ಕನ್ನಡದ ‘ಆರ್‌ಎಸ್‌ಎಸ್‌: ಆಳ ಮತ್ತು ಅಗಲ’ ಪುಸ್ತಕ ಐದು ಭಾಷೆಗೆ ಅನುವಾದ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವ ನಾಡಿನ ಸಾಕ್ಷಿಪ್ರಜ್ಞೆ ಎಂದೆ ಕರೆಯಲ್ಪಡುವ ಸಾಹಿತಿ ದೇವನೂರು ಮಹಾದೇವ ಅವರು ತಮ್ಮ “ಆರ್‌ಎಸ್‌ಎಸ್: ಆಳ ಮತ್ತು ಅಗಲ” ಎಂಬ ಕಿರು ಪುಸ್ತಕಕ್ಕೆ ಭಾರೀ ಸ್ಪಂದನೆ ಸಿಗುತ್ತಿದೆ. ಎಲ್ಲೆಡೆ ಈ ಪುಸ್ತಕದ ಕುರಿತೆ ಮಾತಾಗಿದೆ.

ಪುಸ್ತಕ ಕೊಂಡು ಓದುವವರಿಗೆ ಕೊರತೆಯಿಲ್ಲ ಎಂಬುವಂತೆ ದೇವನೂರು ಮಹಾದೇವ ಅವರ ‘ಆರ್‌ಎಸ್‌ಎಸ್‌: ಆಳ ಮತ್ತು ಅಗಲ’ ಪುಸ್ತಕ ಉತ್ತರ ನೀಡಿದೆ. ಪುಸ್ತಕ ಕ್ರಾಂತಿಗೆ ಕಾರಣವಾಗಿರುವ ಈ ಚಿಕ್ಕ ಪುಸ್ತಕ ಇದೀಗ 40,000 ಪ್ರತಿಗಳು ಓದುಗರ ಕೈ ಸೇರಿವೆ. ಈಗ ಈ ಪುಸ್ತಕ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಳ್ಳುತ್ತಿದೆ.

ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪುಸ್ತಕ ಪ್ರಕಾಶಕರ ವಲಯಕ್ಕೆ ಬಿದ್ದ ಹೊಡೆತವನ್ನು ಈ ಪುಸ್ತಕವು ಹೊಸ ಉತ್ಸಾಹವನ್ನು ತುಂಬಿದೆ. 64 ಪುಟಗಳ ಕಿರು ಪುಸ್ತಕದ ಬೆಲೆ 40 ರೂಪಾಯಿಯಾಗಿದೆ. ಸಾಹಿತಿ ದೇವನೂರು ಮಹಾದೇವ ಅವರು ಕೃತಿ ಹಕ್ಕುಸ್ವಾಮ್ಯವನ್ನು ಕೂಡ ಬಿಟ್ಟುಕೊಟ್ಟಿದ್ದಾರೆ. ಯಾವ ಪ್ರಕಾಶಕರು ಬೇಕಾದರೂ ಇದನ್ನು ಪ್ರಕಟಿಸಬಹುದು. ಆದರೆ ಬೆಲೆಯನ್ನು ಜನರ ಕೈಗೆಟುಕುವಂತೆ ಇಡಬೇಕು ಅಷ್ಟೆ ಎಂದಿದ್ದಾರೆ.

ಭಾರೀ ಬೇಡಿಕೆ ಇರುವ ಪುಸ್ತಕ

64 ಪುಟಗಳ ಈ ಪುಸ್ತಕವನ್ನು ಈವರೆಗೆ ಗೌರಿ ಮೀಡಿಯಾ ಟ್ರಸ್ಟ್, ಓದು ವಿನಿಮಯ ಬಳಗ, ನವಕರ್ನಾಟಕ, ಕ್ರಿಯಾ ಪ್ರಕಾಶನ, ಅಭಿರುಚಿ ಪ್ರಕಾಶನ, ಮಾನವ ಬಂಧುತ್ವ ವೇದಿಕೆ, ನಡೆನುಡಿ ಚಿಕ್ಕನಾಯಕನಹಳ್ಳಿ, ಜನಸ್ಪಂದನ ತಿಪಟೂರು, ಭಾರತೀಯ ಟ್ರಸ್ಟ್, ನೀಲಿಹೆಜ್ಜೆ, ಆದಿಮ, ನಯನ, ಶ್ಯಾಮ್ ಮತ್ತು ಸಂಕಥನ ಸೇರಿದಂತೆ ಹಲವಾರು ಪ್ರಕಾಶಕರು ಪ್ರಕಟಿಸಿದ್ದಾರೆ.

ಪುಸ್ತಕಕ್ಕೆ ಸಿಗುತ್ತಿರುವ ಸ್ಪಂದನೆಯಿಂದ ಬೇಡಿಕೆ ಹೆಚ್ಚಾಗಿದ್ದು, ಪುಸ್ತಕ ಮುದ್ರಣ ಈ ತಿಂಗಳ ಅಂತ್ಯದಲ್ಲಿ ಒಂದು ಲಕ್ಷ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪುಸ್ತಕದ ಅನುವಾದಕ್ಕಾಗಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಾಶಕರು ಮುಂದೆ ಬಂದಿದ್ದು, ಅನುವಾದಗಳು ನಡೆಯುತ್ತಿವೆ. ತಮಿಳು ಭಾಷೆಗೆ ಬರಹಗಾರರಾದ ಕನಕರಾಜು ಅನುವಾದ ಮಾಡುತ್ತಿದ್ದು, ತಮಿಳುನಾಡಿನ ಯಾವರೂಂ ಪ್ರಕಾಶನ ಸಂಸ್ಥೆ ಪ್ರಕಟಿಸಲಿದೆ ಎನ್ನಲಾಗುತ್ತಿದೆ.

ಅಂತಹದ್ದೇನಿದೇ ಕೃತಿಯಲ್ಲಿ?

ದೇವನೂರು ಮಹಾದೇವ ಅವರು ʻಆರ್‌ಎಸ್‌ಎಸ್‌: ಆಳ ಮತ್ತು ಅಗಲʼ ಪುಸ್ತಕದ ಮುನ್ನುಡಿಯಲ್ಲಿ ಈ ಪುಸ್ತಕವು “ಆರ್‌ಎಸ್‌ಎಸ್‌ನ ನೈಜ ಸ್ವರೂಪ ಮತ್ತು ಉದ್ದೇಶವನ್ನು ವಿಮರ್ಶಾತ್ಮಕವಾಗಿ ಗಮನಿಸಿ, ಅದನ್ನು ಜನರ ಮುಂದೆ ಇಡುವ ಪ್ರಯತ್ನವಾಗಿದೆ” ಎಂದು ಬರೆದಿದ್ದಾರೆ. ಈ ಪುಸ್ತಕದಲ್ಲಿ ಹಿಂದೂ ಬಲಪಂಥೀಯ ಸಂಘಟನೆಯ ಸಿದ್ಧಾಂತ ರೂಪಿಸಿದ ಆರ್‌ಎಸ್‌ಎಸ್‌ನ ಗೋಲ್ವಾಲ್ಕರ್, ಹೆಡ್ಗೇವಾರ್ ಅವರ ʻಚಿಂತನ ಗಂಗಾʼದ ಭಾಗಗಳು ಮತ್ತು ವಿ.ಡಿ. ಸಾವರ್ಕರ್ ಭಾಷಣಗಳನ್ನು ಉಲ್ಲೇಖಿಸಿ ಹೇಗೆ ಇವರೆಲ್ಲಾ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಮತ್ತು ಐಕ್ಯತೆಯನ್ನು ವಿರೋಧಿಸುತ್ತಾರೆ ಎಂಬುದನ್ನು ವಿವರಿಸಲಾಗಿದೆ.

ಜೊತೆಗೆ ಈ ಕೃತಿಯು ವರ್ಣಾಶ್ರಮ ಧರ್ಮ ಮತ್ತು ಮನುಸ್ಮೃತಿ, ಆರ್ಯರ ಪ್ರಾಬಲ್ಯ ಮತ್ತು ಭಾರತದ ಸಂವಿಧಾನ ಮತ್ತು ಒಕ್ಕೂಟದ ನಾಶದ ಬಗ್ಗೆ ಮಾತನಾಡುತ್ತದೆ. ರಾಜ್ಯ ಸರ್ಕಾರವು ಇತ್ತೀಚೆಗೆ ಪರಿಚಯಿಸಿದ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಮತಾಂತರ ವಿರೋಧಿ ಮಸೂದೆಯು ಈ ಬಲಪಂಥೀಯ ಮಾದರಿಗಳನ್ನು ನಾಗರಿಕ ಸಮಾಜದ ಮೇಲೆ ಹೇರುವ ಕ್ರಮವಾಗಿದೆ ಎಂದು ದೇವನೂರು ಪ್ರಸ್ತುತಪಡಿಸಿದ್ದಾರೆ.

ಈ ಪುಸ್ತಕವನ್ನು ಆರ್‌ಎಸ್‌ಎಸ್‌ನ ಪ್ರಾಣ ಎಂದು ಕರೆದಿರುವ ಅವರು, ಪ್ರಗತಿಪರ ಸಂಘಟನೆಗಳು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ “ವರ್ಣಾಶ್ರಮ ಧರ್ಮವನ್ನು ಹೇರಲು ಪ್ರಯತ್ನಿಸುತ್ತಿರುವ ಪ್ರತಿಗಾಮಿ ಶಕ್ತಿಗಳ ಮುಖವಾಡಗಳನ್ನು ಕಳಚಬೇಕು” ಎಂದು ಕರೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *