ಕಲಬುರಗಿ: ಗುರಮಿಟಕಲ್ ತಾಲೂಕಿನ ಇಬ್ಬರು ಯುವತಿಯರ ಮೇಲೆ ಫೆ.12 ರಂದು ನಡೆದಿದ್ದ ಸಂಶಯಾಸ್ಪದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI) ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಡಿವೈಎಫ್‌ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ ಮಾತನಾಡಿ, ಗುರುಮಿಠ್ಕಲ್ ತಾಲೂಕಿನ ಇಂದಿರಾನಗರದ ಅಲೆಮಾರಿ ಬುಡ್ಗಜಂಗಮ ಸಮುದಾಯದ 19 ವರ್ಷದ ಯುವತಿ ಹಾಗೂ 15 ವರ್ಷದ ಬಾಲಕಿ ಇಬ್ಬರು ಹೆಣ್ಣುಮಕ್ಕಳು ದಿನಾಂಕ : 12.02.2025 ರಂದು ಚಿಂದಿ ಆಯುವ ಕೆಲಸಕ್ಕೆ ಹೋದ ಸಂದರ್ಭದಲ್ಲಿ ದುರುಳರು ಅತ್ಯಾಚಾರವೆಸಗಿ ಕೊಲೆಗೈದು ಮೃತ ದೇಹಗಳನ್ನು ಕೆರೆಯಲ್ಲಿ ಎಸೆದಿದ್ದಾರೆ. ಈ ಘಟನೆ ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ:ಒಂದೂವರೆ ವರ್ಷದ ನಂತರ ಎಸ್‌ಪಿ ನಾಯಕ ಅಬ್ದುಲ್ಲಾ ಅಜಂ ಖಾನ್ ಜೈಲಿನಿಂದ ಬಿಡುಗಡೆ
ಆದರೆ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವುದು ತೀವ್ರವಾಗಿ ಖಂಡನಾರ್ಹವಾದುದು. ಈವರೆಗೂ ಯಾರನ್ನೂ ಬಂಧಿಸದಿರುವುದು ಇಲಾಖೆಯ ನಿರ್ಲಕ್ಷ ಮಾಡಿದೆ. ಯಾದಗಿರಿಯ ಜಿಲ್ಲಾ ಆಡಳಿತವೂ ಈ ನಿರ್ಲಕ್ಷಕ್ಕೆ ಕಾರಣವಾಗಿದೆ. ಚುನಾವಣೆಯಲ್ಲಿ ಆಯ್ಕೆಯಾದ ಶಾಸಕ, ಸಚಿವ ಮತ್ತು ಸಂಸದರು ಇಂತಹ ಘಟನೆಗಳು ಘಟಿಸಿದಾಗ ಕೂಡಲೇ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು. ಅತ್ಯಂತ ಕಟ್ಟೆ ಕಡೆಯ ಅಂಚಿನ ಬದುಕು ಬಾಳುವವರ ಬಗ್ಗೆ ಜನಪ್ರತಿನಿಧಿಗಳಿಗೆ ಕನಿಷ್ಠ ಕಾಳಜಿ ಇಲ್ಲವೆಂಬುದು ಇದರಿಂದ ಸಾಬೀತಾಗುತ್ತದೆ ಎಂದರು.
ಸಮಾಜದಲ್ಲಿ ಯಾವುದೇ ಭದ್ರತೆಯಿಲ್ಲದೇ ಜೀವನ ನಡೆಸುತ್ತಿರುವ ಈ ಅಲೆಮಾರಿ ಸಮುದಾಯದ ಹೆಣ್ಣುಮಕ್ಕಳ ಅನುಮಾನಾಸ್ಪದ ಅತ್ಯಾಚಾರ ಮತ್ತು ಸಾವಿನ ಪ್ರಕರಣದ ಕುರಿತು ಸೂಕ್ತ ತನಿಖೆಯನ್ನು ಕೈಗೊಂಡು ಮೃತ ಯುವತಿಯರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಈ ದುಷ್ಕೃತ್ಯ ಎಸಗಿದ ದುಷ್ಟ ಶಕ್ತಿಗಳನ್ನು ಕೂಡಲೇ ಬಂಧಿಸಲು ಪೋಲಿಸ್ ಇಲಾಖೆಯು ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅಲೆಮಾರಿ ಸಮುದಾಯಕ್ಕೆ ಖಾಯಂ ವಸತಿ, ಉದ್ಯೋಗ, ಶಿಕ್ಷಣ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸುತ್ತೇವೆ. ಪ್ರಕರಣವನ್ನು ರಾಜಕೀಯ ಒತ್ತಡಕ್ಕೆ ಒಳಗಾಗಿ ಮುಚ್ಚಿಹಾಕದೇ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ವೇಳಿ ಅಶ್ವಿನಿ ಮಾವಿನಕರ್, ಸಲ್ಮಾನ್ ಖಾನ್, ದಿಲ್‌ಶಾದ್ ಎಸ್‌ಎಫ್‌ಐನ ಸುಜಾತ ಸೇರಿದಂತೆ ಅನೇಕರಿದ್ದರು.
ಇದನ್ನೂ ಓದಿ:ಅಮೆರಿಕ | ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ; ಒಂದೇ ರನ್ ವೇ ನಲ್ಲಿ ಎರಡೆರಡು ವಿಮಾನ