ಕಲಬುರಗಿ: ವಿನಾಕಾರಣ ಕಿರುಕುಳ ನೀಡಿ ಕೆಲಸದಿಂದ ತೆಗೆದ ಆರೋಪ ಮಾಡಿದ ವ್ಯಕ್ತಿ, ಕಚೇರಿಯ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಿನಾರಾ ಕ್ಯಾಪಿಟಲ್‌ನ ಸಹಾಯಕ ವ್ಯವಸ್ಥಾಪಕನಾಗಿದ್ದ ಕೃಷ್ಣಕಾಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಸಾರ್ವಜನಿಕರು ಕೃಷ್ಣಕಾಂತ್ ಅವರನ್ನು ದಾಖಲಿಸಿದ್ದಾರೆ. ಈ ಸಂಬಂಧ ಮಹಾತ್ಮ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಕೃಷ್ಣಕಾಂತ್ನನ್ನು ಕೆಲಸದಿಂದ ತಗೆಯಲಾಗಿತ್ತು. ವಿನಾಕಾರಣ ಬ್ಯಾಂಕ್ ಮ್ಯಾನೇಜರ್ ಕಿರುಕುಳ ನೀಡಿದ್ದಾರೆ. ನನ್ನನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದಿದ್ದಾರೆ ಎಂದು ಆರೋಪಿಸಿ ಕಚೇರಿ ಮುಂದೆ ವಿಷ ಸೇವಿಸಿ ಕೃಷ್ಣಕಾಂತ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಹಾಯಕ ವ್ಯವಸ್ಥಾಪಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೂ ಸಹ ಅನಗತ್ಯವಾಗಿ ಕಲಬುರ್ಗಿಯಿಂದ ವಿಜಯಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಅಪಹಾಸ್ಯ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ತೊಂದರೆ ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಕ್ರಮ ಕೈಗೊಳ್ಳುವ ಬದಲು ಯಾವುದೇ ನೋಟಿಸ್ ನೀಡದೇ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಆರೋಪಿಸಿರುವ ಕೃಷ್ಣಕಾಂತ್ ಅವರು, ತನ್ನ ಆತ್ಮಹತ್ಯೆಗೆ ಕಿನರಾ ಕ್ಯಾಪಿಟಲ್‍ನ ಐದು ಜನ ಅಧಿಕಾರಿಗಳ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.