ಕಲಬುರಗಿ: 15 ವರ್ಷದ ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಿನ್ನೆ ಭಾನುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಬ್ಬಿನ ಗದ್ದೆಗೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಲಾಗಿದೆ. ಬಾಲಕಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೃತದೇಹ ಸಿಕ್ಕಿದೆ. 9ನೇ ತರಗತಿ ಓದುತ್ತಿದ್ದ ಬಾಲಕಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಳು. ಕಲಬುರಗಿಯ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸ್ ವರಿಷ್ಠೆ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ‘ನಕಲಿ ದಾಖಲೆ ಸೃಷ್ಟಿಸು’ ಕಂದಾಯ ನೌಕರನ ಮೇಲೆ ಶಾಸಕ ಎಂ.ಪಿ ರೇಣುಕಾಚಾರ್ಯ ಒತ್ತಡ
ಘಟನೆಯ ಹಿನ್ನೆಲೆ : ಅಫಜಲಪುರ ತಾಲೂಕಿನ 15 ವರ್ಷದ ಬಾಲಕಿ ಶಾಲೆಗೆ ತೆರಳಲು ಆಳಂದ ತಾಲೂಕಿನ ಗ್ರಾಮವೊಂದರಲ್ಲಿನ ತನ್ನ ಅತ್ತೆ ಮನೆಯಲ್ಲಿದ್ದಳು. ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಬಹಿರ್ದೆಸೆಗೆಂದು ಮನೆಯಿಂದ ಹೊರಹೋಗಿದ್ದ ಬಾಲಕಿ ಸುಮಾರು ಹೊತ್ತು ಕಳೆದರೂ ಬಂದಿರಲಿಲ್ಲ. ಗಾಬರಿಗೊಂಡ ಕುಟುಂಬಸ್ಥರು, ಗ್ರಾಮಸ್ಥರು ಹುಡುಕಾಟ ನಡೆದಿದಾಗ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಬಾಲಕಿಯ ಮೈಮೇಲೆ ಎಳೆದಾಡಿ ತರಚಿದ ಗಾಯಗಳಾಗಿವೆ. ನಂತರ ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿದೆ. ಮೇಲ್ನೋಟಕ್ಕೆ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ದೀಪಾವಳಿ ರಜೆಗೆ ತನ್ನ ಸ್ವಗ್ರಾಮಕ್ಕೆ ತೆರಳಿ, ನವೆಂಬರ್ 03ರಿಂದ ಪರೀಕ್ಷೆ ಇರುವ ಕಾರಣ ನಿನ್ನೆಯಷ್ಟೆ ಮರಳಿ ಬಂದಿದ್ದಳು. ಹೀಗೆ ಬಂದವಳು ಬಯಲು ಬಹಿರ್ದೆಸೆಗೆ ಹೋದಾಗ ದುಷ್ಕರ್ಮಿಗಳು ಅಮಾನವೀಯ ಕೃತ್ಯ ನಡೆಸಿದ್ದಾರೆ. ಸ್ಥಳಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.