ನವದೆಹಲಿ: “ಬಾಂಗ್ಲಾದೇಶ್ ನಂತಹ ಅರಾಜಕತೆ ಭಾರತದಲ್ಲೂ ರೈತರ ಪ್ರತಿಭಟನೆಯ ಹೆಸರಿನಲ್ಲಿ ನಡೆಯಬಹುದಾಗಿತ್ತು. ಬಾಹ್ಯ ಶಕ್ತಿಗಳು ನಮ್ಮನ್ನು ಧ್ವಂಸ ಮಾಡಲು ಯೋಜಿಸುತ್ತಿವೆ ನಮ್ಮ ಮುಖಂಡತ್ವದ ಮುನ್ನೋಟವಿಲ್ಲದಿದ್ದರೆ ಅವರು ಗೆಲ್ಲುತ್ತಿದ್ದರು” ಎಂಬ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಲೋಕಸಭಾ ಸದಸ್ಯೆ ಕಂಗನಾ ರನೌತ್ ಟ್ವೀಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಆಕೆಯ ಪಕ್ಷ ಕೂಡ ಆಕೆಯ ಬೆಂಬಲಕ್ಕೆ ಬರಲು ಸಾಧ್ಯವಾಗಿಲ್ಲ, ಬದಲಾಗಿ ಆಕೆಗೆ ಪಕ್ಷದ ಧೋರಣೆಗಳ ಬಗ್ಗೆ ಹೇಳಿಕೆಗಳನ್ನು ನೀಡುವ ಅಧಿಕಾರವಿಲ್ಲ, ಭವಿಷ್ಯದಲ್ಲಿ ಆಕೆ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಎಸ್ಕೆಎಂ ಮತ್ತು ಎಐಕೆಎಸ್ ಹೇಳಿದೆ.
ಆದರೆ ಆಕೆ ಹೇಳಿರುವುದು ತಮ್ಮ ಧೋರಣೆಗೆ ವಿರುದ್ಧವಾದುದು ಎಂದೇನೂ ಹೇಳಿರುವ ಬಗ್ಗೆ ವರದಿಯಾಗಿಲ್ಲ. ಕಂಗನಾ ರನೌತ್ ಇಷ್ಟಕ್ಕೇ ನಿಲ್ಲದೆ, ತನ್ನ ಟ್ವೀಟ್ ಜತೆಗೆ ಹಾಕಿದ ವೀಡಿಯೋದಲ್ಲಿ ರೈತರ ಪ್ರತಿಭಟನೆಗಳಲ್ಲಿ “ಹತ್ಯೆಗಳು ಮತ್ತು ಅತ್ಯಾಚಾರಗಳು ನಡೆದವು” ಎಂದೂ ಹೇಳಿದ್ದಾರೆ ಮತ್ತು ಅಮೆರಿಕ , ಚೀನಾದಂತಹ ಹೊರಗಿನ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದೂ ಮುಂದುವರೆದು ಹೇಳಿರುವುದಾಗಿ ವರದಿಯಾಗಿದೆ. ಕಂಗನಾ
ಆಕೆ ಉಲ್ಲೇಖಿಸಿರುವ, ಮೋದಿ ಸರಕಾರದ ಮೂರು ಕೃಷಿಕಾನೂನುಗಳ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಈ ಬಿಜೆಪಿ ಲೋಕಸಭಾ ಸದಸ್ಯೆಯ ಹೇಳಿಕೆ “ಆಘಾತಕಾರಿ, ಅವಹೇಳನಕಾರಿ” ಎಂದು ಖಂಡಿಸಿದೆ.
ರೈತರನ್ನು ಹಳಿಯುವುದೇ
ಅಭ್ಯಾಸವಾಗಿ ಬಿಟ್ಟಿರುವವರು
“ರೈತರನ್ನು ಹಳಿಯುವುದೇ ಅಭ್ಯಾಸವಾಗಿ ಬಿಟ್ಟಿರುವ ಈ ಎಂಪಿ, ಈಗ ಭಾರತೀಯ ರೈತರನ್ನು ಕೊಲೆಗಡುಕರು, ಅತ್ಯಾಚಾರಿಗಳು ಮತ್ತು ರಾಷ್ಟ್ರ-ವಿರೋಧಿಗಳು ಎಂದು ಕರೆಯುವ ವಿಪರೀತಕ್ಕೆ ಹೋಗಿರುವುದು ಅತ್ಯಂತ ನೋವಿನ ಸಂಗತಿ. ಆದರೆ ಆಕೆಯ ಇಂತಹ ಮಾತುಗಳಲ್ಲಿ ಆಶ್ಚರ್ಯವೇನೂ ಅಲ್ಲ, ಏಕೆಂದರೆ ದಿಲ್ಲಿಯ ಗಡಿಗಳಲ್ಲಿ ರೈತರ ಚಳುವಳಿ ಎಸ್ಕೆಎಂ ನೇತೃತ್ವದಲ್ಲಿ ನಡೆಸಿದ ಐತಿಹಾಸಿಕ ಹೋರಾಟವನ್ನು ಅವಮಾನ ಮಾಡುವುದು, ಹೀಗಳೆಯುವುದು ಮತ್ತು ಕಳಂಕ ಹಚ್ಚುವುದು ಬಿಜೆಪಿಯ ದೀರ್ಘಕಾಲದ ಧೋರಣೆಯಾಗಿದೆ” ಎಂದು ಮುಂದುವರೆದು ಎಸ್ಕೆಎಂ ಟಿಪ್ಪಣಿ ಮಾಡಿದೆ.
“ಇಂತಹ ಅವಹೇಳನಗಳು ಮತ್ತು ದುರುದ್ದೇಶಪೂರ್ವಕವಾದ ಉದ್ರೇಕಕಾರಿ ಮಾತುಗಳ ಹೋರತಾಗಿಯೂ ಬಿಜೆಪಿ ನೇತೃತ್ವದ, ಸರಕಾರದ ರೈತ-ವಿರೋಧಿ ಕಾಯ್ದೆಗಳು ಮತ್ತು ಧೋರಣೆಗಳ ವಿರುದ್ಧ ರೈತರ ಪ್ರತಿಭಟನೆಗಳು ಶಾಂತಿಯುತವಾಗಿರುವಂತೆ, ಕಾನೂನುಬದ್ಧವಾಗಿರುವಂತೆ ಮತ್ತು ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಮೂಲಭೂತ ಹಕ್ಕುಗಳ ಚಲಾವಣೆಗೆ ಅನುಗುಣವಾಗಿರುವಂತೆ ಎಸ್ಕೆಎಂ ನೋಡಿಕೊಂಡಿದೆ” ಎಂದಿರುವ ಅದು, ಪ್ರಧಾನ ಮಂತ್ರಿಗಳು ತಮ್ಮ ಪಕ್ಷದ ಒಬ್ಬರು ಎಂಪಿಯ “ನಿಂದನೀಯ ಮತ್ತು ಅಸತ್ಯಪೂರ್ಣ ಟಿಪ್ಪಣಿಗಳಿಗಾಗಿ” ರೈತರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ ಮತ್ತು “ಪ್ರಧಾನ ಮಂತ್ರಿಗಳು
ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವವರೊಂದಿಗೆ ಅವರ ಪಕ್ಷ ಮತ್ತು ಸದಸ್ಯರು ದುರ್ವರ್ತನೆ ನಡೆಸಲು ಬಿಡಬಾರದು, ಇದು ಪ್ರಧಾನ ಮಂತ್ರಿಗಳ ಸಂವಿಧಾನಿಕ ಕರ್ತವ್ಯ ಮಾತ್ರವಲ್ಲ, ಇದಕ್ಕೆ ಕಡಿಮೆಯಾದುದೇನನ್ನೂ ಭಾರತದ ಜನತೆ ಅವರಿಂದ ನಿರೀಕ್ಷಿಸುವುದಿಲ್ಲ” ಎಂದು ಹೇಳಿದೆ.
ಕಂಗನಾ ರನೌತ್ ಭಾರತದ ರೈತರಿಂದ ಬೇಷರತ್ ಕ್ಷಮೆ ಕೇಳಬೇಕು, ತನ್ನ ಸ್ಥಾನದ ಘನೆತೆಯನ್ನು ಎತ್ತಿ ಹಿಡಿಯಬೇಕು, ಇಲ್ಲವಾದರೆ ಎಸ್ಕೆಎಂ ಆಕೆಯ ಸಾರ್ವಜನಿಕ ಬಹಿಷ್ಕಾರಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಈ ಬಿಜೆಪಿ ಸಂಸದೆ ಕಂಗನಾ ರನೌತ್ರವರ ರೈತರು ಮತ್ತು ಭಾರತೀಯ ಕೃಷಿಯನ್ನು ಕಾರ್ಪೊರೇಟ್ ವಲಯ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಭೀಷಣ ಹೋರಾಟ ನಡೆಸಿದ ಐತಿಹಾಸಿಕ ಚಳವಳಿಯ ವಿರುದ್ಧದ
ಹೇಳಿಕೆಗಳು ಬೇಜವಾಬ್ದಾರಿ ಮತ್ತು ದುರುದ್ದೇಶಪೂರಿತ ಎಂದು ಬಲವಾಗಿ ಖಂಡಿಸಿದೆ.
ರೈತ-ವಿರೋಧಿ “ಬಾಹ್ಯ ಮತ್ತು ಆಂತರಿಕ ಶಕ್ತಿಗಳ”
ತಾಳಕ್ಕೆ ಹೆಜ್ಜೆ ಹಾಕುತ್ತಿರುವವರು
ವಾಸ್ತವವಾಗಿ, ಒಂದು ಗಾಥೆಯಾಗಿ ಬಿಟ್ಟಿರುವ ರೈತರ ದೇಶಪ್ರೇಮಿ ಚಳವಳಿಯ ಬಗ್ಗೆ ಕಂಗನಾ ರನೌತ್ ಅವರ ತುಚ್ಛ ಮಾತುಗಳು ಹೊಸದೇನೂ ಅಲ್ಲ ಎಂದು ಎಲ್ಲರಿಗೂ ಗೊತ್ತಿದೆ. ರೈತರು ಕಠೋರ ಹವಾಮಾನ, ಕೋವಿಡ್ ಸಾಂಕ್ರಾಮಿಕ ಮತ್ತು ಆರೆಸ್ಸೆಸ್-ಬಿಜೆಪಿ ಆಳ್ವಿಕೆ ಹರಿಯಬಿಟ್ಟ ಪ್ರಭುತ್ವ ಹಿಂಸಾಚಾರದ ವಿರುದ್ಧ ಧೈರ್ಯದಿಂದ ಹೋರಾಡುತ್ತಿದ್ದಾಗ, ರನೌತ್ ಅವರು ಬಾಹ್ಯ ಶಕ್ತಿಗಳು, ಅಂದರೆ ಪ್ರಬಲ ಜಾಗತಿಕ ಹಣಕಾಸು ಬಂಡವಳಿಗರು ಮತ್ತು ಅದಾನಿ, ಅಂಬಾನಿಯಂತಹ ಅವರ ದೇಶೀ ಬಾಲಬಡುಕರ ರಾಗಕ್ಕೆ ಹೆಜ್ಜೆ ಹಾಕಿ ಕುಣಿಯುತ್ತಿದ್ದರು.
ರೈತರ ಬಗ್ಗೆ ಆಕೆಯ ದ್ವೇಷಪೂರ್ಣ ಟೀಕೆಗಳು, ವಿಶೇಷವಾಗಿ ರೈತ ಮಹಿಳೆಯರ ಬಗ್ಗೆ ಅವಹೇಳನಕಾರಿ ಟೀಕೆಗಳು, ಕೃಷಿಯನ್ನು ಕಬಳಿಸಲು ಬಯಸುವ ಆಕೆಯ ಬಾಹ್ಯ ಮತ್ತು ಆಂತರಿಕ ಬಾಸ್ಗಳನ್ನು ಮೆಚ್ಚಿಸಲು ರನೌತ್ ಯಾವುದೇ ಹಂತಕ್ಕೂ ಹೋಗುತ್ತಾರೆ ಎಂಬ ಅಂಶವನ್ನು ಬಹಿರಂಗಪಡಿಸಿದವು. ಕಾರ್ಪೊರೇಟ್ ಪರವಾದ ಕೃಷಿ ಕಾನೂನುಗಳ ಅತ್ಯಂತ ಅಸಹ್ಯಕರ ಭಟ್ಟಂಗಿಯಾಗಿದ್ದ ಆಕೆ ಅತ್ಯಾಚಾರ ಮತ್ತು ಕೊಲೆಗಳನ್ನು ರೈತರ ಚಳವಳಿಯೊಂದಿಗೆ ತಳುಕು
ಹಾಕಲು ಪ್ರಯತ್ನಿಸುತ್ತಿರುವ ಸಂಪೂರ್ಣ ಸುಳ್ಳು ಹೇಳಿಕೆಗಳನ್ನು ನೀಡಿದರು. ರೈತ ಹೋರಾಟದಲ್ಲಿ 736 ರೈತರು ಹುತಾತ್ಮರಾದರು ಮತ್ತು ಆರೆಸ್ಸೆಸ್-ಬಿಜೆಪಿಯಲ್ಲಿನ ಆಕೆಯ ಸಹೋದ್ಯೋಗಿಗಳು ಲಖಿಮ್ಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಹತ್ಯೆ ಮಾಡಿದ್ದಾರೆ ಎಂಬುದು ಸರಳ ಸತ್ಯ ಎಂದು ಎಐಕೆಎಸ್ ಹೇಳಿದೆ.
ಕರಾಳ ಕೃಷಿ ಕಾನೂನುಗಳ ವಿರುದ್ಧದ ರೈತರ ಚಳವಳಿಯು ಬ್ರಿಟಿಷರ ವಿರುದ್ಧದ ಸಾಮ್ರಾಜ್ಯಶಾಹಿ-ವಿರೋಧಿ ಸ್ವಾತಂತ್ರ್ಯ ಹೋರಾಟದಿಂದ ಸ್ಫೂರ್ತಿ ಪಡೆದಿದೆ ಎಂದು ರನೌತ್ ಮತ್ತು ಆರ್ಎಸ್ಎಸ್-ಬಿಜೆಪಿಯಲ್ಲಿನ ಆಕೆಯ ಸಹೋದ್ಯೋಗಿಗಳಿಗೆ ನೆನಪಿಸುತ್ತ ಎಐಕೆಎಸ್ , ಸಮರಧೀರ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಮತ್ತು ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ಪ್ರತಿಮೆಗಳಲ್ಲಿ ಒಬ್ಬರಾದ ಶಹೀದ್ ಭಗತ್ ಸಿಂಗ್, ಕಿಸಾನ್ ಹೋರಾಟದ ಸಮಯದಲ್ಲಿ ಪ್ರತಿರೋಧದ ಅತ್ಯಂತ ಜನಪ್ರಿಯ
ಸಂಕೇತವಾಗಿದ್ದರು ಎಂದೂ ನೆನಪಿಸಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯ ತೊತ್ತುಗಳಂತೆ ವರ್ತಿಸುತ್ತಿದ್ದ ಆರೆಸ್ಸೆಸ್, ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ನಂತಹ ಪ್ರತಿಗಾಮಿ ಕೋಮುವಾದಿ ಶಕ್ತಿಗಳಿಗೆ ರೈತರು ಮತ್ತು ದುಡಿಯುವ ಜನಗಳ ದೇಶಪ್ರೇಮವನ್ನು ಪ್ರಶ್ನಿಸುವ ಯಾವುದೇ ನೈತಿಕ ಅಧಿಕಾರವಿಲ್ಲ ಎನ್ನುತ್ತ ಎಐಕೆಎಸ್, ಕೃಷಿ ಕಾನೂನುಗಳು ಒಂದು ವೇಳೆ ಜಾರಿಗೆ ಬಂದಿದ್ದರೆ,ದೇಶದ ಸಾರ್ವಭೌಮತ್ವ ಮತ್ತು ಆಹಾರ ಭದ್ರತೆಗೆ ಧಕ್ಕೆ ತರುತ್ತಿತ್ತು ಎಂದು ಪುನರುಚ್ಚರಿಸಿದೆ.
ರನೌತ್ ಅವರು ತಮ್ಮ ದ್ವೇಷಪೂರಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆದು ರೈತರಲ್ಲಿ ಕ್ಷಮೆಯಾಚಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ರೈತರ ಕ್ಷಮೆಯಾಚಿಸಬೇಕು ಎಂದು ಎಐಕೆಎಸ್ ಆಗ್ರಹಿಸಿದೆ. ಸುಪ್ರಿಂ ಕೋರ್ಟ್ ರನೌತ್ ರವರ ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಮತ್ತು ರೈತರ ವಿರುದ್ಧ ಅಪಶ್ರುತಿ ಸೃಷ್ಟಿಸುತ್ತಿರುವ ಹೇಳಿಕೆಗಳನ್ನು ಸ್ವಯಂಪ್ರೇರಿತವಾಗಿ ಗಮನ ಕ್ಕೆ ತಗೊಂಡು ಆಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದೂ ಅಖಿಲ ಭಾರತ ಕಿಸಾನ್ ಸಭಾ ಆಗ್ರಹಿಸಿದೆ.
ಇದನ್ನೂ ನೋಡಿ: ಶ್ರಮಿಕರ ಧ್ವನಿ ಕಾಮ್ರೇಡ್ ಸೂರಿ – ತಪನ್ ಸೇನ್ Janashakthi Media