ಕಲಬುರಗಿ: ವ್ಯಕ್ತಿಯೊಬ್ಬ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗಿರುವ ಘಟನೆ ಕಲಬುರಗಿ ನಗರದ ಸೂಪರ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ. ಮಾಹಿತಿ ತಿಳಿದು ರಕ್ಷಣೆಗೆ ಧಾವಿಸಿದ ಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆರೋಪಿ ಅಬ್ದುಲ್ ಜಾಫರ್ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಮಾರಕಾಸ್ತ್ರ ಹಿಡಿದು ಬಂದ ಅಬ್ದುಲ್ ಜಾಫರ್ ಏಕಾಏಕಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡಲು ಮುಂದಾಗಿದೆ. ಜನರನ್ನು ಭಯ ಹುಟ್ಟಿಸಲು ಮುಂದಾದ ಆತನ ಹುಚ್ಚಾಟ ಕಂಡು ಸಾರ್ವಜನಿಕರು ಆತಂಕಕ್ಕೆ ಒಳಗಾದರು.
ಇದನ್ನು ಓದಿ: ಕಾಫಿ ಬೀಜ ಕದ್ದ ಕಾರಣ ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ: ಐವರ ಬಂಧನ
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ವಹೀದ್ ಕೊತ್ವಾಲ್ ಮತ್ತು ಸಿಬ್ಬಂದಿ ಆರೋಪಿಯನ್ನು ಶರಣಾಗುವಂತೆ ಸೂಚನೆ ನೀಡಿದ್ದಾರೆ. ಕೂಡಲೇ ಪೊಲೀಸರ ಮೇಲೆಯೂ ಹಲ್ಲೆಗೆ ಯತ್ನಿಸಿರುವ ಅಬ್ದುಲ್ ಜಾಫರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆರೋಪಿಯನ್ನು ಹಿಡಿಯಲು ಸುಮಾರು 15ಕ್ಕೂ ಹೆಚ್ಚು ಪೊಲೀಸರು ಸುಮಾರು 1 ಗಂಟೆಗಳ ಕಾಲ ಆರೋಪಿಯನ್ನು ಹರಸಾಹಸ ಪಡಬೇಕಾಯಿತು.
ಪೊಲೀಸರು ಆರೋಪಿಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದರೂ ಕೇಳದ ಅಬ್ದುಲ್ ಜಾಫರ್ ಕೇಳದೆ, ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಪಿಎಸ್‍ಐ ತಮ್ಮ ಹಾಗೂ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದರು. ಇದಕ್ಕೂ ಜಗ್ಗದಿದ್ದಾಗ ಪಿಎಸ್‍ಐ ವಹೀದ್ ಕೊತ್ವಾಲ್ ಆರೋಪಿ ಕಾಲಿಗೆ ಮೂರು ಸುತ್ತು ಗುಂಡು ಹಾರಿಸಿದರು. ಗುಂಡೇಟಿನಿಂದ ಸ್ಥಳದಲ್ಲಿ ಕುಸಿದುಬಿದ್ದ ಆರೋಪಿಗೆ ಪೊಲೀಸರು ಹಿಗ್ಗಾಮುಗ್ಗ ಲಾಠಿಯಿಂದ ಹೊಡೆದು ಬಂಧಿಸಿದ್ದಾರೆ.
ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಬಂಧಿತ ಅಬ್ದುಲ್ ಜಾಫರ್ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾದರೂ ಯಾಕೆ ಎಂಬ ವಿಚಾರ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ