ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮರು ಮಂಡನೆಗೆ ಟಿ.ಎಸ್‌.ನಾಗಾಭರಣ ಒತ್ತಾಯ

ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಕರಡನ್ನು ಯಥಾಸ್ಥಿತಿಯಲ್ಲಿದ್ದಂತೆಯೇ ಮಂಡನೆ ಮಾಡದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಬದಲಾವಣೆ ಮಾಡಿದೆ. ಮಂಡನೆಯಾಗಿರುವ ವಿಧೇಯಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಕ್ತಿ ಕುಂದಿಸಲಾಗಿದೆ. ಹೀಗಾಗಿ ಹಲವು ಬದಲಾವಣೆಗಳೊಂದಿಗೆ ಮಸೂದೆಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮತ್ತೆ ಮಂಡಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಕರಡು ಬದಲಾವಣೆಗೆ ಆಕ್ಷೇಪವ್ಯಕ್ತಪಡಿಸಿದ್ದು, ವಿಧೇಯಕ ಜಾರಿ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಅಧಿಕಾರ ನೀಡಲಾಗಿದೆ. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಈ ಮೂಲಕ ಕಳ್ಳನನ್ನೇ ಪೊಲೀಸ್‌ ಆಗಿ ಮಾಡಿದಂತಾಗಿದೆ. ಹೀಗಾಗಿ ವಿಧೇಯಕ ಕರಡನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಆಗ ಮಾತ್ರ ಕಡ್ಡಾಯ ಕನ್ನಡ ಅನುಷ್ಠಾನವಾಗಲಿದೆ ಎಂದು ಹೇಳಿದರು.

ಬಲವಂತವಾಗಿ ಹಿಂದಿ ಹೇರಿಕೆ

ಶಿಕ್ಷಣ, ಉದ್ಯೋಗದಲ್ಲಿ ಕನ್ನಡ ಬಳಕೆಯಾಗಬೇಕು. ಸರ್ಕಾರದ ಇಲಾಖೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ಬಲವಂತವಾಗಿ ಹಿಂದಿ ಹೇರಿಕೆಯಾಗುತ್ತಿದೆ. ಕೆಲವು ಕಡೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದಿರುವ ಟಿ.ಎಸ್.‌ ನಾಗಾಭರಣ ಅವರು, ಈ ಬಗ್ಗೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಬಂಧಪಟ್ಟ 180 ಪತ್ರಗಳನ್ನು ಬರೆಯಲಾಗಿದೆ. ಆದರೆ, ಸಮಂಜಸ ಉತ್ತರ ಬಂದಿಲ್ಲ. ಹಾಗಾಗಿ ವ್ಯವಸ್ಥೆಯಲ್ಲಿಯೇ ಸಮಸ್ಯೆಗಳು ಇವೆ, ಇವುಗಳನ್ನು ಸರಿಪಡಿಸಬೇಕಿದೆ ಎಂದರು.

ಕನ್ನಡ ಕಡ್ಡಾಯ ವಿಧೇಯಕ ಮಂಡನೆಯಾಗಲಿ

ಕನ್ನಡ ಕಡ್ಡಾಯಕ್ಕೆ ವಿಧೇಯಕದ ಅವಶ್ಯಕತೆಯಿದ್ದು, ಅದನ್ನು ಜಾರಿಗೊಂಡರೆ ಮಾತ್ರ ಕನ್ನಡದ ಉಳಿವು ಸಾಧ್ಯ. ನಾವು ಒಂದು ವರ್ಷದಿಂದ ಈ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಕನ್ನಡ ಉಳಿಸಲು ಏನು ಮಾಡಬೇಕು, ಯಾವ ಅಂಶಗಳನ್ನು ತರಬೇಕು ಎಂಬುದನ್ನು ಕರಡು ವಿಧೇಯಕದಲ್ಲಿ ದಾಖಲಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೊಟ್ಟಿದ್ದೆವು. ನಂತರ ನಾವು ನೀಡಿರುವ ಅಂಶಗಳು ಹಾಗೂ ಅವರು ಸೇರಿಸಿರುವ ಅಂಶಗಳನ್ನು ಪಟ್ಟಿ ಮಾಡಿದ್ದೇವೆ. ಹೀಗಾಗಿ ಚಳಿಗಾಲದ ಅಧಿವೇಶದಲ್ಲಿ ಈ ವಿಧೇಯಕ ಮಂಡನೆಯಾಗಬೇಕು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *