ಕಲಬುರಗಿ: ಸಿಗರೇಟ್ ಪ್ಯಾಕೆಟ್‌ಗಳಿದ್ದ ಬಾಕ್ಸ್‌ಗಳನ್ನು ಕದ್ದ ಆರೋಪದ ಮೇರೆಗೆ ನಗರದ ಖಾಸಗಿ ಬ್ಲಡ್ ಬ್ಯಾಂಕ್ ಮಾಲೀಕ ತನ್ನ ಬಳಿ ಕೆಲಸಕ್ಕಿದ್ದ ದಲಿತ ಸಮುದಾಯಕ್ಕೆ ಸೇರಿದ ಯುವಕನಿಗೆ ಸಹಚರರೊಂದಿಗೆ ಸೇರಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲಡ್ ಬ್ಯಾಂಕ್ ಮಾಲೀಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಪ್ರಗತಿ ಕಾಲೋನಿ ನಿವಾಸಿ ಶಶಿಕಾಂತ ಮಲ್ಲಿಕಾರ್ಜುನ ನಾಟೀಕಾರ (25) ಹತ್ಯೆಯಾದ ದಲಿತ ಯುವಕ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ದಲಿತ ಯುವಕ ಶಶಿಕಾಂತ್ ಅವರ ತಂದೆ ಮಲ್ಲಿಕಾರ್ಜುನ್ ರಾಣಪ್ಪ ನಾಟೀಕರ್ ಅವರು ದೂರು ನೀಡಿದ ಬೆನ್ನಲ್ಲೇ ಬ್ಲಡ್ ಬ್ಯಾಂಕ್ ಮಾಲಕ ಚಂದ್ರಶೇಖರ ಮಲ್ಲಿನಾಥ ಪಾಟೀಲ್, ಆದಿತ್ಯ ಅಲಿಯಾಸ್ ಆದೇಶ ಮರಾಠಾ, ಓಂ ಪ್ರಕಾಶ್ ಘೋರವಾಡಿ, ರಾಹುಲ್ ಪಾಟೀಲ್ ಹಾಗೂ ಅಷ್ಪಾಕ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮಕ್ಕಳಿಗೆ ‘ಜೈ ಶ್ರೀರಾಮ್’ ಎಂದು ಜಪಿಸುವಂತೆ ಒತ್ತಾಯ: ನಿರಾಕರಿಸಿದಾಗ ಅವರಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ
ಪ್ರಕರಣದ ಹಿನ್ನೆಲೆ : ನಗರದ ಬಸವೇಶ್ವರ ಆಸ್ಪತ್ರೆಯ ಬಳಿ ಬ್ಲಡ್ ಬ್ಯಾಂಕ್ ನಡೆಸುತ್ತಿರುವ ಚಂದ್ರಶೇಖರ ಪಾಟೀಲ ಬಳಿ ಶಶಿಕಾಂತ ಕೆಲಸ ಮಾಡುತ್ತಿದ್ದ. ₹1.40 ಲಕ್ಷ ಮೌಲ್ಯದ ಸಿಗರೇಟ್ ಪ್ಯಾಕೆಟ್‌ಗಳನ್ನು ಶಶಿಕಾಂತ ಕದ್ದಿರುವ ಆರೋಪ ಹೊರಿಸಿದ ಚಂದ್ರಶೇಖರ ಅಷ್ಟು ಹಣವನ್ನು ದಂಡದ ರೂಪದಲ್ಲಿ ಕಟ್ಟುವಂತೆ ತಾಕೀತು ಮಾಡಿದ್ದ. ನಂತರ ತನ್ನ ಸಹಚರರನ್ನು ಕರೆಸಿ ಶಶಿಕಾಂತನ ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಹಲ್ಲೆ ಮಾಡಿಸಿದ್ದ ಎಂದು ತಿಳಿದು ಬಂದಿದೆ.
ಯುವಕನ ಸಾವಿಗೆ ಕಾರಣರಾದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಜಿಮ್ಸ್ ಆಸ್ಪತ್ರೆ ಬಳಿ ಶುಕ್ರವಾರ ಸಂಜೆ ಯುವಕನ ಶವವಿಟ್ಟು ಕುಟುಂಬದ ಸದಸ್ಯರು ಹಾಗೂ ದಲಿತ ಸಮುದಾಯದ ಮುಖಂಡರು ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಆರೋಪಿಗಳ ವಿರುದ್ಧ ಕೊಲೆ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿರುವುದರಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೃತ ಶಶಿಕಾಂತ ಪೋಷಕರಿಗೆ ₹4.12 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.