ಬೆಂಗಳೂರು: ಹಂಪಿನಗರದಲ್ಲಿರುವ ಪ್ರತಿಷ್ಠಿತ ಬ್ರೂಕ್ಲಿನ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ೬೭ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಾಹಿತಿಗಳು, ನಾಟಕಕಾರರಾದ, ಡಾ. ಎಂ. ಭೈರೇಗೌಡರವರು ಆಗಮಿಸಿದರು. ಕನ್ನಡ ನಾಡು, ನುಡಿ ಬಗ್ಗೆ ಅರಿವನ್ನು ಮೂಡಿಸಿದರು. ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ ಪ್ರೀತಿಸಿ, ಗೌರವಿಸಬೇಕು. ಕನ್ನಡವನ್ನು ಉಳಿಸಿ ಬಳಸಬೇಕು. ಹಾಗೆಯೇ ನೆರೆಹೊರೆಯ ಭಾಷೆಗಳನ್ನು ಗೌರವಿಸಬೇಕೆಂದು ಕರೆ ನೀಡಿದರು.
ಮಕ್ಕಳಿಗೆ ಜಾನಪದ ಶೈಲಿಯ ಹಾಡುಗಳನ್ನು ಹೇಳಿಕೊಡುವ ಮೂಲಕ ಮಕ್ಕಳಲ್ಲಿ ಕನ್ನಡತನವನ್ನು ಪ್ರೋತ್ಸಾಹಿಸಿದರು. ಮಕ್ಕಳು ವೀರಗಾಸೆ, ಡೊಲ್ಲು ಕುಣಿತ, ಕಂಸಾಳೆ, ಯಕ್ಷಗಾನ, ನೃತ್ಯ ಕಾರ್ಯಕ್ರಮಗಳನ್ನು ಅದ್ಭುತವಾಗಿ ಪ್ರದರ್ಶನ ನೀಡಿದರು. ಜೊತೆಗೆ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ರಚಿಸಿದ ಜೋಗದ ಸಿರಿ ಬೆಳಕಿನಲ್ಲಿ, ಕವಿ ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಎಂಬ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.