ಕಲಬುರ್ಗಿ, ಬಳ್ಳಾರಿ ಮೇಯರ್- ಉಪಮೇಯರ್ ಚುನಾವಣೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ಕಾರ್ಯನಿಮಿತ್ತ ಈಗಾಗಲೇ ದಿನಾಂಕ ಘೋಷಣೆ ಮಾಡಲಾಗಿದ್ದ ಕಲಬುರ್ಗಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಗಳ ಮೇಯರ್-ಉಪಮೇಯರ್‌ ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಗೆ ನವೆಂಬರ್‌ 18(ನಾಳೆ) ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗೆ ನವೆಂಬರ್‌ 20ರಂದು ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದ್ದವು. ಆದರೆ, ಡಿಸೆಂಬರ್‌ 10ರಂದು ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತಗಳು ಚುನಾವಣಾ ಕಾರ್ಯದಲ್ಲಿ ತೊಡಗಿರುವುದರಿಂದ ಮೇಯರ್, ಉಪಮೇಯರ್ ಚುನಾವಣೆ ಮುಂದೂಡಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಇದನ್ನು ಓದಿ: ಪಾಲಿಕೆ ಚುನಾವಣೆ : ಬೆಳಗಾವಿಯಲ್ಲಿ ಬಿಜೆಪಿ, ಕಲಬುರ್ಗಿ ಹುಬ್ಬಳ್ಳಿ-ಧಾರವಾಡದಲ್ಲಿ ಅತಂತ್ರ ಸ್ಥಿತಿ

ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿರುವ ಕಲಬುರ್ಗಿ ಪ್ರಾದೇಶಿಕ ಆಯುಕ್ತರು, “ಕಲಬುರ್ಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳ 23ನೇ ಅವಧಿಯ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿಗಳ ಚುನಾವಣೆ ನಿಗದಿಪಡಿಸಿ ನೋಟಿಸ್ ಜಾರಿಗೊಳಿಸಲಾಗಿತ್ತು. ಚುನಾವಣಾ ಆಯೋಗವು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಹೊರಡಿಸಿದೆ. ಜಿಲ್ಲಾಡಳಿತಗಳು ಪ್ರಸ್ತುತ ವಿಧಾನ ಪರಿಷತ್ ಚುನಾವಣೆಗೆ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಗಳಿಗೆ ನಡೆಸಬೇಕಿದ್ದ ಚುನಾವಣೆಯನ್ನೂ ಮುಂದೂಡಲಾಗಿದೆ” ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್‌ ಚುನಾವಣೆ ಬಳಿಕ ದಿನಾಂಕ ಪ್ರಕಟಣೆ

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ದಿನಾಂಕ ಡಿಸೆಂಬರ್‌ 10ರಂದು ಮತದಾನ ನಡೆಯಲಿದ್ದು, ಡಿ.14ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಡಿಸೆಂಬರ್‌ 16ರಂದು ಮತ್ತೊಮ್ಮೆ ಕಲಬುರ್ಗಿ ಮತ್ತು ಬಳ್ಳಾರಿ ಮೇಯರ್, ಉಪಮೇಯರ್ ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಲಬುರ್ಗಿ ಪಾಲಿಕೆ ಅತಂತ್ರ

ಕಲಬುರ್ಗಿಯ 55 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ. ಅದರಲ್ಲಿ ಕಾಂಗ್ರೆಸ್ 27, ಬಿಜೆಪಿ 24 ಮತ್ತು ಜೆಡಿಎಸ್ 4 ಸ್ಥಾನಗಳನ್ನು ಗಳಿಸಿವೆ. ಮೂರು ಪಕ್ಷಗಳಿಗೂ ಅಧಿಕಾರ ಹಿಡಿಯಲು ಸ್ಥಾನಗಳು ಲಭಿಸದ ಕಾರಣದಿಂದ ಅಂತಂತ್ರವಾಗಿದೆ. ಪಾಲಿಕೆಯ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಅಥವಾ ಬಿಜೆಪಿ ಪಕ್ಷದವರು ಯಾರೇ ಮೇಯರ್ ಸ್ಥಾನ ಅಲಂಕರಿಸಬೇಕೆಂದರೂ ಜೆಡಿಎಸ್ ಬೆಂಬಲ ಅನಿವಾರ್ಯವಾಗಿದೆ. ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಒಬಿಸಿಗೆ ಮೀಸಲಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್‌ ಪಕ್ಷದ ತೀರ್ಮಾನವೇ ಅಂತಿಮವಾಗಿದೆ. ಅಲ್ಲದೆ, ಮೇಯರ್ ಸ್ಥಾನವನ್ನು ತನಗೇ ಬಿಟ್ಟುಕೊಡುವಂತೆ ಜೆಡಿಎಸ್ ಬಿಗಿಪಟ್ಟು ಹಿಡಿದಿದೆ. ಆದರೆ, ಇದಕ್ಕೆ ರಾಷ್ಟ್ರೀಯ ಪಕ್ಷಗಳು ಒಪ್ಪಿಗೆ ನೀಡಿಲ್ಲ.

ಚುನಾವಣೆ ನಡೆದು ಆರು ತಿಂಗಳು ಕಳೆದರೂ ಮೇಯರ್‌ ಉಪಮೇಯರ್‌ ಇಲ್ಲ

ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳು ಕಳೆದರೂ ಸಹ ಮೇಯರ್, ಉಪಮೇಯರ್ ಇಲ್ಲದೆ ದಿನಗಳು ಕಳೆಯುತ್ತಿವೆ. ಕಳೆದ ಏಪ್ರಿಲ್‌ನಲ್ಲಿ ಚುನಾವಣೆ ನಡೆದು, ಫಲಿತಾಂಶ ಘೋಷಣೆಯಾಗಿತ್ತು. ಕೆಲವು ಕಾರಣಗಳ ನೆಪವೊಡ್ಡಿ ಮೇಯರ್, ಉಪಮೇಯರ್ ಚುನಾವಣೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಈ ಮಧ್ಯೆ ಅಂತಿಮವಾಗಿ ನವೆಂಬರ್‌ 18ರಂದು ಚುನಾವಣೆ ಘೋಷಣೆಯಾಗಿತ್ತಾದರೂ ಈಗ ವಿಧಾನ ಪರಿಷತ್ ಚುನಾವಣೆಯಿಂದಾಗಿ ಮತ್ತೊಮ್ಮೆ ಮುಂದೆ ಹೋಗಿದೆ.

ಇದನ್ನು ಓದಿ: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಪ್ರಭಲ ಅಕಾಂಕ್ಷಿಯಾಗಿ ಎನ್.ಎಮ್.ಡಿ ಭಾಷಾ ಅವರ ಪುತ್ರ ಆಸೀಫ್!!

ಬಳ್ಳಾರಿಯ 39 ವಾರ್ಡ್‌ಗಳ ಪೈಕಿ 21 ಕಾಂಗ್ರೆಸ್, 13 ಬಿಜೆಪಿ ಮತ್ತು ಐವರು ಪಕ್ಷೇತರರು ಜಯಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇದ್ದರೂ, ಏಪ್ರಿಲ್-ಮೇ ನಲ್ಲಿ ಕೋವಿಡ್ ತೀವ್ರವಾಗಿ ಇದ್ದರಿಂದ ಮೇಯರ್, ಉಪಮೇಯರ್ ಚುನಾವಣೆ ನಡೆಸದೆ ವಿವಿಧ ಕಾರಣಗಳನ್ನು ನೀಡಿ ಮುಂದೂಡುತ್ತಾ ಬರಲಾಗಿತ್ತು. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ. ಈ ಮಧ್ಯೆ ಆಪರೇಷನ್ ಕಮಲಕ್ಕೆ ಅನುಕೂಲ ಮಾಡಿಕೊಡಲು ಚುನಾವಣೆ ಮುಂದೂಡಲಾಗುತ್ತಿದೆ ಎಂಬ ಆರೋಪವೂ ಕಾಂಗ್ರೆಸ್‌ನಿಂದ ಕೇಳಿಬಂದಿತ್ತು.

ಅಂತಿಮವಾಗಿ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಬಳ್ಳಾರಿ ಮಹಾನಗರ ಪಾಲಿಕೆಯ ಹಲವು ಸದಸ್ಯರು ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೇಯರ್, ಉಪಮೇಯರ್ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದರು.

ಈಗ ಮತ್ತೆ ಬಹುತೇಕ ಒಂದು ತಿಂಗಳು ಚುನಾವಣೆ ಮುಂದೆ ಹೋಗಿದ್ದರಿಂದ ಅವರೆಲ್ಲರೂ ನಿರಾಸೆಯಿಂದ ವಾಪಸಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *