ಕಣ್ಣೂರು : ಐಯುಎಂಎಲ್ ಯುವ ಕಾರ್ಯಕರ್ತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕಣ್ಣೂರಿ ಜಿಲ್ಲೆಯಲ್ಲಿ ನೆನ್ನೆ ತಡರಾತ್ರಿ ಹಿಂಸಾಚಾರ ನಡೆದಿದ್ದು, ಸಿಪಿಐ(ಎಂ) ಪಕ್ಷದ ಕಛೇರಿಗಳ ಮೇಲೆ ಧಾಳಿ ನಡೆದಿದೆ.
ಐಯುಎಂಎಲ್ ಪಕ್ಷದ ಯುವ ನಾಯಕ 22 ವರ್ಷದ ಮನ್ಸೂರ್ ಅಂತ್ಯಕ್ರಿಯೆ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕಳೆದ ಮಂಗಳವಾದ ಎರಡು ಗುಂಪುಗಳ ನಡುವೆ ಭುಗಿಲೆದ್ದ ಹಿಂಸಾಚಾರದಿಂದಾಗಿ 10 ಹೆಚ್ಚಿನ ಎಡಪಕ್ಷಗಳ ಕಛೇರಿಗಳನ್ನು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೋಲಿಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಟಿ ವಿ ಸುಭಾಷೆ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ಸರ್ವಪಕ್ಷಗಳ ಶಾಂತಿ ಸಭೆಯು ನಡೆದಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕಣ್ಣೂರು ವಿಭಾಗದ ಐಜಿ ವೇಣುಗೋಪಾಲ್ ಕೆ ನಾಯರ್ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಪನೂರ್ ನಲ್ಲಿರುವ ಪಕ್ಷದ ಕಚೇರಿಗಳ ಮೇಲೆ ದುಷ್ಕರ್ಮಿಗಳು ಧಾಳಿ ಮಾಡಿ, ವಸ್ತುಗಳನ್ನು ಸುಟ್ಟು ಹಾಕದ್ದಾರೆ ಎಂದು ಸಿಪಿಐ(ಎಂ) ಪಕ್ಷದ ಮುಖಂಡರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಣ್ಣೂರು ಪೊಲೀಸ್ ವರಿಷ್ಟಾಧಿಕಾರಿ ಇಲಾಂಗೋ ಆರ್ ಅವರು ಹಿಂಸಾಚಾರವನ್ನು ತಪ್ಪಿಸಲು ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಗ್ರನೇಟ್ ಧಾಳಿ ಮಾಡಲಾಗಿದೆ ಎಂದು ತಿಳಿಸಿದರು.
ಚೋಕ್ಲಿ ಮತ್ತು ಕೊಲವೆಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಐದು ಪಕ್ಷದ ಕಛೇರಿಗಳಿಗೆ ನುಗ್ಗಿದ ದುಷ್ಕರ್ಮಿಗಳ ತಂಡ ಧ್ವಂಸ ಮಾಡಿದ್ದಾರೆ. ಈ ಬಗ್ಗೆ ಐದಾರು ಜನ ಐಯುಎಂಎಲ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಕೆಲವರು ತಪ್ಪಿಸಿಕೊಂಡಿದ್ದಾರೆ. ಅಲ್ಲದೆ, ಧಾಳಿಕೋರರು ಪೊಲೀಸ್ ವಾಹನಕ್ಕೆ ಹಾನಿ ಮಾಡಿ, ಸಿಬ್ಬಂದಿಗಳಿಗೆ ಗಾಯಗೊಳಿಸಿದ್ದಾರೆ ಎಂದು ತಿಳಿಸಿದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳ ಮನೆಗಳ ಮೇಲೂ ಧಾಳಿ ನಡೆದಿದೆ. ಅದರಲ್ಲಿ ಕೆಲವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಘಟನೆ ನಂತರ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ಹತೋಟಿ ತರಲಾಗುತ್ತಿದೆ ಎಂದರು.
‘ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಅಂತ್ಯಕ್ರಿಯೆ ಸಂಜೆ ತಡವಾಗಿ ನಡೆಯಿತು ಮತ್ತು ಕೆಲವರು ಪಕ್ಷದ ಕಚೇರಿಗಳ ಮೇಲೆ ತಡರಾತ್ರಿ ಧಾಳಿ ಮಾಡಿದ್ದು, ಪಕ್ಷದ ಕಚೇರಿಯಲ್ಲಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದಾರೆ, ಕೆಲವು ವಸ್ತುಗಳನ್ನು ಸುಟ್ಟು ಹಾಕಿದ್ದಾರೆ. ಅಲ್ಲದೆ ಪಕ್ಷದ ಕಛೇರಿಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಕಣ್ಣೂರು ವಿಭಾಗ ಐಜಿ ವೇಣುಗೋಪಾಲ್ ಕೆ ನಾಯರ್ ತಿಳಿಸಿದ್ದಾರೆ.
ಕಣ್ಣೂರು ಜಿಲ್ಲೆಯಲ್ಲಿ ಕನಿಷ್ಠ ಐದು ಸಿಪಿಐ(ಎಂ) ಪಕ್ಷದ ಕಚೇರಿಗಳನ್ನು ಐಯುಎಂಎಲ್ ಕಾರ್ಯಕರ್ತರು ಮುಚ್ಚಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳುತ್ತಿದ್ದರೂ ಸಹ ಮುಸ್ಲಿಂ ಲೀಗ್ ಕಾರ್ಯಕರ್ತರು ಸಿಪಿಐ(ಎಂ) ಕುಟುಂಬಗಳಿಗೆ ಬೆದರಿಕೆ ಹಾಕುವುದು ಮುಂದುವರೆದಿದೆ. ಎಂದು ಪಕ್ಷದ ಮುಖಂಡರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.
ಐಯುಎಂಎಲ್ ಕಾರ್ಯಕರ್ತನ ಸಾವಿನ ನಂತರ ಸಿಪಿಐ(ಎಂ) ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮೂಲಗಳು ತಿಳಿಸಿವೆ. ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ನ ಪ್ರಮುಖ ಮಿತ್ರನಾದ ಐಯುಎಂಎಲ್ನ ಯುವ ವಿಭಾಗ ಯೂತ್ ಲೀಗ್ ನ ಕಾರ್ಯಕರ್ತನಾಗಿದ್ದನು. ಸ್ಥಳೀಯ ಸಾಕ್ಷಿಗಳ ಪ್ರಕಾರ, ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನಕಲಿ ಮತದಾನದ ಆರೋಪದ ಮೇಲೆ ಕೂತುಪರಂಬ ಕ್ಷೇತ್ರದ ಪರಾಲ್ ಪ್ರದೇಶದಲ್ಲಿ ಘರ್ಷಣೆ ನಡೆದಾಗ ಈ ಘಟನೆ ಸಂಭವಿಸಿದೆ.
ಗಂಭೀರ ಗಾಯಗಳಾಗಿದ್ದ ಮನ್ಸೂರು ಅವರನ್ನು ಕೋಝಿಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಮನ್ಸೂರ್ ಹತ್ಯೆಯ ಹಿಂದೆ ಆಡಳಿತಾರೂಢ ಸಿಪಿಐ(ಎಂ) ಕೈವಾಡವಿದೆ ಎಂದು ಐಯುಎಂಎಲ್ ಆರೋಪಿಸಿದರೆ, ಎಡಪಂಥೀಯರು ಈ ಆರೋಪವನ್ನು ತಳ್ಳಿಹಾಕಿದರು ಮತ್ತು ಇದು ರಾಜಕೀಯ ಕೊಲೆ ಅಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.