ಮಂಡ್ಯ : 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕಸಾಪ ಹೊರಡಿಸಿದ್ಧ ನಿಯಮಾವಳಿಯಲ್ಲಿ ‘ಮಾಂಸಾಹಾರ ನಿಷೇಧ’ ಎಂಬ ಪದವನ್ನು ಕಸಾಪ ತನ್ನ ವೆಬ್ಸೈಟ್ ನಿಂದ ಕೈಬಿಟ್ಟಿದೆ. ಇದು ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ಹೇರಿದ್ದಕ್ಕೆ ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೇ ಮಾಂಸವನ್ನು ಮದ್ಯ ಮತ್ತು ತಂಬಾಕಿನೊಂದಿಗೆ ಸಮೀಕರಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಸಾಪ ಈ ಕ್ರಮ ಕೈಗೊಂಡಿದೆ. ಮಾಂಸಾಹಾರದ ಪರ ಹೋರಾಟಕ್ಕೆ ಮೊದಲ ಜಯವಾಗಿದೆ.


ಇದನ್ನೂ ಓದಿ : ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ : ಬೇಳೆಯ ಜೊತೆ ಮೂಳೆ… ಹಪ್ಪಳದ ಜೊತೆ ಕಬಾಬ್ ಇರಲಿ!
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಇರಬೇಕೆಂದು ಆಗ್ರಹಿಸಿ ಮಂಡ್ಯದಲ್ಲಿಯಷ್ಟೆ ಅಲ್ಲದೇ ನಾಡಿನ ವಿವಿಧೆಡೆಯಿಂದ ಹೋರಾಟ ತೀವ್ರವಾಗಿದೆ. ಮಂಡ್ಯದಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳು ಮಾಂಸಾಹಾರ ಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವಿಗೆ ಮನವಿಯಲ್ಲಿ ಸಲ್ಲಿಸಿದರು. ಅದೇ ಸಂದರ್ಭದಲ್ಲಿ ಮೊಟ್ಟೆಯನ್ನು ತಿಂದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಕಸಾಪ ‘ಮಾಂಸಾಹಾರ’ ನಿಷೇಧವನ್ನು ವಾಪಸ್ ಪಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಂಸಾಹಾರವು ನಿರ್ಬಂಧಿಸುವುದು ಸಾಧುವಲ್ಲ. ಅದರಲ್ಲೂ ಮಂಡ್ಯ ಜಿಲ್ಲೆಯ ಹಬ್ಬ, ಸಂಭ್ರಮ, ಸಮ್ಮೇಳನಗಳು ಮಾಂಸಾಹಾರಿ ಊಟೋಪಚಾರಗಳಿಂದ ಹೆಸರುವಾಸಿಯಾಗಿವೆ. ಅಲ್ಲದೇ ಸಮ್ಮೇಳನದಲ್ಲಿ ಭಾಗವಹಿಸುವ ಬಹುಸಂಖ್ಯಾತರು ಮಾಂಸಾಹಾರಿಗಳೇ ಆಗಿರುವಾಗ ಈ ನಿಷೇಧಗಳು ಯಾತಕ್ಕಾಗಿ? ಎಂದು ಹಲವು ಸಂಘಟನೆಗಳು ಪ್ರಶ್ನೆ ಮಾಡಿದ್ದವು.