ಏಪ್ರಿಲ್ 11 ರಿಂದ 17 – ಕನಿಷ್ಟ ಬೆಂಬಲ ಬೆಲೆ ಖಾತರಿ ಸಪ್ತಾಹ ಆಚರಣೆ: ಎಸ್‍ಕೆಎಂ ಕರೆ

ಮಾರ್ಚ್ 21ರಂದು ಸರಕಾರದ ವಚನಭ್ರಷ್ಟತೆಯ ವಿರುದ್ಧ ದೇಶವ್ಯಾಪಿ ಪ್ರತಿಭಟನೆ

ಸಂಯುಕ್ತ  ಕಿಸಾನ್ ಮೋರ್ಚಾ(ಎಸ್‍ಕೆಎಂ) ತನ್ನ ರಾಷ್ಟ್ರವ್ಯಾಪಿ ಅಭಿಯಾನದ ಮುಂದಿನ ಸುತ್ತನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದೆ. ಇದನ್ನು ಮಾರ್ಚ್‍ 14ರಂದು  ದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಎಸ್‍ಕೆಎಂಗೆ ಸೇರಿದ  ಎಲ್ಲಾ ಸಂಘಟನೆಗಳ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.

ಡಿಸೆಂಬರ್ 9ರಂದು ಸಂಯುಕ್ತ ಕಿಸಾನ್ ಮೋರ್ಚಾಗೆ ಭಾರತ ಸರ್ಕಾರವು ನೀಡಿದ ಲಿಖಿತ ಭರವಸೆಗಳನ್ನು ಮೋರ್ಚಾ ಪರಿಶೀಲಿಸಿತು ಮತ್ತು ಮೂರು ತಿಂಗಳುಗಳ ನಂತರವೂ ಸರ್ಕಾರವು ತನ್ನ ಪ್ರಮುಖ ಭರವಸೆಗಳ ಮೇಲೆ ಯಾವುದೇ ಕ್ರಮಗಳಿಲ್ಲ ಎಂದು ಖೇದ ವ್ಯಕ್ತಪಡಿಸಿತು. ಎಂಎಸ್‌ಪಿ ಕುರಿತು ಸಮಿತಿ ರಚಿಸುವ ಆಶ್ವಾಸನೆಯ ಹೆಸರೇ ಇಲ್ಲ. ಹರಿಯಾಣ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ರೈತರ ವಿರುದ್ಧದ ಆಂದೋಲನದ ಸಂದರ್ಭದಲ್ಲಿ ಮಾಡಿದ ಪ್ರಕರಣಗಳನ್ನು ಹಿಂಪಡೆದಿಲ್ಲ. ದೆಹಲಿ ಪೊಲೀಸರು ಕೆಲವು ಪ್ರಕರಣಗಳನ್ನು ಭಾಗಶಃ ಹಿಂತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದಾರೆ, ಆದರೆ ಅದರ ಬಗ್ಗೆ ಯಾವುದೇ ಖಚಿತವಾದ ಮಾಹಿತಿ ಇಲ್ಲ. ದೇಶಾದ್ಯಂತ ರೈಲ್ ರೋಕೋ ಪ್ರಕರಣಗಳ ಬಗ್ಗೆ ಏನೂ ನಡೆದಿಲ್ಲ.

ಲಖೀಂಪುರ ಖೇರಿ ಪ್ರಕರಣದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಿದ ಸಭೆ, ಪೊಲೀಸ್ ಆಡಳಿತ ಮತ್ತು ಪ್ರಾಸಿಕ್ಯೂಟರ್‌ಗಳು ಒಟ್ಟಾಗಿ ಅಪರಾಧಿಗಳನ್ನು ಉಳಿಸಲು ಮತ್ತು ಅಮಾಯಕ ರೈತರನ್ನು ಸಿಲುಕಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು. ಇಂತಹ ಗಂಭೀರ ಪ್ರಕರಣದಲ್ಲಿ ಕೇಂದ್ರ ಸಚಿವರ ಪುತ್ರನಿಗೆ ಇಷ್ಟು ಬೇಗ ಜಾಮೀನು ಸಿಕ್ಕಿದ್ದು, ಇದೇ ಪ್ರಕರಣದಲ್ಲಿ ಸಿಲುಕಿರುವ ರೈತರು ಇನ್ನೂ ಜೈಲಿನಲ್ಲಿರುವುದು ಅಚ್ಚರಿ ಮೂಡಿಸಿದೆ. ಮೋನು ಮಿಶ್ರಾ ಹೊರಬಂದ ನಂತರ ಪ್ರಕರಣದ ಪ್ರಮುಖ ಸಾಕ್ಷಿಯ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿಯ ಬಗ್ಗೆ ಸಭೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ವಿಚಾರದಲ್ಲಿ ಕಾನೂನು ಹೋರಾಟದಲ್ಲಿ ಯಾವುದೇ ಸಡಿಲಿಕೆ ಇಲ್ಲ ಮತ್ತು ರೈತರ ಕುಟುಂಬಗಳಿಗೆ ಸಂಪೂರ್ಣ ಕಾನೂನು ನೆರವು ನೀಡಲಾಗುವುದು ಎಂದು ಎಸ್‍ಕೆಎಂ ನಿರ್ಧರಿಸಿದೆ.

ಲಖೀಂಪುರ ಖೇರಿ ಘಟನೆಯಲ್ಲಿ ಸರ್ಕಾರದ ಪಾತ್ರ ಮತ್ತು ರೈತರ ಚಳವಳಿಗೆ ನೀಡಿದ ಆಶ್ವಾಸನೆಗಳಿಗೆ ಸಂಬಂಧಪಟ್ಟಂತೆ ವಿಶ್ವಾಸಘಾತದ ವಿರುದ್ಧ  ಮಾರ್ಚ್ 21 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನೆಡಸಲು ಎಸ್‍ಕೆಎಂ ನಿರ್ಧರಿಸಿದೆ.

ಮಾರ್ಚ್ 28 ಮತ್ತು 29 ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿರುವ ಸಂಯುಕ್ತ ಕಿಸಾನ್‍ ಮೋರ್ಚಾ ದೇಶಾದ್ಯಂತ ರೈತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ಹೇಳಿದೆ.

ಮುಂದಿನ ತಿಂಗಳು ಏಪ್ರಿಲ್ 11ರಿಂದ 17 ರವರೆಗೆ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಖಾತರಿ ಸಪ್ತಾಹವನ್ನು ಆಚರಿಸುವ ಮೂಲಕ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಈ ಸಪ್ತಾಹಾಚರಣೆಯಲ್ಲಿ, ಎಸ್‍ಕೆಎಂ ನ ಎಲ್ಲ ಘಟಕ ಸಂಘಟನೆಗಳು ಸ್ವಾಮಿನಾಥನ್ ಆಯೋಗವು ಎಲ್ಲಾ ರೈತರಿಗೆ ಅವರ ಎಲ್ಲಾ ಕೃಷಿ ಉತ್ಪನ್ನಗಳಿಗೆ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯ (ಸಿ2 + 50%) ಕಾನೂನು ಖಾತರಿಗಾಗಿ ಒತ್ತಾಯಿಸಿ ಧರಣಿಗಳು, ಪ್ರದರ್ಶನಗಳು, ವಿಚಾರಗೋಷ್ಠಿಗಳನ್ನು ಆಯೋಜಿಸುತ್ತವೆ ಎಂದು ಅದು ಹೇಳಿದೆ.

ಸಂಯುಕ್ತ ಕಿಸಾನ್‍ ಮೋರ್ಚಾದ ಸಂಯೋಜನಾ ಸಮಿತಿ ಕರೆದಿದ್ದ ಈ ರಾಷ್ಟ್ರ ಮಟ್ಟದ ಸಭೆಯಲ್ಲಿ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್, ಅಸ್ಸಾಂ, ತ್ರಿಪುರಾ, ಒರಿಸ್ಸಾ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢದ ರೈತ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಡಾ. ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರಹಾನ್, ಶಿವಕುಮಾರ್ ಶರ್ಮಾ (ಕಾಕ್ಕಾ ಜಿ), ಯುಧ್ವೀರ್ ಸಿಂಗ್ ಮತ್ತು ಯೋಗೇಂದ್ರ ಯಾದವ್ ಜಂಟಿಯಾಗಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *