ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಪ್ಪುಪಟ್ಟಿ ಪ್ರದರ್ಶನ

ಕಲಬುರಗಿ: ಹೈದರಾಬಾದ್ ಕರ್ನಾಟಕ ಪ್ರದೇಶ ಎಂದು ಕರೆಯಲಾಗುತ್ತಿದ್ದ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ವಿಮೋಚನೆ ಹೊಂದಿ ಇಂದಿಗೆ 75 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸರ್ಕಾರದ ವತಿಯಿಂದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲೂ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಸೆಪ್ಟಂಬರ್‌ 17) ಕಾರ್ಯಕ್ರಮ ನಿಮಿತ್ತ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತಕ್ಕೆ ಆಗಮಿಸಿ ವಲ್ಲಭಬಾಯ್ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ತಳವಾರ ಸಮುದಾಯದ ಕೆಲವು ಮಂದಿ ಕಪ್ಪುಪಟ್ಟಿ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್‌ಟಿ) ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗಿದೆ. ಕೂಡಲೇ ಪೊಲೀಸರು ಕಪ್ಪುಪಟ್ಟಿ ಪ್ರದರ್ಶಿಸಿದ 25ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದಿದ್ದಾರೆ.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಪ್ರಮುಖ ಬೀದಿಗಳಲ್ಲಿ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ. ಎರಡು ದಿನಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ನಗರದ ನಗರೇಶ್ವರ ಶಾಲೆಯಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಕಲಾ ತಂಡಗಳು ಮತ್ತು ಕಲಾವಿದರು ಮೆರವಣಿಗೆ ಭಾಗಿಯಾಗಿದ್ದಾರೆ. ಅಲ್ಲದೆ, ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೂ 7,030 ಹುದ್ದೆಗಳು ಸರ್ಕಾರದ ನಿರ್ಲಕ್ಷ್ಯದಿಂದ ಭರ್ತಿಯಾಗದೇ ಉಳಿದಿವೆ. ಹೀಗಾಗಿ ನಿರುದ್ಯೋಗ ಸಮಸ್ಯೆ ಪರಿಹಾರದ ದಿಸೆಯಲ್ಲಿ ಯುವ ಸಮೂಹ ಕಾತುರದಿಂದ ಕಾಯುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *