊಂದು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಪ್ರಯತ್ನಿಸಿದ್ದಕ್ಕೆ ಇನ್ನೊಂದು ಗುಂಪಿನವರು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂಸಾಚಾರ ತಾರಕ್ಕೇರಿ ಗುಂಡಿನ ದಾಳಿ, ಹೊಗೆ ಬಾಂಬ್‌ಗಳು ಮತ್ತು ಕಲ್ಲು ತೂರಾಟ ನಡೆದಿದೆ.
ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ. ಘರ್ಷಣೆಯಲ್ಲಿ ಇಬ್ಬರು ಮತ್ತು ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಎಂದು ಕಾನ್ಪುರ ಪೊಲೀಸ್ ಕಮಿಷನರ್ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ.
“ಎರಡು ಸಮುದಾಯದ ನಡುವೆ ಘರ್ಷಣೆ ಪ್ರಾರಂಭವಾಯಿತು. ಪೊಲೀಸರು ತಕ್ಷಣ ಅಲ್ಲಿಗೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಹಿರಿಯ ಅಧಿಕಾರಿಗಳು ಸಹ ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು” ಎಂದು ಕಾನ್ಪುರ ಹಿಂಸಾಚಾರದ ಕುರಿತು ಉತ್ತರ ಪ್ರದೇಶದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದರು.
ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ (ಪಿಎಸಿ) 12 ಕಂಪನಿಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳನ್ನು ಸಹ ಅಲ್ಲಿಗೆ ಕಳುಹಿಸಲಾಗುತ್ತಿದೆ
ವಿವಾದಕ್ಕೆ ಕಾರಣ
ಜ್ಞಾನವಾಪಿ ವಿಷಯದ ಕುರಿತು ಇತ್ತೀಚೆಗೆ ನಡೆದ ಸುದ್ದಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಮುಸ್ಲಿಂ ಸಮುದಾಯದವರು ಖಂಡಿಸಿದರು.