ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ಮುಂದುವರೆದಿದ್ದು, ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ನಾಯಕಿ ದಿವ್ಯಾ ಹಾಗರಗಿ ಅವರ ಪತಿಯನ್ನು ಸಿಐಡಿ ತಂಡ ಬಂಧಿಸಿದೆ.
ನೆನ್ನೆ(ಏಪ್ರಿಲ್ 17) ದಿವ್ಯಾ ಹಾಗರಗಿ ಮನೆಗೆ ಭೇಟಿ ನೀಡಿದ್ದ ಸಿಐಡಿ ತಂಡ, ತನಿಖೆಗೆ ಅಸಹಕಾರ ಹಾಗೂ ಆರೋಪಿಗಳ ನಾಪತ್ತೆಗೆ ಬೆಂಬಲ ನೀಡುತ್ತಿದ್ದಾರೆಂಬ ಎಂಬ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಪತಿ ರಾಜೇಶ್ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: 545 ಪಿಎಸ್ಐ ನೇಮಕಾತಿ ಅಕ್ರಮ – ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಗೆ ಸಿಐಡಿ ದಾಳಿ
ದಿವ್ಯಾ ಹಾಗರಗಿಗೆ ಸೇರಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಶಾಲೆಯ ಮೂವರು ಮಹಿಳಾ ಕೊಠಡಿ ಮೇಲ್ವಿಚಾರಕರು, ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ ಮೂವರು ಅಭ್ಯರ್ಥಿಗಳು ಸೇರಿ ಒಟ್ಟು ಆರು ಮಂದಿಯನ್ನು ಈಗಾಗಲೇ ಸಿಐಡಿ ತಂಡ ಬಂಧಿಸಿದೆ.
ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ತಂಡ ಅವರ ಪತಿ ರಾಜೇಶ್ ಅವರನ್ನು ವಿಚಾರಣೆ ನಡೆಸುತ್ತಿದೆ.
ದಿವ್ಯಾ ಹಾಗರಗಿ ನಮ್ಮ ನಾಯಕಿಯಲ್ಲ: ಬಿಜೆಪಿ ಶಾಸಕ!
ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪಿ ದಿವ್ಯಾ ಹಾಗರಗಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ಪಕ್ಷದ ನಾಯಕಿಯಲ್ಲ ಎಂದು ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಆಶ್ವರ್ಯಕರ ಹೇಳಿಕೆ ನೀಡಿದ್ದಾರೆ.
ದಿವ್ಯಾ ಹಾಗರಗಿ ಅಥವಾ ಯಾರೇ ಅಕ್ರಮದಲ್ಲಿ ಭಾಗಿಯಾಗಿದ್ದರೆ ಅದನ್ನು ಪಕ್ಷ ಮತ್ತು ಸರಕಾರ ಸಹಿಸಿಕೊಳ್ಳುವುದಿಲ್ಲ. ಅಕ್ರಮ ನಡೆದಿರುವುದು ಸಾಬೀತಾದರೆ ಶಿಕ್ಷೆ ಆಗಲಿದೆ ಎಂದಿದ್ದಾರೆ.