ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್. ಶಿವರಾಂ(83) ಅವರು ಇಂದು ಮಧ್ಯಾಹ್ನ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ನಿಧನರಾದರು. 1938 ಜನವರಿ 28 ರಂದು ಬೆಂಗಳೂರಿನ ಚೂಡಸಂದ್ರದಲ್ಲಿ ಜನಿಸಿದ್ದ ಶಿವರಾಂ, ಕನ್ನಡ ಚಿತ್ರರಂಗದಲ್ಲಿ ಪೋಷಕ, ಹಾಸ್ಯ ಪಾತ್ರದಲ್ಲಿ ಸುಮಾರು 6 ದಶಕಗಳ ಕಾಲ ನಟನೆಯಲ್ಲಿ ತೊಡಗಿದ್ದರು.
ಕಳೆದ ನಾಲ್ಕು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಶಿವರಾಮ್ ಅವರು, ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಿದ್ದಾಗ ಶಿವರಾಂ ಕುಸಿದುಬಿದ್ದಿದ್ದರು. ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಈಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಆಸ್ಪತ್ರೆಯ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಅವರ ಪಾರ್ಥಿವ ಶರೀರವನ್ನು ಬನಶಂಕರಿ ಎರಡನೇ ಹಂತದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಲಾಗಿದೆ.
‘ನಾಳೆ ಬೆಳಿಗ್ಗೆ (ಡಿಸೆಂಬರ್ 5 ಭಾನುವಾರ) ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಎಸ್. ಶಿವರಾಂ ಅವರ ಪಾರ್ಥಿವ ಶರೀರವನ್ನು ಎರಡು ತಾಸು ಇಡಲಾಗುವುದು. ನಂತರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ‘ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.
ಶಿವರಾಂ ಸೋದರ ಟೈಪ್ ರೈಟಿಂಗ್ ಇನ್ಸಿಟಿಟ್ಯೂಟ್ ನಡೆಸುತ್ತಿದ್ದರು. ಗುಬ್ಬಿ ವೀರಣ್ಣ ಅವರ ನಾಟಕಗಳಿಂದ ಶಿವರಾಂ ಸಾಕಷ್ಟು ಪ್ರೇರಣೆಗೊಂಡಿದ್ದರು. 1965 ರಲ್ಲಿ ಬೆರೆತ ಜೀವ ಸಿನಿಮಾ ಮೂಲಕ ಶಿವರಾಂ ಚಿತ್ರರಂಗ ಪ್ರವೇಶಿಸಿದ್ದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟರೊಂದಿಗೆ ಜೊತೆ ಶಿವರಾಂ ಬಣ್ಣ ಹಚ್ಚಿದ್ದರು. ಪೋಷಕ ನಟನಾಗಿ, ಹಾಸ್ಯನಟನಾಗಿ ಶಿವರಾಂ ನಟಿಸಿದ್ದರು. ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ‘ರಾಶಿ ಬ್ರದರ್ಸ್’ ಸಂಸ್ಥೆಯಡಿ ಹಲವು ಚಿತ್ರ ನಿರ್ಮಿಸಿದ್ದರು. ಪುಟ್ಟಣ್ಣ ಕಣಗಾಲ್ ಜತೆಯೂ ಶಿವರಾಂ ಕೆಲಸ ಮಾಡಿದ್ದರು.
ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದ ಶಿವರಾಂ ಅವರು 1970ರಲ್ಲಿ ತೆರೆಗೆ ಬಂದ ‘ಗೆಜ್ಜೆ ಪೂಜೆ’, ‘ಉಪಾಸನೆ (1970)’, ‘ನಾನೊಬ್ಬ ಕಳ್ಳ (1979)’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿದರು.
ನಟಿಸಿದ ಚಿತ್ರಗಳು
ಬೆರೆತ ಜೀವ (1965), ಮಾವನ ಮಗಳು (1965), ದುಡ್ಡೇ ದೊಡ್ಡಪ್ಪ (1966), ಲಗ್ನಪತ್ರಿಕೆ (1967), ಶರಪಂಜರ (1971), ಮುಕ್ತಿ(1971), ಭಲೇ ಅದೃಷ್ಟವೋ ಅದೃಷ್ಟ(1971), ಸಿಪಾಯಿ ರಾಮು (1972), ನಾಗರಹಾವು(1972), ನಾ ಮೆಚ್ಚಿದ ಹುಡುಗ (1972), ಹೃದಯಸಂಗಮ (1972), ಕಿಲಾಡಿ ಕಿಟ್ಟು (1978), ನಾನೊಬ್ಬ ಕಳ್ಳ (1979), ಹಾಲುಜೇನು (1982), ಪಲ್ಲವಿ ಅನುಪಲ್ಲವಿ (1983), ಭಜರಂಗಿ (2013), ಬಂಗಾರ s/o ಬಂಗಾರದ ಮನುಷ್ಯ (2017) ಮೊದಲಾದ ಸಿನಿಮಾಗಳಲ್ಲಿ ಶಿವರಾಂ ನಟಿಸಿದ್ದರು. ಮಕ್ಕಳ ಸೈನ್ಯ ಸೇರಿ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. 1980ರಲ್ಲಿ ‘ಡ್ರೈವರ್ ಹನುಮಂತು’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಇವರ ಸಾಧನೆಗೆ ಕೆಲ ಪ್ರಶಸ್ತಿಗಳು ಕೂಡ ಒಲಿದಿವೆ.
ಧಾರಾವಾಹಿಯಲ್ಲೂ ನಟನೆ
ಹಿರಿತೆರೆ ಮಾತ್ರವಲ್ಲದೆ ಶಿವರಾಂ ಅವರು ಕಿರುತೆರೆಯಲ್ಲೂ ನಟಿಸಿದ್ದಾರೆ. ‘ಗೃಹಭಂಗ’ ಮತ್ತು ‘ಬದುಕು’ ಧಾರವಾಹಿಯಲ್ಲೂ ಅದ್ಭುತವಾಗಿ ಅವರು ನಟಿಸಿದ್ದರು.
ಹಲವರ ಸಂತಾಪ
ಎಸ್. ಶಿವರಾಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದ ಶಿವರಾಂ ಅವರ ನಿಧನ ತುಂಬಾ ದುಃಖದ ವಿಷಯ. ಶಿವರಾಂ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದಶಕಗಳ ಕಾಲ ತಮ್ಮ ಅಮೋಘ ನಟನೆಯ ಮೂಲಕ ಕಲಾಸೇವೆಗೈದ ಶಿವರಾಂ ಅವರ ನೆನಪು ನಮ್ಮೊಂದಿಗೆ ಸದಾ ಜೀವಂತವಾಗಿರಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ನಲ್ಲಿ ಸ್ಮರಿಸಿದ್ದಾರೆ.
ಕನ್ನಡ ಸಿನಿಮಾಗೆ ದೊಡ್ಡ ನಷ್ಟ. ಶೀವರಾಂ ಅಣ್ಣ ಅವರ ನಿಧನದಿಂದ ತುಂಬ ಬೇಸರವಾಯಿತು. ಅವರೊಬ್ಬರು ಐಕಾನ್ ಎಂದು ಅನಿಲ್ ಕುಂಬ್ಳೆ ಟ್ವೀಟ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಶಿವರಾಂ ಅವರ ನಿಧನ ನನಗೆ ತೀವ್ರ ನೋವು ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರು, ಅಭಿಮಾನಿಗಳು, ಚಿತ್ರರಂಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.