ಕಣ್ಣಿಗೆ ಮಣ್ಣೆರಚುವ ಯಡ್ಡಿ ಬಜೆಟ್

ಹಣಕಾಸು ಇಲಾಖೆಯನ್ನು ತನ್ನ ಮುಷ್ಟಿಯಲ್ಲಿ ಭದ್ರವಾಗಿ ಇಟ್ಟುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ 8ನೇ ಕೂಸಿಗೆ ಜನ್ಮ ನೀಡಿದ್ದಾರೆ. ಆದರೆ ಅದು ಹೆಣ್ಣೋ ಅಥವಾ ಗಂಡೋ ಎನ್ನುವುದು ತಿಳಿಯದಿದ್ದರೆ ಅದು ಯಡ್ಡಿಯವರ ತಪ್ಪಲ್ಲ ಎನ್ನುವುದು ತಿಳಿಯದಿದ್ದರೆ ಅದು ಯಡ್ಡಿಯವರ ತಪ್ಪಲ ಎನ್ನುತ್ತಿದಾರೆ ಕಮಲದ ಮಂದಿ. ವಿಧಾನ ಮಂಡಲದಲ್ಲಿ ಚರ್ಚೆ ಸುಸೂತ್ರವಾಗಿ ನಡೆದರೆ ಈ ಬಜೆಟ್‌ನ ನಿಜ ಸ್ವರೂಪ ಬಯಲಾಗಬಹುದು.

ನಾನು ಈ ಬಾರಿ ಕೊರತೆಯ ಬಜೆಟ್ ಮಂಡಿಸುವುದಿಲ್ಲ ಎಂದು ಯಡಿಯೂರಪ್ಪನವರು ಹೇಳುತ್ತಿದ್ದರು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಾವು ಹೇಳುವುದು ಒಂದಾದರೆ ಮಾಡುವುದು ಇನ್ನೊಂದು ಎಂದು ಮತ್ತೊಮ್ಮೆ ಸಾಬೀತ್‌ಪಡಿಸಿದ್ದಾರೆ.

ಯಡಿಯೂರಪ್ಪರವರು ಮಂಡಿಸಿದ, ಪ್ರಸಕ್ತ ಅಧಿವೇಶನದಲ್ಲಿ ಚರ್ಚೆಯಾಗಬೇಕಾದ ಬಜೆಟ್ 46 ಸಾವಿರ ಕೋಟಿ ರೂ. ಗಳ ಕೊರತೆಯ ಬಜೆಟ್ ಆಗಿದೆ. ವರಮಾನ ಸಂಗ್ರಹದಲ್ಲಿ ಉಂಟಾಗಿರುವ ಅಪಾರ ಪ್ರಮಾಣದ ಕೊರತೆಯನ್ನು ನೀಗಲೂ 71 ಸಾವಿರ ಕೋಟಿ ರೂ. ಸಾರ್ವಜನಿಕ ಸಾಲ ಪಡೆಯುವ ಇಂಗಿತವನ್ನು ಪ್ರಕಟಿಸಲಾಗಿದೆ.

ಬಜೆಟ್ ಕೊರತೆಯನ್ನು ನೀಗಿಸಲು ಸರ್ಕಾರ ಹೆಚ್ಚೆಚ್ಚು ಸಾಲಕ್ಕೆ ಕೈಯೊಡ್ಡಬೇಕಾಗುತ್ತದೆ. ತಂದ ಸಾಲಕ್ಕೆ ಅಪಾರ ಪ್ರಮಾಣದ ಬಡ್ಡಿ ತೆರಬೇಕಾಗುತ್ತದೆ. ಬಡ್ಡಿ ಸಹಿತದ ಈ ಸಾಲದ ಹೊರೆ ಜನಸಾಮಾನ್ಯರ ಮೇಲೆ ಹೇರಲಾಗುತ್ತದೆ. ಪರೋಕ್ಷ ತೆರಿಗೆಗಳ ಭಾರದಿಂದ ಈಗಾಗಲೇ ಬಗ್ಗಿ ಹೋಗಿರುವ ಜನಸಾಮಾನ್ಯರ ಬೆನ್ನು ಮುರಿದುಹೋಗುತ್ತದೆ. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎನ್ನುವವರೆಗೆ ನಾಯಕರಾಗಲು ಹೊರಟಿದ್ದಾರೆ ಯಡಿಯೂರಪ್ಪನವರು.

ಯಡಿಯೂರಪ್ಪನವರ ಹೊಗಳು ಭಟ್ಟರು ಇನ್ನೊಂದು ವಿಷಯದತ್ತ ಬಾರೀ ಪ್ರಚಾರ ಮಾಡುತ್ತಿದ್ದಾರೆ. ಈ ಸಲದ ಬಜೆಟ್‌ನಲ್ಲಿ ಒಂದೇ ಒಂದು ಪೈಸೆ ಹೆಚ್ಚಿನ ತೆರಿಗೆ ಹೊರೆಯನ್ನು ಹೇರದೆ ಒಂದು ದಾಖಲೆ ನಿರ್ಮಾಣ ಮಾಡಿದ್ದಾರೆ! ಇದನ್ನು ನಂಬುತ್ತಿರುವ ಜನರಿಗೆ ಕಡಿಮೆ ಇಲ್ಲ. ಇದು ಆತಂಕದ ವಿಷಯವಾಗಿದೆ. ಇದನ್ನು ಹಲವು ಬಾರಿ ಯಡಿಯೂರಪ್ಪನವರು ಹೇಳಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ.

ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಮಾಡಲು ಯಡಿಯೂರಪ್ಪನವರಿಗೆ ಧೈರ್ಯ ಇದೆಯಾ? ಈಗಾಗಲೇ ಕೇಂದ್ರ ಸರ್ಕಾರದ ಕ್ರಮಗಳಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಇದರಿಂದ ಅಗತ್ಯ ವಸ್ತುಗಳ ಹಾಗೂ ಸಾಗಾಟದ ಬೆಲೆಗಳು ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗೆ ಬಜೆಟ್ ಪೂರ್ವದಲ್ಲೇ ಒಂದು ಸುತ್ತಿದ ಬೆಲೆ ಏರಿಕೆಯನ್ನು ಜನತೆಯ ಮೇಲೆ ಹೇರಲಾಗಿದೆ. ಬಜೆಟ್‌ನಲ್ಲಿ ಅದನ್ನು ಮುಚ್ಚಿಡಲಾಗಿದೆ.

ಇದನ್ನೂ ಓದಿ : ಬಜೆಟ್‌ ನಲ್ಲಿ ಏನು ಇಲ್ಲ! ಅಂಕಿ ಅಂಶಗಳನ್ನು ತಿರುಗು ಮುರುಗು ಮಾಡಿದ್ದಾರೆ!!?

ಪೆಟ್ರೋಲ್, ಡಿಸೆಲ್, ಅಡುಗೆ ಅನಿಲಗಳ ಬೆಲೆಗಳನ್ನು ಇಳಿಸಿ ಸರ್ಕಾರ ಜನರ ನೆರವಿಗೆ ಬರಬಹುದಾಗಿತ್ತು. ಆ ಮೂಲಕ ಬೆಲೆಏರಿಕೆಯಿಂದ ತತ್ತರಿಸುವ ಜನ ಸಾಮಾನ್ಯರ ನೆರವಿಗೆ ಬರಬಹುದಾಗಿತ್ತು. ಆದರೆ ಯಡಿಯೂರಪ್ಪ ಸರಕಾರ ಹಾಗೆ ಮಾಡಲು ಮನಸ್ಸು ಮಾಡಲಿಲ್ಲ. ಹೀಗೆ ಯಡಿಯೂರಪ್ಪನವರು ಜನತೆಗೆ ದ್ರೋಹ ಮಾಡಲು ಸಜ್ಜಾಗಿದ್ದಾರೆ. 

ಯಡಿಯೂರಪ್ಪ ಸರ್ಕಾರ ತನ್ನ ದುರಾಡಳಿತವನ್ನು ಮರೆಮಾಚಲು ನೈಸರ್ಗಿಕ ವಿಕೋಪ, ಕೋವಿಡ್-19 ದುರಂತವನ್ನು ಚೆನ್ನಾಗಿ ಉಪಯೋಗಿಸುತ್ತಿದ್ದಾರೆ. ‘ಕೋವಿಡ್ ನಿಂದಾಗಿ ಕೆಲಸ ಕಳೆದುಕೊಂಡ ಜನರಿಗೆ ನೆರವಿನ ಹಸ್ತ’ ಚಾಚಲು ಮುಂದಾಗುತ್ತಿಲ್ಲ. ಬಜೆಟ್ ಪೂರ್ವದಲ್ಲಿ ಒಂದು ಸುತ್ತಿನ ಬೆಲೆ ಏರಿಕೆ ಆವರಿಸಿಕೊಂಡಿದೆ. ಬಜೆಟ್ ಕೊರತೆ, ಸಾಲದ ಬಡ್ಡಿ ಹೇರುವ ಮೂಲಕ ಇನ್ನೊಂದು ಸುತ್ತಿನ ಬೆಲೆ ಏರಿಕೆಗೆ ಸರ್ಕಾರ ಸಜ್ಜಾಗುತ್ತಿದೆ. ಬಿಜೆಪಿ ಸರ್ಕಾರಗಳ ಈ ಜನವಿರೋಧಿ ನೀತಿಗಳ ವಿರುದ್ಧ ಜನಸಂಗ್ರಾಮಗೊಳಿಸುವುದೊಂದೇ ಉಳಿದಿರುವ ದಾರಿ.

Donate Janashakthi Media

Leave a Reply

Your email address will not be published. Required fields are marked *