ಹಾಸನ: ಎ.ಟಿ.ರಾಮಸ್ವಾಮಿ ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಅರಕಲಗೂಡು ಹಾಗೂ ಜಿಲ್ಲಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಕಾಂಗ್ರೆಸ್ನಿಂದಲೇ ರಾಜಕಾರಣ ಆರಂಭಿಸಿದ ಎ.ಟಿ.ಆರ್, ಶಾಸಕರೂ ಆಗಿದ್ದರು. ಚುನಾವಣೆ
ನಂತರ ತಮ್ಮ ರಾಜಕೀಯ ಎದುರಾಳಿ ಎ.ಮಂಜು ಅವರು ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ನಂತರ ಎಟಿಆರ್ ಜೆಡಿಎಸ್ ಸೇರಿ ಎರಡು ಬಾರಿ ಶಾಸಕರೂ ಆಗಿದ್ದರು. 2023 ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತರಿಯಾಗುತ್ತಿದ್ದಂತೆಯೇ ನೇರವಾಗಿ ದೆಹಲಿಗೆ ತೆರಳಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.
ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದು ರಾಮಸ್ವಾಮಿ ಅವರನ್ನ ಕೆರಳಿಸಿದೆ. ಇದೇ ಕಾರಣಕ್ಕೆ ಈಗಲೂ ಜೆಡಿಎಸ್ ಜೊತೆ ಮೈತ್ರಿ ಬೇಡ, ಮತ್ತೊಮ್ಮೆ ಮರು ಪರಿಶೀಲಿಸಿ ಎಂದು ಒತ್ತಡ ಹಾಕುತ್ತಿರುವ ರಾಮಸ್ವಾಮಿ, ಇದಕ್ಕೆ ಮನ್ನಣೆ ಸಿಗದಿದ್ದರೆ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ ಇವರ ಒತ್ತಾಯಕ್ಕೆ ಕಮಲ ನಾಯಕರು ಮಣೆ ಹಾಕುವ ಸಾಧ್ಯತೆ ಕಡಿಮೆ ಇರುವುದರಿಂದ ಎಟಿಆರ್ ಬಿಜೆಪಿ ತೊರೆಯಲು ಮನಸ್ಸು ಮಾಡಿ, ಮತ್ತೊಮ್ಮೆ ಮಾತೃ ಪಕ್ಷಕ್ಕೆ ಮರಳಲು ಅಣಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲು ಮುಂದಾದ ಸಿ.ಎಂ. ಇಬ್ರಾಹಿಂ
ಈ ಸಂಬಂಧ ಈಗಾಗಲೇ ಕೈ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲೇ ರಾಮಸ್ವಾಮಿ ಕಾಂಗ್ರೆಸ್ ಸೇರಿ ಅರಕಲಗೂಡು ಕ್ಷೇತ್ರದಿಂದ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಆಂತರಿಕ ಸರ್ವೆಯಲ್ಲಿ ಎಟಿಆರ್ ಸೋಲುತ್ತಾರೆ ಎಂಬ ವರದಿ ಬಂದ ಹಿನ್ನೆಲೆ ಕೈ ನಾಯಕರೇ ಇವರನ್ನು ಬರಮಾಡಿಕೊಳ್ಳಲು ಆಸಕ್ತಿ ತೋರಲಿಲ್ಲ.
ಆದರೀಗ ಬರುವ ಎಂಪಿ ಚುನಾವಣೆಯಲ್ಲಿ ಎಟಿಆರ್ ಕಾಂಗ್ರೆಸ್ ನಿಂದ ಕಣಕ್ಕಿಳಿದರೆ ಕಾಂಗ್ರೆಸ್ ಮತಗಳ ಜೊತೆಗೆ ಜೆಡಿಎಸ್ ವಿರೋಧಿ ಮತಗಳು ಎಲ್ಲಾ ಪಕ್ಷಗಳಿಂದ ಎಟಿಆರ್ಗೆ ಬೀಳಲಿವೆ ಎಂಬ ಕಾರಣದಿಂದ ಕಾಂಗ್ರೆಸ್ ನಾಯಕರು ಎಟಿಆರ್ ಸೇರ್ಪಡೆಗೆ ಹಸಿರು ನಿಶಾನೆ ತೋರಲು ಉತ್ಸುಕರಾಗಿದ್ದಾರೆ.
ಹಾಗೊಂದು ವೇಳೆ ಎಟಿಆರ್ ಕಾಂಗ್ರೆಸ್ ನಿಂದ ಕಣಕ್ಕಿಳಿದರೆ ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವರ್ಸಸ್ ಎಟಿಆರ್ ಎಂದಾದರೆ ರಾಮಸ್ವಾಮಿ ಅವರಿಗೇ ಪ್ಲಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಕೆಣಕಿದ ಕಾಂಗ್ರೆಸ್‌ಗೆ ಗೆದ್ದಲು ಹಿಡಿದ ಪಕ್ಷ ಎಂದು ಜೆಡಿಎಸ್ ಟೀಕೆ
ಎ.ಮಂಜು ಹೊಸ ವರಸೆ:
ಎಟಿಆರ್ ಕಾಂಗ್ರೆಸ್ ನಿಂದ ಕಣಕ್ಕಿಳಿಯುತ್ತಾರೆ ಎಂಬ ಗುಸು ಗುಸು ಇರುವುದರಿಂದ ಅವರನ್ನು ತಡೆಯುವ ಕಾರಣದಿಂದಲೇ ದೇವೇಗೌಡರೇ ತವರು ಜಿಲ್ಲೆಯಿಂದ ಕಣಕ್ಕಿಳಿಯಲಿ ಎಂಬ ಬೇಡಿಕೆಯನ್ನು ಹಾಲಿ ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು, ಮುಂದಿಟ್ಟಿದ್ದಾರೆ. ದೇವೇಗೌಡರಿಗೆ ಬಹುತೇಕ ಇದು ಕೊನೆಯ ಚುನಾವಣೆ ಆಗಿರುವುದರಿಂದ ಎಲ್ಲಕ್ಕಿಂತ ಮುಖ್ಯವಾಗಿ ಹಾಸನದಿಂದ ರಾಜಕೀಯ ಆರಂಭಿಸಿ ಸಾಕಷ್ಡು ಸಾಧನೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ತುಮಕೂರಿಗೆ ಹೋಗಿ ಸೋತರು. ಹೀಗಾಗಿ ಕಡೆಯ ಚುನಾವಣೆಯನ್ನು ತವರು ಜಿಲ್ಲೆಯಿಂದಲೇ ಗೆದ್ದು, ತಮ್ಮ ಸುಧೀರ್ಘ ರಾಜಕೀಯ ಪಯಣಕ್ಕೆ ವಿರಾಮ ಇಡಲಿ ಎಂಬುದು ಮಂಜು ಸೇರಿದಂತೆ ಅನೇಕರ ಅಭಿಪ್ರಾಯ ಆಗಿದೆ. ಮಾಜಿ ಪ್ರಧಾನಿ ಸ್ಪರ್ಧೆ ಮಾಡಿದರೆ ಗೆಲುವುಕೂಡ ಸುಲಭ ಆಗಲಿದೆ ಎಂಬುದು ಬಹುತೇಕರ ಲೆಕ್ಕಾಚಾರ. ಇದೇ ಕಾರಣಕ್ಕೆ ಮಂಜು ಅವರು ಹೆಚ್ಡಿಡಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರ ಜೊತೆಯಲ್ಲೇ ರಾಮಸ್ವಾಮಿ ಅವರನ್ನು ಹಣಿಯುವ ಉದ್ದೇಶವೂ ಅಡಗಿದೆ ಎನ್ನಲಾಗಿದೆ. ದೇವೇಗೌಡರು ನನ್ನ ವಿರುದ್ಧ ಲೋಕಸಭೆ ಚುನಾವಣೆ ಅಖಾಡಕ್ಕಿಳಿದರೆ ನನಗೆ ಕಷ್ಟ ಆಗಲಿದೆ ಎಂದು ಗೊತ್ತಿದ್ದರೂ, ಒಂದು ಕೈ ನೋಡೋಣ ಎಂಬ ನಿರ್ಧಾರಕ್ಕೆ ಎಟಿಆರ್ ಬಂದಿದ್ದಾರೆ ಎನ್ನಲಾಗಿದೆ. ಎಲ್ಲದಕ್ಕೂ ಸ್ಪಷ್ಟ ಚಿತ್ರಣ ಸಿಗಲು ಇನ್ನಷ್ಟು ದಿನ ಕಾಯಬೇಕಿದೆ.
ದೇವೇಗೌಡರು ಮತ್ತೆ ಹಾಸನಕ್ಕೆ ಬರ್ತಾರೆ ಅಂದ್ರೆ ಸ್ವಾಗತ ಪ್ರಜ್ವಲ್ ರೇವಣ್ಣ:
ದೇವೇಗೌಡರು ಮತ್ತೆ ಹಾಸನಕ್ಕೆ ಬರ್ತಾರೆ ಅಂದ್ರೆ ನಾನು ಸ್ವಾಗತ ಮಾಡೋದಕ್ಕೆ ತಯಾರಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಅವರು ಬಿಟ್ಟುಕೊಟ್ಟು ಆಶೀರ್ವಾದ ಮಾಡಿದ ಸ್ಥಾನ ಇದು. ನಾನೇ ಅವರನ್ನು ಸಂತೋಷವಾಗಿ ಕರೆದುಕೊಂಡು ಬಂದು, ನನ್ನ ಚುನಾವಣೆಗಿಂತ ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತೇನೆ. ಹಂಗೇನಾದ್ರೂ ಅವರು ಬರುವುದಿದ್ದರೆ ನಾನು ಸ್ಥಾನ ಬಿಟ್ಟು ಕೊಡುತ್ತೇನೆ, ನಾನು ಯಾವತ್ತೂ ಇಲ್ಲ ಎಂದಿಲ್ಲ. ದೇವೇಗೌಡರು ಸೋತಾಗ ನಾನೇ ಮೊದಲು ಅವರ ಮನೆಗೆ ಹೋಗಿ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ದೇವೇಗೌಡರು ನನಗೆ ಬೈದು ರಾಜೀನಾಮೆ ಕೊಡಬೇಡ ಎಂದು ಹೇಳಿ ಕಳಿಸಿದ್ದರು. ಅಧಿಕಾರ ಯಾರಿಗೂ ಕೂಡ ಶಾಶ್ವತವಲ್ಲ, ಅಧಿಕಾರಕ್ಕಾಗಿ ಆಸೆ ಪಡಬಾರದು ಎಂದಿದ್ದರು ಎಂದು ಹೇಳಿದರು.
ಈ ವಿಡಿಯೋ ನೋಡಿ : ಸದನದಲ್ಲಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಏಕವಚನದಲ್ಲೇ ವಾಗ್ಯುದ್ಧ