ಕಲಬುರಗಿ : ಮೀಟರ್ ಬಡ್ಡಿ ವ್ಯವಹಾರ ಮತ್ತು ಮೈಕ್ರೋ ಸಾಲ ತೀರಸಲಾಗದೆ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಡೋಣ ಗ್ರಾಮದಲ್ಲಿ ನಡೆದಿದೆ.
ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿ ಗಂಗಮ್ಮ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕೆಪಿಎಸ್, ಆರ್.ಬಿ.ಎಲ್, ಸ್ಪಂದನಾ, ಯೂನಿಟ್, ಕೋಟಕ್ ಬ್ಯಾಂಕ್ ಗಳು ಸಹಿತ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಲ್ಲದೇ, ಆಕ್ರಮವಾಗಿ ಮೀಟರ್ ಬಡ್ಡಿ ನಡೆಸುವವರಿಂದ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಪತಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಇಷ್ಟೊಂದು ಸಾಲ ತೀರಿಸಲು ಮನೆಯನ್ನು ಸಹ ಮಾರಿದರು. ಆದರೂ ಸಾಲ ತೀರಲಿಲ್ಲ. 50 ಸಾವಿರ ಸಾಲಕ್ಕೆ ಮೀಟರ್ ಬಡ್ಡಿಯವರು 2 ಲಕ್ಷ ಮಾಡಿದ್ದಾರೆ. ಅಲ್ಲದೇ ಮೈಕ್ರೋ ಲೋನ್ ಪಡೆದ ಬ್ಯಾಂಕ್ ಸಿಬ್ಬಂದಿಗಳು ಪ್ರತಿದಿನ ಮನೆಗೆ ಬಂದು ಅವಮಾನ ಮಾಡುತ್ತಿದ್ದರು. ಸಂಘಗಳಲ್ಲಿ ಪಡೆದ ಸಾಲವನ್ನೂ ತೀರಿಸಲಾಗಲಿಲ್ಲ. ಶನಿವಾರ ಬೆಳಿಗ್ಗೆ ಕೆಪಿಎಸ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಹೋದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಗೃಹಿಣಿಯ ಪತಿ ಚಂದ್ರಕಾಂತ ತಿಳಿಸಿದ್ದಾರೆ.
ಕಳೆದ ಎರಡು ದಿನದ ಹಿಂದೆ ಚಿಂಚೋಳಿ ತಾಲ್ಲೂಕಿನ ಸುಲೇಪೆಟ್ ಬ್ಯಾಂಕ್ ಸಾಲದ ನೋಟಿಸ್‌ಗೆ ಹೆದರಿ ರೈತನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿರುವುದು ಕಲಬುರ್ಗಿಯ ಜನರನ್ನು ಬೆಚ್ಚಿ ಬೀಳಿಸಿದೆ. ಸಾಲ ನೀಡಿದವರು ಸಾರ್ವಜನಿಕರ ಜೊತೆ ಎಷ್ಟು ಕ್ರೌರ್ಯವಾಗಿ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ರೀತಿ ದೌರ್ಜನ್ಯ ನಡೆಸುವ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಸರ್ಕಾರ ಕ್ರಮ ಜರುಗಿಸಬೇಕಿದೆ.
ಚಿಂಚೋಳಿ ತಾಲ್ಲೂಕಿನ ಸುಲೇಪೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ನಗರದಲ್ಲಿ ಆಕ್ರಮ ಮೀಟರ್ ಬಡ್ಡಿ ವ್ಯವಹಾರ ಮತ್ತು ಮೈಕ್ರೋ ಬ್ಯಾಂಕ್ ಗಳ, ಸಂಘಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಬ್ಯಾಂಕ್ ಮತ್ತು ಸಂಘಗಳಿಗೆ ಮುಟ್ಟುಗೋಲು ಹಾಕಿ ಬಂದ್ ಮಾಡಬೇಕು. ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕುವ ಮೂಲಕ ಪೊಲೀಸ್ ಆಯುಕ್ತರು ನೋಡಿಕೊಳ್ಳಬೇಕು ಎಂದು ಸಿದ್ದೇಶ್ವರ ಕಾಲೊನಿಯ ನಿವಾಸಿ ವಿಜಯಕುಮಾರ್ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.