ಬೆಂಗಳೂರು : ಭಾಷಾತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ ಶತಾಯುಷಿ, ಪ್ರೊ.ಜಿ ವೆಂಕಟಸುಬ್ಬಯ್ಯ (108) ನಿಧನರಾಗಿದ್ದಾರೆ.
ಭಾನುವಾರ ತಡರಾತ್ರಿ 1.15ಕ್ಕೆ ಅವರು ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ. ಒಂದು ವಾರದ ಹಿಂದೆ ಮೂತ್ರನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಗುಣಮುಖರಾಗಿ ಇಂದು (ಸೋಮವಾರ) ಆಸ್ಪತ್ರೆಯಿಂದ ಬಿಡುಗಡೆಯಾಗುವರಿದ್ದರು, ಆದರೆ ರಾತ್ರಿ ವಯೋಸಹಜವಾಗಿ ನಿಧನರಾದರೆಂದು, ಮತ್ತು ಅಂತ್ಯಕ್ರಿಯೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಮಧ್ಯಾಹ್ನ 12.30 ಕ್ಕೆ ನಡೆಯಲಿದೆ. ಜಯನಗರ 7ನೇ ಬ್ಲಾಕ್ನ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರೊ|| ಜಿ ವೆಂಕಟಸುಬ್ಬಯ್ಯ ನವರು ಕನ್ನಡದ ಏಳಿಗೆಗಾಗಿ ದುಡಿದವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ ‘ಇಗೋ ಕನ್ನಡ’ ಎಂಬ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. 1991 ರಿಂದ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇವರ ಭಾಷಾ ಸಾಹಿತ್ಯ ಸಾಧನೆಗೆ 2005 ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇವರು ಬೆಂಗಳೂರಿನಲ್ಲಿ ನಡೆದ 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
1913 ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು, ಮೈಸೂರಿನಲ್ಲಿಯೆ ಬೆಳೆದವರು. ಇವರ ತಂದೆ ಗಂಜಾಂ ತಿಮ್ಮಣ್ಣಯ್ಯನವರು ಸಂಸ್ಕೃತ ಹಾಗೂ ಕನ್ನಡದ ವಿದ್ವಾಂಸರಾಗಿದ್ದರು. 1937 ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಸುವರ್ಣಪದಕವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು. 1939 ರಿಂದ ಪ್ರಾರಂಭಿಸಿ ಸುಮಾರು 40 ವರ್ಷಗಳ ಕಾಲ ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.
ಜಿವಿ ಯವರಿಗೆ ಸಂದ ಪ್ರಶಸ್ತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
ಪಂಪ ಪ್ರಶಸ್ತಿ (2015)
ನಾಡೋಜ ಪ್ರಶಸ್ತಿ (2005)
1974 ರಲ್ಲಿ ಬೀದರನಲ್ಲಿ ನಡೆದ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
2011 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ 77 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
2014 ನೇ ಸಾಲಿನ ಪಂಪ ಪ್ರಶಸ್ತಿ, 2017ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ.
2018 ರ “ಭಾಷಾ ಸಮ್ಮಾನ್” (ಕೇಂದ್ರ ಸಾಹಿತ್ಯ ಅಕಾಡೆಮಿ) ಸೇರಿದಂತೆ ಅನೇಕ ಪ್ರಶಸ್ತಿಗಳ ಗೌರವಕ್ಕೆ ಅವರು ಪಾತ್ರರಾಗಿದ್ದರು.