ಲಾಸ್ ಏಂಜಲೀಸ್ ಚಿತ್ರೋತ್ಸವಕ್ಕೆ ಆಯ್ಕೆಯಾದ “ಅಮೃತಮತಿ”

ಬೆಂಗಳೂರು : ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಮತ್ತೊಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಅಮೆರಿಕಾದ ಲಾಸ್ ಏಂಜಲೀಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಇಲ್ಲಿಯವರೆಗೂ ಹತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆ ಆಗುವ ಮೂಲಕ ಕನ್ನಡ ಚಿತ್ರವೊಂದು ದಾಖಲೆ ಮಾಡಿದೆ ಎನ್ನಬಹುದು. ಕನ್ನಡದ ಮಹಾಕವಿಗಳಲ್ಲೊಬ್ಬನಾದ, 13 ನೇ ಶತಮಾನದಲ್ಲಿ ಜೀವಿಸಿದ್ದ ಜನ್ನನ `ಯಶೋಧರ ಚರಿತ’ ಕೃತಿಯ ಮೇಲೆ ಆಧರಿತ ಚಿತ್ರ ಅಮೃತಮತಿ. ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಅಮೃತಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನಸ್ಸು ಮತ್ತು ದೇಹಗಳ ನಡುವೆ ನಡೆಯುವ ತುಮುಲಗಳನ್ನು ಚಿತ್ರ ಕಟ್ಟಿ ಕೊಡಲಿದೆ.

ಯುವರಾಜ ಯಶೋಧರನ ಹೆಂಡತಿ ಅಮೃತಮತಿ ಒಂದು ದಿನ ಕುದುರೆ ಲಾಯದ ಉಸ್ತುವಾರಿ ನೋಡಿಕೊಳ್ಳುವ ಅಷ್ಟಾವಂಕನ ಹಾಡಿಗೆ ಮರುಳಾಗಿ ಅವನಲ್ಲಿ ಮೋಹಿತಳಾಗುತ್ತಾಳೆ. ತನ್ನ ಸೇವಕಿಯ ಮೂಲಕ ಅವನ್ನನು ಒಪ್ಪಿಸಿ ಕುದುರೆ ಲಾಯದಲ್ಲಿ ಅವನನ್ನು ಸಂಧಿಸಲು ಆರಂಭಿಸುತ್ತಾಳೆ.

ಈ ವಿಷಯ ತಿಳಿದ ಯಶೋಧರ ಒಂದು ರಾತ್ರಿ ಅವರಿಬ್ಬರನ್ನು ಹಿಂಬಾಲಿಸಿ ತನ್ನ ಅನುಮಾನವನ್ನು ಖಚಿತ ಪಡಿಸಿಕೊಳ್ಳುತ್ತಾನೆ. ಅವರಿಬ್ಬರನ್ನು ಕೊಲ್ಲಬೇಕಿನಿಸಿದರೂ ಕೊಲ್ಲದೆ ಹಿಂತಿರುಗುತ್ತಾನೆ. ಕೆಲ ದಿನಗಳ ನಂತರ ಅಮೃತಮತಿ ತನ್ನ ವಿಷಯ ಗಂಡ ಮತ್ತು ಅತ್ತೆ ಮಾವಂದಿರ ತಿಳಿದಿದೆಯೆಂಬ ಅನುಮಾನದಿಂದ ಅವರಿಗೆ ವಿಷದ ಲಡ್ಡು ಉಣಬಡಿಸಿ ಅವರ ಸಾವಿಗೆ ಕಾರಣಳಾಗುತ್ತಾಳೆ. ಮುಂದೆ ಎಲ್ಲರ ಜನ್ಮ ಜನ್ಮಾಂತರ ಕಥೆಗಳನ್ನು ಜನ್ನ ತನ್ನ ಕೃತಿಯಲ್ಲಿ ಹೇಳುತ್ತಾನೆ.

ಬರಗೂರು ರಾಮಚಂದ್ರಪ್ಪ ಅಮೃತಮತಿಯ ದೃಷ್ಟಿಯಿಂದ ಈ ಕಥೆಗೆ ತಮ್ಮ ಚಿತ್ರದ ಮೂಲಕ ಮರು ವ್ಯಾಖ್ಯಾನ ನೀಡಿದ್ದಾರೆ. ಬರಗೂರು ಅವರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿ ಯಶೋಧರನ ಪಾತ್ರದಲ್ಲಿ ನಟ ಕಿಶೋರ್‌ ನಟಿಸಿದ್ದಾರೆ. ಹಿರಿಯ ನಟ ಸುಂದರ್‌ ರಾಜ್‌, ಪ್ರಮೀಳಾ ಜೋಷಾಯ್‌, ತಿಲಕ್‌, ಸುಪ್ರಿಯಾ ರಾವ್‌, ವತ್ಸಲಾ ಮೋಹನ್‌, ಅಂಬರೀಷ್ ಸಾರಂಗಿ, ಭೂಮಿಕಾ ಲಕ್ಷ್ಮಿನಾರಾಯಣ ತಾರಾಗಣವಿದೆ.

ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *