ಬಳ್ಳಾರಿ : ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ನೂರು ಕೋಟಿ ಅನುದಾನವನ್ನು ಮೀಸಲಿಡಬೇಕು. ಹಾಗೂ ಬಳ್ಳಾರಿ ಜಿಲ್ಲೆಯ ಖನಿಜ ನಿಧಿಯಿಂದ 10 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.
ಶ್ರೀ ಮಾ.ನಿ.ಪ್ರ. ಪ್ರಭುದೇವರ ಮಠ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಏಷ್ಯಾದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಲು ಇರುವ ನಾಡಿನ ಜನರ ಆಶಯದಂತೆ ಕನ್ನಡ ವಿಶ್ವವಿದ್ಯಾಲಯವನ್ನು ವಿಶ್ವಪ್ರಕ್ಯಾತ ಹಂಪಿಯಲ್ಲಿ ಕಟ್ಟಲಾಗಿದೆ. ಆದರೆ ಇಂದು ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದೆ, ಕನ್ನಡ ನಾಡು ನುಡಿಗೆ ದ್ರೋಹ ಮಾಡುತ್ತಿದೆ. ಕನ್ನಡ ಭಾಷೆ ಉಳಿಯಬೇಕಾದರೆ ವಿಶೇಷ ಅನುದಾನ ನೀಡಿ ಪೋಷಣೆಯಾಗಬೇಕು. ಇಲ್ಲದಿದ್ದಲ್ಲಿ ಕನ್ನಡ ಭಾಷೆಯನ್ನ ನಾವು ಕೇವಲ ಕೆಲವೇ ಪ್ರದೇಶಕ್ಕೆ ಸೀಮಿತಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ವಿಸ್ತಿರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕವನ್ನು ವ್ಯಕ್ತಿಪಡಿಸಿದರು.
ಇದನ್ನು ಓದಿ : ಕನ್ನಡ ವಿಶ್ವ ವಿದ್ಯಾಲಯಕ್ಕೆ ಅನುದಾನ ಕೊರತೆ : ಆರ್ಥಿಕ ಮುಗ್ಗಟ್ಟಿನತ್ತ ಹಂಪಿ ವಿವಿ
ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಯ ಬಿ ಮಾಳಮ್ಮ ಮಾತನಾಡಿ, ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಭಾಷೆ ನಾಡು ನುಡಿಗೆ ವಿಶೇಷವಾಗಿ 2021-22ರ ರಾಜ್ಯ ಬಜೆಟ್‌ನಲ್ಲಿ 100 ಕೋಟಿ ಅನುದಾನವನ್ನು ಘೋಷಿಸಬೇಕು. ಈಗಾಗಲೇ ಕನ್ನಡ ವಿಶ್ವವಿದ್ಯಾಲಯ 70 ಕೋಟಿ ಅನುದಾನಕ್ಕೆ ಬೇಡಿಕೆಯನ್ನ ಸರ್ಕಾರಕ್ಕೆ ಸಲ್ಲಿಸಿದೆ. ಇದು ಕೇವಲ ಆಡಳಿತಾತ್ಮಕ ಬೇಡಿಕೆಯಾಗಿದ್ದು ಕನ್ನಡ ವಿಶ್ವವಿದ್ಯಾಲಯ ನಾಡಿನ ಜನರ ವಿಶ್ವವಿದ್ಯಾಲಯವಾಗಲು ಮತ್ತು ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಲು ಕನಿಷ್ಠ 100 ಕೋಟಿ ಅನುದಾನ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಮಾಳಮ್ಮ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಇದೇ ಫೇಬ್ರವರಿ 25 ರಂದು ವಿಶ್ವವಿದ್ಯಾಲಯದ ಸಂಶೋಧಕರು ನಾಡಿನ ಪ್ರಗತಿಪರ ಸಂಘಟನೆಗಳು ಮತ್ತು ಮಾನಿಪ್ರ ಪ್ರಭುದೇವರ ಸ್ವಾಮಿ ವಿರಕ್ತಮಠ ಸಂಡೂರು ಇವರ ನೇತೃತ್ವದಲ್ಲಿ ಆನಂದ್ ಸಿಂಗ್ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಮನವಿಯನ್ನ ಸಲ್ಲಿಸಲಿವೆ ಎಂದು ಎಸ್.ಎಫ್.ಐ ರಾಜ್ಯ ಮುಖಂಡ ಸಂಗಮೇಶ್ ಶಿವಣಗಿ ತಿಳಿಸಿದರು.
ದಲಿತ ಹಕ್ಕುಗಳ ಸಮಿತಿಯ ಜಂಬಯ್ಯ ನಾಯಕ್ ಮಾತನಾಡಿ, ಈ ವಿಶ್ವವಿದ್ಯಾಲಯದಲ್ಲಿ ಹೆಚ್ಚಾಗಿ ತಳ ಸಮುದಾಯದ ಮತ್ತು ಹಳ್ಳಿಗಾಡಿನ ಮಕ್ಕಳು ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚು ಸಂಶೋಧನೆಯನ್ನು ಕೈಗೊಂಡಿರುವುದರಿಂದ ವಿಶೇಷ ಯೋಜನೆಯಾದ ಎಸ್ಸಿಪಿ/ಟಿಎಸ್ಪಿಯ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಿ ಬಾಕಿ ಇರುವ ಸಂಶೋಧಕರ ಫೆಲೋಶಿಪ್ ನೀಡಬೇಕು ಹಾಗೂ ದೇವರಾಜ ಅರಸು ಇಲಾಖೆಯಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಬಾಕಿ ಉಳಿಸಿಕೊಂಡಿರುವ ಮಾಸಿಕ ಹತ್ತು ಸಾವಿರ ಸಹಾಯಧನ ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಬಾಕಿ ಉಳಿಸಿಕೊಂಡಿರುವ ಸಹಾಯಧನ ಬಿಡುಗಡೆ ಮಾಡಿ 25000 ರೂ ಗಳು ಹಿಂದಿನ ಆದೇಶದಂತೆ ನೀಡಬೇಕು. ವಿಶ್ವವಿದ್ಯಾಲಯ ವ್ಯಾಪ್ತಿಯಎಸ್ಸಿ/ಎಸ್ಟಿಸಂಶೋಧನ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್‌ವ್ಯವಸ್ಥೆ ತುರ್ತಾಗಿ ಕಲ್ಪಿಸಬೇಕು ಹಾಗೂ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಬಾಕಿ ಉಳಿಸಿಕೊಂಡ 25 ತಿಂಗಳ ಸಹಾಯಧನ ಕೂಡಲೇ ಬಿಡುಗಡೆ ಮಾಡಿ ಸಂಶೋಧನೆಗೆ ಪ್ರೋತ್ಸಾಹಿಸಬೇಕೆಂದು ಎಂದು ಆಗ್ರಹಿಸಿದರು.
ಇದನ್ನು ಓದಿ : ಉನ್ನತ ಶಿಕ್ಷಣದ ಅಪಹರಣಕ್ಕೆ ಯಾರು ಹೊಣೆ?
ಕನ್ನಡ ವಿಶ್ವವಿದ್ಯಾಲಯವು ಅನೇಕ ಮಾನವಿಕ ಅಧ್ಯಯನಗಳನ್ನ ನಡೆಸುತ್ತಿದೆ. ಇಂತಹ ವಿಶೇಷ ಅಧ್ಯಯನಗಳು ಕೇವಲ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾತ್ರ ಇವೆ. ಈ ಮುಖೇನ ನಾಡು ನುಡಿಯನ್ನ ಕಟ್ಟಬೇಕಾದರೆ ಪ್ರತೀ ವರ್ಷ ಬಜೆಟ್‌ನಲ್ಲಿ 100 ಕೋಟಿ ಅನುದಾನ ನೀಡಲೇ ಬೇಕು. ಉಪ ಮುಖ್ಯ ಮಂತ್ರಿಗಳಾದ ಅಶ್ವತ್‌ನಾರಯಣ ಅವರು ಮತ್ತು ಆನಂದ್ ಸಿಂಗ್ ಅವರು ಖನಿಜ ನಿಧಿಯಿಂದ 10 ಕೋಟಿ ಹಣ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನೀಡುತ್ತೇವೆ ಎಂದು ವಿಶ್ವವಿದ್ಯಾಲಯ 27 ಘಟಿಕೋತ್ಸವದಲ್ಲಿ ಗೋಷಿಸಿದ್ದಾರೆ. ಈ ಕೂಡಲೆ 10 ಕೋಟಿ ಹಣ ಬಿಡುಗಡೆ ಮಾಡಲು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.