ಕಲುಷಿತ ನೀರು ಕುಡಿದು ಆರು ಮಂದಿ ಸಾವು: ಎಂಜಿನಿಯರ್, ಪಿಡಿಒ ಅಮಾನತು

ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ 200 ಕ್ಕೂ ಜನರು ವಾಂತಿಬೇಧಿಯಿಂದ ಬಳಲಿದ್ದರು. ಅದರಲ್ಲಿ ಆರು ಜನ ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜಿನಿಯರ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಇಬ್ಬರನ್ನು  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗದ ಕಿರಿಯ ಎಂಜಿನಿಯರ್ ವಿಜಯ ನಾಯ್ಕ, ಮಕರಬ್ಬಿ ಪಿಡಿಒ ಶರಣಪ್ಪ ಅಮಾನತುಗೊಂಡವರು. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರೋ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮದ 200ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.

ಘಟನೆ ಸಂಭವಿಸಿದ ಕೂಡಲೇ ಕಳೆದ ತಿಂಗಳು 23 ರಿಂದ 29 ರವರೆಗೆ ತಾತ್ಕಾಲಿಕ ಆಸ್ಪತ್ರೆ ಆರಂಭವಾಗಿತ್ತು. ಈಗ ಮತ್ತೆ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ಆರಂಭ ಮಾಡಲಾಗಿದೆ. ದಿನದ 24 ಗಂಟೆಯೂ ಆರೋಗ್ಯ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತುರ್ತು ಸೇವೆಗೆ ಮಕರಬ್ಬಿ ಗ್ರಾಮದಲ್ಲಿ 2 ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಮನೆಮನೆಯ ಸರ್ವೆ ಮಾಡಲಾಗುತ್ತಿದೆ. ವಾಂತಿ, ಭೇದಿ ಲಕ್ಷಣ ಇದ್ದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ತಿಂಗಳು ಮಕರಬ್ಬಿಯಲ್ಲಿ ಕಲುಷಿತ ನೀರಿನ ಸಮಸ್ಯೆ ಎದುರಾಯಿತು. ಈ ಪೈಕಿ ಹೆಚ್ಚಿನ ಚಿಕಿತ್ಸೆಗಾಗಿ 33  ಜನರನ್ನು ಹುಬ್ಬಳ್ಳಿ, ದಾವಣಗೆರೆ, ಗದಗ, ಹಾವೇರಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ 10 ದಿನಗಳ ಅಂತರದಲ್ಲಿ 6 ಜನರು ಸಾವಿಗೀಡಾಗಿದ್ದರು.

ಆರು ಮಂದಿ ನಿಧನರಾಗುತ್ತಿದ್ದಂತೆಯೇ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿ ಕೆಲ ಕುಟುಂಬಗಳು ಗ್ರಾಮವನ್ನು ತೊರೆದು ಹೋಗಿದ್ದಾರೆ. ಕೆಲ ಜನರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಾಂತಿಭೇದಿಯಿಂದ ಅಸ್ವಸ್ಥರಾಗಬಹುದೆಂಬ ಆತಂಕದಲ್ಲಿ ತಮ್ಮ ತಮ್ಮ ಮಕ್ಕಳನ್ನು ಗ್ರಾಮಸ್ಥರು ಸಂಬಂಧಿಕರ ಮನೆಗಳಿಗೆ ಕಳುಹಿಸಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ 7-8 ತರಗತಿ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ.

ನೀರು, ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ ಕುರಿತು ಗ್ರಾಮಸ್ಥರು ದೂರಿದ್ದರು.

ಆದೇಶ ವಾಪಸ್ಸಾತಿಗೆ ಕೆಲವರ ಆಗ್ರಹ: ಗ್ರಾಮದ ಕೆಲವರು ಪಿಡಿಓ ಶರಣಪ್ಪ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷದಿಂದ ಉತ್ತಮ‌ ಚಿಕಿತ್ಸೆ ದೊರೆತಿಲ್ಲ ಅವರ ಮೇಲೆ ಕ್ರಮ ಜರುಗಿಸಲಿ, ಈ ಕೂಡಲೇ ಶರಣಪ್ಪ ಅವರ ಅಮಾನತ್ತು ಆದೇಶ ವಾಪಾಸ್ ಪಡೆಯಲಿ ಎಂದು ಗ್ರಾಮದ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

Donate Janashakthi Media

Leave a Reply

Your email address will not be published. Required fields are marked *