ರಾಯಚೂರು: ರಾಯಚೂರಿನಲ್ಲಿ ಕಲುಷಿತ ನೀರಿನ ಸಮಸ್ಯೆ ಮುಂದುವರೆದಿದ್ದು, ಇದಕ್ಕೆ ಇನ್ನೋರ್ವ ಮಹಿಳೆ ಬಲಿಯಾಗಿದ್ದಾರೆ. ಮಾನ್ವಿ ತಾಲ್ಲೂಕಿನ ಜುಕೂರು ಗ್ರಾಮದ ಲಕ್ಷ್ಮೀ (28) ಮೃತಪಟ್ಟಿದ್ದಾರೆ. ಒಟ್ಟಾರೆ ಮಾನ್ವಿ ತಾಲ್ಲೂಕಿನಲ್ಲಿ 10 ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲುಷಿತ ನೀರು ಕುಡಿದು ಅಸ್ವಸ್ಥಕ್ಕೀಡಾಗುವುದು ಇದೇ ಮೊದಲಲ್ಲ, ಕಳೆದ ಮೇ ತಿಂಗಳಲ್ಲಿ ರಾಯಚೂರಿನ ಇಂದಿರಾ ನಗರದ ನಿವಾಸಿಗಳು ಕಲುಷಿತ ನೀರು ಕುಡಿದು 7 ಮಂದಿ ಮೃತರಾಗಿದ್ದರೆ 70 ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದರು. ಈ ಕಹಿನೆನಪು ಮರೆಯುವ ಬೆನ್ನಲ್ಲೆ ಮತ್ತೊಂದು ಕಡೆ ಸಾಮೂಹಿಕ ವಾಂತಿಭೇದಿ ಪ್ರಕರಣ ನಡೆದಿರುವುದು ಕಳವಳ ಹುಟ್ಟಿಸಿದೆ.
ಕಲುಷಿತ ನೀರು ಸೇವನೆಯ ಪರಿಣಾಮ
ಹಲವರು ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ. ಚಿಕ್ಕಮಕ್ಕಳು ಹೆಚ್ಚು ಬಾಧಿತರಾಗಿದ್ದಾರೆ. ಈಗಾಗಲೇ 8 ಮಂದಿ ಮೃತಪಟ್ಟಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕಲುಷಿತ ನೀರು ಸರಬರಾಜು : ಮಾನ್ವಿ ತಾಲೂಕಿನ ಜುಕೂರು ಹಾಗೂ ವಲ್ಕಂದಿನ್ನಿ ಗ್ರಾಮಕ್ಕೆ ತುಂಗಭದ್ರಾ ನದಿ ನೀರೆ ಆಧಾರ. ತುಂಗಭದ್ರಾ ನದಿ ನೀರು ನೇರವಾಗಿ ಕಾಲುವೆಗೆ ಸಪ್ಲೈ ಆಗುತ್ತೆ. ಕಾಲುವೆಯಿಂದ ಗ್ರಾಮದ ಟ್ಯಾಂಕ್ ಗೆ ನೀರು ಡಂಪಿಂಗ್ ಆಗುತ್ತೆ. ಬಳಿಕ ಟ್ಯಾಂಕ್ ನಿಂದ ಪ್ರತಿ ಮನೆಗೆ ನೀರು ಸರಬರಾಜಾಗುತ್ತೆ. ಕ್ಯಾನಲ್ ಗಬ್ಬೆದ್ದು ದುರ್ವಾಸನೆ ಹೊಡೆಯೊ ಸ್ಥಿತಿಯಲ್ಲಿದೆ. ಜನರು ಕ್ಯಾನಲ್ ಪಕ್ಕದಲ್ಲೇ ದನಕರುಗಳನ್ನ ತೊಳೆಯುತ್ತಾರೆ, ಅಲ್ಲೇ ಬಟ್ಟೆ-ಪಾತ್ರೆ ತೊಳೆಯುತ್ತಾರೆ. ಅಲ್ಲದೆ ಕೆಲವರು ಕ್ಯಾನಲ್ ಸಮೀಪವೇ ಬಹಿರ್ದೆಸೆಗೆ ಹೋಗ್ತಾರೆ. ಕ್ಯಾನಲ್ನಲ್ಲಿ ರಾಶಿಗಟ್ಟಲೇ ಕೊಳೆತ ಸ್ಥಿತಿಯಲ್ಲಿರೊ ಬಟ್ಟೆಗಳು ಸಿಗುತ್ತವೆ. ಇದೇ ಕೊಳಚೆ ನೀರನ್ನ ಮೋಟರ್ ಮೂಲಕ ಟ್ಯಾಂಕ್ಗೆ ಡಂಪಿಂಗ್ ಮಾಡಲಾಗುತ್ತೆ. ಬಳಿಕ ಕುಡಿಯಲು ಇದೇ ನೀರು ಬಳಕೆ ಮಾಡಲಾಗುತ್ತೆ. ಹೀಗಾಗಿ ಕಲುಷಿತ ನೀರಿನ ಸಮಸ್ಯೆ ಉಲ್ಬಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನಾದರೂ ಜಿಲ್ಲಾಡಳಿತ ಕಲುಷಿತ ನೀರಿಗೆ ಅಂತ್ಯ ಹಾಡು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನಿದ್ದೆಯಿಂದ ಎದ್ದೇಳಬೇಕು. ಜನರಿಗೆ ಒದಗಿರುವ ಸಮಸ್ಯೆಯನ್ನು ನಿವಾರಿಸಲು ವಿಶೇಷ ಯೋಜನರ ರೂಪಿಸಬೇಕು ಎಂದು ಜನಪರ ಸಂಘಟನೆಗಳ ಆಗ್ರಹಿಸಿವೆ.