ರಾಯಚೂರು: 2021-2022 ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ಬಸವಲೀಲಾ ಎಂಬ ವಿದ್ಯಾರ್ಥಿನಿ ಕಳೆದ 10 ವರ್ಷದಿಂದ 11 ಬಾರಿ ಆಧಾರ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸದರೂ ಆಧಾರ್ ಸಿಕ್ಕಿರಲಿಲ್ಲ. ಇದೀಗ ಕಡೆಗೂ ಆಕೆಗೆ ಆಧಾರ್ ಪ್ರತಿ ಲಭ್ಯವಾಗಿದ್ದು ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕ ಪಡೆದಿದ್ದ ಬಸವಲೀಲಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಅಗತ್ಯವಿದ್ದಿದ್ದರಿಂದ ತಲೆ ಕೆಡಿಸಿಕೊಂಡಿದ್ದಳು. ಇದೀಗ ಆಧಾರ್ ಕಾರ್ಡ್ ದೊರೆತ ಮೇಲೆ ಸಂತಸಗೊಂಡಿದ್ದಾಳೆ.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಜಾಫರ್ ಎನ್ನುವರು ವಿದ್ಯಾರ್ಥಿ ಬಸವಲೀಲಾಗೆ ಕರೆ ಮಾಡಿ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹತ್ತು ದಿನಗಳಲ್ಲೇ ಆಧಾರ್ ಕಾರ್ಡ್ ನೀಡಿದ್ದಾರೆ. ಇದಕ್ಕೆ ವಿದ್ಯಾರ್ಥಿನಿ ಬಸವಲೀಲಾ ಸಂತಸಗೊಂಡಿದ್ದು, ಜಾಫರ್ ಅವರ ಸಹಾಯಕ್ಕೆ ಅಭಿನಂದನೆ ತಿಳಿಸಿದ್ದಾಳೆ.
ಕಳೆದ 10ವರ್ಷಗಳಿಂದ 11ಬಾರಿ ಆಧಾರ್ ಗೆ ಅರ್ಜಿ ಸಲ್ಲಿಸಿಯು ವಿವಿಧ ತಾಂತ್ರಿಕ ಕಾರಣಗಳಿಂದ ಆಧಾರ್ ಕಾರ್ಡ್ ಅರ್ಜಿ ತಿರಸ್ಕಾರವಾಗುತ್ತಿತ್ತು. ಆಧಾರ್ ಸಿಗದ ಕಾರಣ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮೊರೆ ಹೋಗಿದ್ದಳು. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು, ಆಧಾರ್ ಕಾರ್ಡ್ ಮಾಡಿಸಿಕೊಟ್ಟಿರುವುದರಿಂದ ಬಸವಲೀಲಾ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.
ಬಡತನದ ಕುಟುಂಬದ ವಿದ್ಯಾರ್ಥಿನಿ ಬಸವಲೀಲಾ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಸರ್ಕಾರಿ ಶಾಲೆಯಲ್ಲೇ ಓದಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ತಂದಿದ್ದಾಳೆ. ತಾಯಿ ಇಲ್ಲದ ತಬ್ಬಲಿ ಆಧಾರ್ ಕಾರ್ಡ್ ಇಲ್ಲದ ಹಿನ್ನೆಲೆ ಸರ್ಕಾರದ ವಿದ್ಯಾರ್ಥಿ ವೇತನ ಹಾಗೂ ಇತರೆ ಸೌಲಭ್ಯ ಸಿಗುತ್ತಿಲ್ಲವೆಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಳು. ವೈದ್ಯಳಾಗುವ ಕನಸು ಕಂಡಿರುವ ಬಡ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ಮುಳುವಾದಂತಾಗಿತ್ತು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ವಿದ್ಯಾರ್ಥಿನಿ ಬಸವಲೀಲಾ ಮೇ 28ಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಭೇಟಿಯಾಗಿದ್ದಳು. ಈ ವೇಳೆ 11 ಬಾರೀ ಆಧಾರ್ ಪಡೆಯಲು ಅರ್ಜಿ ಸಲ್ಲಿಸಿದರೂ ತಿರಸ್ಕಾರಗೊಂಡಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಳು. ಆ ನಂತರ ಈ ಬಗ್ಗೆ ಸಿಂಧನೂರು ತಹಶಿಲ್ದಾರ್ ಅವರಿಗೆ ಸೂಚಿಸಿ, ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು.