ಕಲಬುರಗಿ: ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ಧತೆಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ನನ್ನು ಕೂಡಲೇ ಬಂಧಿಸಿ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ನೀಲಾ ಬುಧವಾರ ಒತ್ತಾಯಿಸಿದ್ದಾರೆ. ಅವರು ಸಿಪಿಐ(ಎಂ) ಕಲಬುರಗಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರತಿಭಟನಾ ರ‍್ಯಾಲಿಯ ನಂತರ ಮಾತನಾಡಿದ ಅವರು, “ಶ್ರೀರಂಗಪಟ್ಟಣದಲ್ಲಿ ಒಂದು ಸಮಾವೇಶವನ್ನುದ್ದೇಶಿಸಿ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ನಿಂದಿಸಿ ಕೋಮು ಪ್ರಚೋದಕ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ನನ್ನು ಈ ಕೂಡಲೇ ಬಂಧಿಸಿ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು. ಈ ಹೇಳಿಕೆ ಅವರ ಕೀಳುತನದ ಮಟ್ವವನ್ನು ತೋರ್ಪಡಿಸುತ್ತದೆ” ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಅವಹೇಳನ | ಹೋರಾಟಗಾರ್ತಿ ನಜ್ಮಾ ನಜೀರ್ ದೂರು; ಕಲ್ಲಡ್ಕ ಭಟ್ ವಿರುದ್ಧ ಎಫ್‌ಐಆರ್
ಭಾನುವಾರ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, “ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?” ಎಂದು ಹೇಳಿಕೆ ನೀಡಿದ್ದನು.
“ಪ್ರಭಾಕರ್ ಭಟ್ ಹೇಳಿಕೆಯು ದಕ್ಷಿಣ ಕರ್ನಾಟಕದ ಮತ್ತು ಮೈಸೂರು ಭಾಗದಲ್ಲಿನ ಶಾಂತಿಯ ವಾತಾವರಣವನ್ನು ಕದಡಲು ವಹಿಸುತ್ತಿರುವ ಕೋಮುವಾದಿಗಳ ಸಂಚಿನ ಮುಂದುವರಿಕೆಯ ಭಾಗವಾಗಿದೆ. ಇದನ್ನು ಎಲ್ಲ ಪ್ರಗತಿಪರರು ಹಾಗೂ ಪ್ರಜಾಪ್ರಭುತ್ವವಾದಿಗಳು ಗಮನಿಸಬೇಕಿದೆ” ಎಂದು ಅವರು ಕರೆನೀಡಿದರು.
ಇದನ್ನೂ ಓದಿ: ಮಂಡ್ಯ | ಪ್ರಭಾಕರ ಭಟ್ ವಿರುದ್ಧ ಮತ್ತೊಂದು ದೂರು ದಾಖಲು
“ರಾಜ್ಯ ಸರಕಾರ ರಾಜ್ಯದ ಸೌಹಾರ್ಧತೆಗೆ ಗಂಭೀರ ಧಕ್ಕೆ ತರುತ್ತಿರುವ ಮತ್ತು ಅಲ್ಪ ಸಂಖ್ಯಾತರನ್ನು ಅವಾಚ್ಯವಾಗಿ ನಿಂದಿಸುತ್ತಿರುವ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡು. ಸರಕಾರದ ದಿವ್ಯ ಮೌನ ಇಂತಹ ಅವಹೇಳನಕಾರಿ ಹಾಗು ಪ್ರಚೋದನಕಾರಿ ಹೇಳಿಕೆಗಳಿಗೆ ಸಂಬಂದಿಸಿ ಅದರ ಸಮ್ಮತಿಯಂತೆ ಕಂಡು ಬರುತ್ತಿದೆ. ರಾಜ್ಯ ಸರಕಾರದ ಜವಾಬ್ದಾರಿರಹಿತ ನಡೆಯನ್ನು ನಾಡಿನ ಪ್ರಜ್ಞಾವಂತರು ಕಟುವಾಗಿ ಠೀಕಿಸಬೇಕಿದೆ” ಎಂದು ಅವರು ಹೇಳಿದರು.
“ಇಂತಹ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವ ಎದೆಗಾರಿಕೆಯನ್ನು ಸರ್ಕಾರ ತೋರಬೇಕಿದೆ. ಅದರ ಬದಲಾಗಿ ಯಾರಾದರೂ ದೂರು ದಾಖಲಿಸಲಿ ಎಂದು ಕಾಯುತ್ತಾ ಕುಳಿತುಕೊಳ್ಳುವ ಜನವಿರೋದಿ ನೀತಿಯನ್ನು ರಾಜ್ಯ ಸರಕಾರ ಈ ಕೂಡಲೆ ಕೈ ಬಿಡಬೇಕು” ಎಂದು ಕೆ. ನೀಲಾ ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಪ್ರಕಾಶ್, ಮುನಿವೆಂಕಟಪ್ಪ, ಪ್ರತಪ್ ಸಿಂಹ, ಮೀನಾಕ್ಷಿ ಬಾಳಿ, ಸಿ. ಕುಮಾರಿ, ಸುನೀಲ್ ಕುಮಾರ್, ನವೀನ್ ಕುಮಾರ್, ಹುಳ್ಳಿ ಉಮೇಶ್ ಸೇರಿದಂತೆ ಹಲವಾರು ಜನರು ಇದ್ದರು.
ವಿಡಿಯೊ ನೋಡಿ: ಕಲ್ಲಡ್ಕ ಪ್ರಭಾಕರ್ ಭಟ್‌ನದ್ದು ಕೊಳಕು ಮನಸ್ಸು, ಭಯೋತ್ಪಾದಕ ಮನಸ್ಥಿತಿ – ಹೋರಾಟಗಾರರ ಆಕ್ರೋಶ Janashakthi Media