ಕಲಬುರಗಿ: 11 ವರ್ಷದ ಬಾಲಕಿಯ ಮೇಲೆ ಕಲಬುರಗಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ನಂತರ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿವೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲು ತೂರಾಟ ಮತ್ತು ಸಾರ್ವಜನಿಕ ಆಸ್ತಿ ಹಾನಿಯ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಎಸಗಿದ ಶಿಕ್ಷಕನಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಂಜಾರ ಸಮಾಜದ 11 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಓರ್ವ ಶಿಕ್ಷಕ ಅತ್ಯಾಚಾರ ಮಾಡಿದ ಘಟನೆ ನಡೆದಿತ್ತು. ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅತ್ಯಾಚಾರ ಖಂಡಿಸಿ ಬಂಜಾರ ಸಮುದಾಯ ಬೀದಿಗಿಳಿದಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಕಂಡಕಂಡ ಕಡೆ ಕಲ್ಲು ತೂರಾಟ ಮಾಡಿದ್ದರು. ಈ ಹಿನ್ನಲೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಕಂಠ ರಾಠೋಡ್ ಚಿತ್ತಾಪುರ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಹೋರಾಟದ ವೇಳೆ ಸಾರ್ವಜನಿಕ ಆಸ್ತಿ ಹಾಳು ಹಿನ್ನಲೆ ಬ್ರಹ್ಮವೂರ ಹಾಗೂ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಸದ್ಯ ಬ್ರಹ್ಮಪೂರ ಠಾಣೆಯಲ್ಲಿ ಮಣಿಕಂಠ ರಾಠೋಡ್ ಸ್ಟೇಷನ್ ಬೇಲ್ ಪಡೆದಿದ್ದು, ಸ್ಟೇಷನ್ ಬಜಾರ್ ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಅತ್ಯಾಚಾರ ಕೃತ್ಯ ಖಂಡಿಸಿ ಇತ್ತೀಚೆಗೆ ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಸವಿತಾ ಸಮಾಜದ ಸವಿತಾನಂದ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬಂಜಾರ ಸಮಾಜ, ಹಿಂದೂಪರ ಸಂಘಟನೆಗಳು ಸೇರಿ ಸಾವಿರಾರು ಜನ ಬೃಹತ್ ಪ್ರತಿಭಟನೆ ಮಾಡಿದ್ದರು. ಅತ್ಯಾಚಾರ ಎಸಗಿರುವ ಶಿಕ್ಷಕ ಹಾಜಿಮಲಂಗ್ ನನ್ನ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದರು.
ಇನ್ನು ನಗರದ ಬಂಜಾರ ಭವನದಿಂದ ಡಿಸಿ ಕಚೇರಿವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಲ ಕಿಡಿಗೆಡಿಗಳು ಕಲ್ಲು ತೂರಾಟ ಮಾಡಿದ್ದರು. ಘಟನೆಯಲ್ಲಿ ಇನ್ನೋವಾ ಕಾರ್, ಆಟೋ ಸೇರಿ ಮೂರ್ನಾಲ್ಕು ವಾಹನಗಳಿಗೆ ಹಾನಿ ಅಲ್ಲದೆ ಕೆಲ ಅಂಗಡಿಗಳ ಕಿಡಕಿ, ಗಾಜುಗಳು ಪುಡಿಪುಡಿಯಾಗಿದ್ದವು. ಕಲ್ಲು ತೂರಾಟದಲ್ಲಿ ಆಟೋ ಚಾಲಕನೋರ್ವನ ತಲೆಗೆ ಕಲ್ಲು ಬಿದ್ದು, ಗಾಯಗೊಂಡಿದ್ದು. ಇದೇ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ
ಮಾಡಿದ್ದರು. ಡಿಸಿ ಕಚೇರಿ ಎದುರು ಟ್ರೆರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾ ನಿರತರು ಆಕ್ರೋಶ ಹೊರಹಾಕಿದ್ದರು.
ಇದಕ್ಕೂ ಮುನ್ನ ಬಂಜಾರ ಭವನದಲ್ಲಿ ಮಠಾಧೀಶರ ಸಮ್ಮುಖದಲ್ಲಿ ಪ್ರತಿಭಟನಾ ಸಮಾವೇಶ ಮಾಡಲಾಗಿದೆ. ಈ ವೇಳೆ ಮಾತನಾಡಿದ್ದ ಮಾಶಾಳದ ಮರುಳಾನಂದ ಶಿವಾಚಾರ್ಯರು, ಇನ್ನುಂದ ಮಲಗಿಕೊಳ್ಳಬೇಡಿ ಮಲಗಿಕೊಂಡರೆ, ಹಿಂದೂ ಧರ್ಮ ಸರ್ವನಾಶ ಆಗುತ್ತೆ. ನಮ್ಮ ದೇಶದ ಅನ್ನ ತಿಂದು ಬೇರೆ ದೇಶದ ಬಗ್ಗೆ ಹೊಗಳುವ ಕುನ್ನಿಗಳಿದ್ದಾರೆ. ನಾವು ಸನ್ಯಾಸಿಗಳು, ಎಲ್ಲಿ ಅನ್ಯಾಯ, ಅಧರ್ಮ ನಡೆಯುತ್ತೆ ಅದರ ವಿರುದ್ಧ ಹೋರಾಟ ಅಷ್ಟೇ ಅಲ್ಲ ನಾವು ಜೀವ ಕೊಡಲು ಸಿದ್ಧರಿದ್ದೇವೆ. ಸನಾತನ ಧರ್ಮ ಅಂತಾ ಬಂದಾಗ ತೊಡೆತಟ್ಟಿ ನಿಲ್ಲಿ, ಇನ್ನುಮುಂದೆ ಹತ್ತು ಮಕ್ಕಳು ಹಡೆಯಬೇಕು ಅಂತಾ ಕರ ನೀಡಿದ್ದರು.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಲಬುರಗಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಕಲ್ಲು ತೂರಾಟದ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದರು. ಸದ್ಯ ಅತ್ಯಾಚಾರ ವಿರುದ್ಧದ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಇದನ್ನೂ ನೋಡಿ : ಬೆಳಗಾವಿ | ಕಬ್ಬು ಬೆಳೆಗೆ ಸೂಕ್ತ ದರ ನಿಗದಿ ಮಾಡಿ – ಕಬ್ಬು ಬೆಳೆಗಾರರ ಧರಣಿ Janashakthi Media