ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸೋಮವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. 2019ರಿಂದ ಸದಸ್ಯರ ನೇಮಕವಾಗದೇ ಒಂದರ್ಥದಲ್ಲಿ ಅನಾಥವಾಗಿತ್ತು, ಅಭಿವೃದ್ಧಿ ಕಾರ್ಯಗಳಿಗೂ ಇದು ಹಿನ್ನಡೆಯಾಗಿತ್ತು.
ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾರೆ.
ಸರ್ಕಾರ 11 ಜನಪ್ರತಿನಿಧಿಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಲಾಗಿತ್ತು.
ಸದಸ್ಯರ ವಿವರ: ಕೂಡ್ಲಗಿ ಶಾಸಕ ಎನ್. ವೈ. ಗೋಪಾಲಕೃಷ್ಣ, ಅಳಂದ ಶಾಸಕ ಸುಭಾಷ್ ಗುತ್ತೇದಾರ್, ಶಹಾಪುರ ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ, ಬೀದರ್ ದಕ್ಷಿಣದ ಶಾಸಕ ಬಂಡೆಪ್ಪ ಕಾಶೆಂಪುರ, ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್, ಯಾದಗಿರಿ ಶಾಸಕ ವೆಂಕಟ ರೆಡ್ಡಿ ಮತ್ತು ಎಂಎಲ್‌ಸಿಗಳಾದ ಬಿ. ಜಿ. ಪಾಟೀಲ್ ಮತ್ತು ರಘುನಾಥ ರಾವ್ ವಲ್ಕಾಪುರೆ ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ ಸದಸ್ಯರಾಗಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಕೊಪ್ಪಳ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಜಿಲ್ಲೆಗಳು ಬರುತ್ತವೆ.
ಸದ್ಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 7 ಜಿಲ್ಲೆಗಳಿವೆ. ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ವಲಯಗಳಲ್ಲಿ ಈ ಏಳು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಸಿಗಲಿದೆ.
ಕನಸಾಗಿಯೇ ಉಳಿದ ಅಭಿವೃದ್ಧಿ : ವಿಶೇಷ ಸ್ಥಾನಮಾನದ ಬಳಿಕ ಕಲ್ಯಾಣ ಕರ್ನಾಟಕ (ಹೈ.ಕ) ಸಾಕಷ್ಟು ಅಭಿವೃದ್ಧಿ ಯಾಗಲಿದೆ. ಶೈಕ್ಷಣಿಕವಾಗಿ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಜಿಲ್ಲೆಗಳ ಅಭಿವೃದ್ಧೆಗೆ ಬಂದಿದ್ದ ಹಣ ಸರಿಯಾಗಿ ಬಳಕೆಯಾಗದೆ ವಾಪಸ್ ಹೋದ ಘಟನೆಗಳು ನಡೆದಿವೆ. ಜಿಲ್ಲಾಧಿಕಾರಿಗಳು ಸರಿಯಾ ಯೋಜನೆ ಯಾರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದರೆ, ಇತ್ತ ಜನಪ್ರತಿನಿಧಿಗಳು ಅದರತ್ತ ಮುಖ ಮಾಡಿಯೂ ಮಲಗುತ್ತಿಲ್ಲ. ಈಗ ಸಮಿತಿ ರಚನೆಯಾಗಿದೆ ಇನ್ನಾದರೂ ಅಭಿವೃದ್ಧಿ ಕೆಲಸಗಳು ಜರುಗುವಂತಾಗಲಿ.