ಶ್ರೀಪೆರಂಬದೂರ್: ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ವಿತರಿಸಲಾದ ಆಹಾರವು ಕಳಪೆಯಾಗಿದ್ದು, ಅದನ್ನು ಸೇವಿಸಿದ 200ಕ್ಕೂ ಹೆಚ್ಚಿನ ಮಹಿಳಾ ಕಾರ್ಮಿಕ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ 8 ಮಂದಿ ಮಹಿಳಾ ಕಾರ್ಮಿಕರು ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳುನಾಡಿನ ಶ್ರೀಪೆರಂಬದೂರ್ ವಿಶೇಷ ಕೈಗಾರಿಕಾ ಪ್ರದೇಶ(ಎಸ್‌ಸಿಝೆಡ್)ದಲ್ಲಿರುವ ಫಾಕ್ಸ್‌ಕಾನ್ ಕಂಪನಿಯ ಕ್ಯಾಂಟೀನ್‌ನಲ್ಲಿ ವಿತರಿಸುವ ಆಹಾರವು ಕಳಪೆಯಾಗಿದ್ದರಿಂದ ಗಂಭೀರ ಅವಘಡ ಸಂಭವಿಸಿದೆ. ಘಟನೆಯ ನಂತರ ದಿಢೀರ್ ಎಂದು ಪ್ರತಿಭಟನೆಗೆ ಮುಂದಾದ 1,000ಕ್ಕೂ ಹೆಚ್ಚಿನ ಮಹಿಳಾ ಕಾರ್ಮಿಕರು ತಮ್ಮ ಸ್ಥಾನಮಾನದ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಮಹಿಳಾ ಕಾರ್ಮಿಕರ ಸಾವಿಗೆ ಆಹಾರ ವಿಷವೇ ಕಾರಣವಾಗಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕಂಪನಿಯು ಕೂಡಲೇ ಉಳಿದವರ ಆರೋಗ್ಯವನ್ನು ಕಾಪಾಡಬೇಕು, ನಿರ್ಲಕ್ಷ್ಯ ವಹಿಸಿದವರಿಗೆ ಶಿಕ್ಷೆಯಾಗಬೇಕು ಮತ್ತು ಸಾವಿಗೀಡಾವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಭೀಕರ ದುರಂತ ಸಂಭವಿಸಿದ್ದರೂ ಕಂಪನಿ ಕಾರ್ಮಿಕರ ರಕ್ಷಣೆಯಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಅಲ್ಲಿನ ಸಾವಿರಾರು ಕಾರ್ಮಿಕರು ದಿಢೀರ್ ಪ್ರತಿಭಟನೆಗಿಳಿದರು.
ಶುಕ್ರವಾರ ಕಂಪನಿಯ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸಿ ಮಹಿಳಾ ಕಾರ್ಮಿಕರ ಆರೋಗ್ಯ ಚಿಂತಜನಕವಾಗಿದೆ. ಈ ಗಂಭೀರ ದರುಂತ ಹೊರಗೆ ಬಾರದಂತೆ ಹತ್ತಿಕ್ಕಲು ಕಂಪನಿ ಪ್ರಯತ್ನಿಸುತ್ತಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ.
ಮಧ್ಯರಾತ್ರಿ ಘಟನೆ ಬೆಳಕಿಗೆ ಬಂದ ನಂತರ, ಕಂಪನಿಯ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ ಆಡಳಿತ ಮಂಡಳಿಯಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರು ಹೆದ್ದಾರಿಯನ್ನು ತಡೆಹಿಡಿಯಲಾಯಿತು ಎಂದು ಕಾರ್ಮಿಕರ ಹಕ್ಕುಗಳ ಪತ್ರಿಕೆ ವರ್ಕರ್ಸ್ ಯೂನಿಟಿ ವರದಿ ಮಾಡಿದೆ.