ವೃತ್ತಿಪರ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪಠ್ಯ ಬೋಧನೆ ಅನ್ಯ ವಿಷಯ ತಜ್ಞರು ನಿರ್ವಹಿಸುವುದು ಬೇಡ- ಡಾ. ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪಠ್ಯ ವಸ್ತುಗಳನ್ನು ಕನ್ನಡ ಭಾಷಾ ಅಧ್ಯಾಪಕರ ಬದಲಿಗೆ ಅನ್ಯ ವಿಷಯ ತಜ್ಞರೇ ಬೋಧಿಸುತ್ತಿರುವುದು ವೃತ್ತಿ ಶಿಕ್ಷಣದಲ್ಲಿ ಕನ್ನಡದ ಉಳಿವಿಗೆ ಮಾರಕ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪಶು ಸಂಗೋಪನಾ ಸಚಿವರನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಸಚಿವ ಕೆ.ವೆಂಕಟೇಶ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ವೃತ್ತಿ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ೨೦೧೫ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ವಿಶ್ವವಿದ್ಯಾಲಯಗಳಿಗೆ ಕನ್ನಡ ಬೋಧನೆಯನ್ನು ಕಡ್ಡಾಯಗೊಳಿಸುವ ಕುರಿತಂತೆ ಸಲಹೆಗಳನ್ನು ನೀಡಿರುತ್ತದೆ.

ಇದನ್ನೂ ಓದಿ:ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ಅಗ್ನಿ ನಂದಿಸುವಾಗ ಅಪಾರ ನಗದು ಪತ್ತೆ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಪಠ್ಯಗಳ ಬೋಧನೆ ಕಂಡುಬಾರದ ಕುರಿತಂತೆ ಈ ವರದಿಯಲ್ಲಿ ಉಲ್ಲೇಖಿಸಿ ಈ ಕಲಿಕಾ ಶಿಸ್ತು ಗ್ರಾಮೀಣ ಪ್ರದೇಶ ಮತ್ತು ಜನ ಸಾಮಾನ್ಯರಿಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಕನ್ನಡ ಪಠ್ಯ ರಚನೆ ಮತ್ತು ಬೋಧನೆ ಅಗತ್ಯವಿದೆ ಎನ್ನುವ ಅಂಶವನ್ನು ದಾಖಲಿಸಿರುತ್ತದೆ.

ಆದರೆ ಸರ್ಕಾರದ ಆದೇಶ ಅನುಷ್ಠಾನಗೊಳ್ಳಲು ಬಹಳ ಮುಖ್ಯವಾದ ಅಡೆತಡೆಗಳಿವೆ. ಕನ್ನಡೇತರ ಮತ್ತು ಕನ್ನಡಿಗ ವಿದ್ಯಾರ್ಥಿಗಳ ಕನ್ನಡ ಭಾಷಾ ಪ್ರೌಢಿಮೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅಳವಡಿಸಲಾಗಿರುವ ಈ ಪಠ್ಯಕ್ರಮ ಬೋಧನೆಗೆ ಕನ್ನಡ ಭಾಷಾ ಬೋಧಕರ ಅವಶ್ಯಕತೆ ಇದ್ದು, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷಾ ಬೋಧಕರ ನೇಮಕಾತಿ ಆಗಿರುವುದಿಲ್ಲ. ಇದು ಭಾಷಾ ವಿಷಯಗಳ ಬೋಧನೆಯ ಬಗ್ಗೆ ಇರುವ ಶಿಕ್ಷಣ ಸಂಸ್ಥೆಗಳ ಅನಾದರವನ್ನು ಅಭಿವ್ಯಕ್ತಿಸುತ್ತದೆ ಎಂದಿರುವ ಬಿಳಿಮಲೆ, ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎಲ್ಲ ಕಾಲೇಜುಗಳಲ್ಲಿ ಕನ್ನಡ ಬೋಧನೆಗೆ ಕನ್ನಡ ವಿಷಯ ತಜ್ಞರನ್ನೇ ಬಳಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:9 ತಿಂಗಳ ಬಾಹ್ಯಾಕಾಶ ವಾಸ: ಸುನಿತಾ ವಿಲಿಯಮ್ಸ್ ಪಡೆಯುವ ಸಂಬಳ ಎಷ್ಟು?

Donate Janashakthi Media

Leave a Reply

Your email address will not be published. Required fields are marked *