ಕುಕನೂರು : ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಸಚಿವ ಹಾಲಪ್ಪ ಆಚಾರ್ ವಿರುದ್ದ ಕಳಪೆ ಕಾಮಗಾರಿ ರಸ್ತೆಯ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಚಿವರನ್ನು ಉಗಿದು ಉಪ್ಪಿನಕಾಯಿ ಹಾಕಿದ ಘಟನೆ ನಡೆದಿದೆ.
ಸ್ವಕ್ಷೇತ್ರದಲ್ಲೇ ರಸ್ತೆ ಕಾಮಗಾರಿ ಕಳಪೆಯಾಗಿದೆ. ಕೈಯಿಂದ ಅಗೆದರೆ ಸಾಕು ಡಾಂಬಾರ್ ಕಿತ್ತು ಬರುತ್ತಿದೆ. ಕಳೆದ ಒಂದು ವಾರದಲ್ಲಿ ಎರಡು ಕಡೆ ಇಂತಹದೊಂದು ಘಟನೆ ನೆಡದಿದ್ದು ಸ್ವತಃ ಗ್ರಾಮಸ್ಥರೇ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಾತೆತ್ತಿದರೆ ಸಾಕು ನಾನು ಪ್ರಾಮಾಣಿಕ, ನನ್ನ ಕ್ಷೇತ್ರದ ಯಾವುದೇ ಕಾಮಗಾರಿಯಲ್ಲಿ ಕಳಪೆ ಎನ್ನುವ ಮಾತೇ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ಸಚಿವರಿಗೆ ಕಳಪೆ ಕಾಮಗಾರಿಯ ದರ್ಶನ ಮಾಡಿಸಿದ್ದಾರೆ. ಈ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನ ಬಂದರೂ ಸಹ ಇನ್ನೂ ಸಹ ಇಲ್ಲಿ ಅಭಿವೃದ್ಧಿ ಎನ್ನುವುದು ಮರಿಚಿಕೆ ಆಗಿದೆ. ಇಂತಹ ಹಿಂದುಳಿದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಇದೀಗ ಡಾಂಬಾರ್ ರಸ್ತೆ ಕಳಪೆ ಆಗಿರುವದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಒಂದು ವಾರದ ಹಿಂದಷ್ಟೆ 1 ಕೋಟಿ 20 ಲಕ್ಷ ವೆಚ್ಚದಲ್ಲಿ ಕುದರಿಮೋತಿ ಗ್ರಾಮದಿಂದ ಚಂಡಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈ ಕಾಮಗಾರಿ ಕಳಪೆಯಿಂದ ಕೂಡಿದ್ದು, ಎರಡೆ ದಿನಕ್ಕೆ ಕಿತ್ತು ಹೋಗಿದೆ. ಕೈ ಹಾಕಿ ಅಗೆದರೆ ಸಾಕು ಡಾಂಬಾರ್ ಕಿತ್ತುಕೊಂಡು ಬರುತ್ತಿದೆ. ಇನ್ನು ಈ ಕಳಪೆ ರಸ್ತೆಯನ್ನು ಮಾಡಿದ್ದು ಸ್ವತಃ ಅವರ ಸಂಬಂಧಿಕರಾದ ಬಾಪುಗೌಡ ಎನ್ನುವರು. ಇವರಿಂದ ಸಚಿವರು 40% ಗಿಂತ ಹೆಚ್ಚು ಕಮೀಷನ್ ಪಡೆದಂತೆ ಕಾಣುತ್ತಿದೆ. ಅದಕ್ಕೆ ಕಳಪೆಯಾಗಿದೆ ಎಂದಯ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.