ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್

 ಬೆಂಗಳೂರು :  ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್​ ಅವರ ಮೆದುಳಿನ ಎಡ ಹಾಗೂ ಬಲ ಭಾಗಕ್ಕೆ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿದರೂ ಚಿಕಿತ್ಸೆ ಫಲಿಸದೆ ವಿಜಯ್​ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೆದುಳಿನ  ಎಡ ಹಾಗೂ ಬಲ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದು, ಬೆಳಗ್ಗೆ 4.30ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ  ಅವರಿಗೆ  ಅಗತ್ಯ ಚಿಕಿತ್ಸೆ ನೀಡಿದ್ದರೂ ಸಹ ಅವರು ಸ್ಪಂದಿಸುತ್ತಿರಲಿಲ್ಲ.  ರಕ್ತದೊತ್ತಡದಲ್ಲೂ ಸಾಕಷ್ಟು ಏರಿಳಿತವಾಗುತ್ತು. ಸಾಕಷ್ಟು ಹೋರಾಟ ನಡೆಸಿದ ವಿಜಯ್‌ ಕೆಲಗಂಟೆಗಳ ಹಿಂದಷ್ಟೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸದಾ ಸಮಾಜದ ಒಳಿತಾಗಿ ಶ್ರಮಿಸುತ್ತಿದ್ದ ಅಣ್ಣನ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಅವರ ಸಹೋದರ ಸಿದ್ದೇಶ್‌ ಕುಮಾರ್‌ ತಿಳಿಸಿದ್ದಾರೆ.

ಅಪಘಾತ ನಡೆದದ್ದು ಹೇಗೆ? : ಈ ಕೋವಿಡ್ ಸಂಕಷ್ಟದಲ್ಲಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಕಷ್ಟದಲ್ಲಿರುವವರಿಗೆ ಫುಡ್ ಕಿಟ್, ಹಣ ಸಹಾಯ ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಮೊದಲಿನಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಸಂಚಾರಿ ವಿಜಯ್ ಅವರ ತಂಡವೂ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯದಲ್ಲಿ ಸಕ್ರಿಯವಾಗಿತ್ತು. ಮೊನ್ನೆ 12ರಂದು ರಾತ್ರಿ ತಮ್ಮ ಸ್ನೇಹಿತ ನವೀನ್ ಎಂಬುವವರ ಮನೆಗೆ ಹೋಗಿ ಫುಡ್ ಕಿಟ್ ವಿತರಿಸುವ ಬಗ್ಗೆ ಮಾತುಕತೆ ನಡೆಸಿ ತಡರಾತ್ರಿ ಹೊರಟಿದ್ದರಂತೆ. ಸ್ನೇಹಿತ ನವೀನ್ ತನ್ನ ಬೈಕ್ ನಲ್ಲಿ ವಿಜಯ್ ಅವರನ್ನು ಡ್ರಾಪ್ ಮಾಡಲು ಬಂದಿದ್ದರು, ಸಂಚಾರಿ ವಿಜಯ್ ಅವರು ಬೈಕ್ ನಲ್ಲಿ ಹಿಂದೆ ಕುಳಿತಿದ್ದರು.

ಸ್ವಲ್ಪ ದೂರ ಹೋದ ಮೇಲೆ ಬೈಕ್ ಸ್ಕಿಡ್ ಆಗಿ ಎಡಬದಿಯಲ್ಲಿ ಪೋಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ, ಹೆಲ್ಮೆಟ್ ಧರಿಸಿರಲಿಲ್ಲ, ಇದೇ ಮಾಡಿರುವ ಮಹಾ ಪ್ರಮಾದವಾಗಿದೆ. ಹೆಲ್ಮೆಟ್‌ ಧರಿಸಿದ್ದರೆ ಅಷ್ಟೊಂದು ಗಂಭೀರ ಗಾಯಗಳು ಆಗುತ್ತಿರಲಿಲ್ಲ.

ಚಿಕ್ಕಮಗಳೂರು ಮೂಲದವರಾದ ಸಂಚಾರಿ ವಿಜಯ್​ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು. ಪಂಚನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದ ಸಂಚಾರಿ ವಿಜಯ್ ಅಲ್ಲೇ ಪ್ರಾರ್ಥಮಿಕ ಶಿಕ್ಷಣ ಮುಗಿಸಿ, ನಂತರ ಪಕ್ಕದ ಗ್ರಾಮದ ಆಣೆಗೆರೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ನಂತರ ತುಮಕೂರು ಜಿಲ್ಲೆ ಟಿಪಟೂರಿನಲ್ಲಿರುವ ಕಲ್ಪತರು ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನ ಬಿಎಂ ಎಸ್ ಕಾಲೇಜಿನಲ್ಲಿ ಇಂಜಿನಿಯರ್ ಮುಗಿಸಿದ್ದರು. ವಿಜಯ್​ಅವರ ತಂದೆ ವೃತ್ತಿಯಲ್ಲಿ ಟೈಲರ್ ಹಾಗೂ ಅಮ್ಮ ಪಂಚನಹಳ್ಳಿಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದರು. ಬಹಳ ವರ್ಷಗಳ ಹಿಂದೆಯೇ ಅಪ್ಪ, ಅಮ್ಮ ಕಳೆದುಕೊಂಡಿದ್ದರು ವಿಜಯ್.

2011ರಲ್ಲಿ ತೆರೆಕಂಡ ರಂಗಪ್ಪ ಹೋಗ್ಬಿಟ್ನಾ ಚಿತ್ರದ ಮೂಲಕ ಸಂಚಾರಿ ವಿಜಯ್​ ಸಿನಿರಂಗಕ್ಕೆ ಕಾಲಿಟ್ಟರು. ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ಸಂಚಾರಿ ವಿಜಯ್, ಒಗ್ಗರಣೆ, ಕೃಷ್ಣ ತುಳಸಿ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ತಮಿಳು ಸಿನಿಮಾಗಳಲ್ಲೂ ಸಂಚಾರಿ ವಿಜಯ್ ನಟಿಸಿದ್ದಾರೆ. ಮೊದಲ ಅಲೆಯಿಂದಾಗಿ ಆಗಿದ್ದ ಲಾಕ್​ಡೌನ್​ ತೆರೆವುಗೊಂಡ ನಂತರ ರಿಲೀಸ್ ಆಗಿದ್ದ ಸಿನಿಮಾ ಆಕ್ಟ್ 1978 ಚಿತ್ರದಲ್ಲೂ ನಟಿಸಿದ್ದಾರೆ. ಸಂಚಾರಿ ವಿಜಯ್‌ ನಿಧನಕ್ಕೆ ಚಿಂತ್ರರಂಗದವರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *