ಕೈ ಜೋಡಿಸುವ ಹೊತ್ತಿನಲ್ಲಿ ಅಡ್ಡಗೋಡೆಗಳೇಕೆ ?

ಈಗ ಒಗ್ಗಟ್ಟಿನಿಂದಿದ್ದ ಸಾರಿಗೆ ಕಾರ್ಮಿಕರ ನಡುವೆ ಗೋಡೆ ಕಟ್ಟುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆಳುವ ವರ್ಗಗಳು ಮತ್ತು ಆಡಳಿತ ವ್ಯವಸ್ಥೆಯ ಏಜೆಂಟರು ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಬಂದಿದ್ದಾರೆ. ಪ್ರಯತ್ನಗಳಿಗೆ ಕಾರ್ಮಿಕರ ಒಂದು ವರ್ಗವೇ ಹೆಗಲುನೀಡಿ, ಕಾರ್ಮಿಕರ ಒಗ್ಗಟ್ಟಿಗೆ ಮಾರಕವಾಗಿರುವುದು ಚಾರಿತ್ರಿಕ ವಾಸ್ತವ .

 ರೈತ ಹೋರಾಟದ ಮುಂಚೂಣಿಯಲ್ಲಿರುವ ಕೋಡಿಹಳ್ಳಿ ಅವರಿಗೆ ಇವೆಲ್ಲದರ ಗ್ರಹಿಕೆ ಇದ್ದಿದ್ದಲ್ಲಿ ನಾಯಕತ್ವ ವಹಿಸುವ ಮುನ್ನ ಈಗಾಗಲೇ ಮುಂಚೂಣಿಯಲ್ಲಿರುವ ಕಾರ್ಮಿಕ ಸಂಘಟನೆಗಳ ನಾಯಕರೊಡನೆ ಸಮಾಲೋಚನೆ ನಡೆಸಿ ಹೆಜ್ಜೆ ಇಡಬೇಕಿತ್ತು.  ಕಾರ್ಮಿಕ ಸಂಘಟನೆಯನ್ನು ನಡೆಸುವುದರಲ್ಲಿರುವ ಸೂಕ್ಷ್ಮಗಳು, ಕಾನೂನಾತ್ಮಕ ಅಂಶಗಳು, ನೌಕರರ ಭವಿಷ್ಯದ ಆಲೋಚನೆ, ಸಂಸ್ಥೆಯ ಸ್ವರೂಪ, ಆಡಳಿತ ವರ್ಗದ ಧೋರಣೆ ಹೀಗೆ ಹಲವು ಅಂಶಗಳನ್ನು ಪರಾಮರ್ಶಿಸದೆ ಕಾರ್ಮಿಕರನ್ನು ಹುರಿದುಂಬಿಸುವುದು, ಉನ್ಮಾದ ಸೃಷ್ಟಿಸುವುದು ದಿಕ್ಕು ತಪ್ಪಿಸುವ ಕೆಲಸವಾಗುತ್ತದೆ

– ನಾ ದಿವಾಕರ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಅರ್ಥ ವ್ಯವಸ್ಥೆಯನ್ನು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗೆ ಅನುಗುಣವಾಗಿ ರೂಪಿಸುತ್ತಿರುವುದು ಸ್ಪಷ್ಟ. ಈಗಾಗಲೇ ಹಣಕಾಸು, ವಿಮಾನಯಾನ, ದೂರಸಂಪರ್ಕ, ಜಲ ಸಾರಿಗೆ, ವಿಮಾ ಕ್ಷೇತ್ರಗಳನ್ನು ಖಾಸಗಿಯವರಿಗೆ ಒಪ್ಪಿಸುವ ಸಿದ್ಧತೆಗಳು ಪೂರ್ಣಗೊಂಡಿವೆ. ಗಣಿ ಉದ್ಯಮ ಕಾರ್ಪೋರೇಟ್ ವಶವಾಗಿದೆ. ವಿದ್ಯುತ್ ಉತ್ಪಾದನೆ, ಪ್ರಸರಣ , ವಿತರಣೆ, ಸರಬರಾಜು ಖಾಸಗೀಕರಣಕ್ಕೆ ವಿಧೇಯಕ ಸಿದ್ಧವಾಗಿದೆ. ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಕಳಚಿಕೊಳ್ಳುತ್ತಿವೆ. ರೈಲು ಮಾರ್ಗಗಳನ್ನೂ ಖಾಸಗೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಏಳು ಕೋಚ್ ಫ್ಯಾಕ್ಟರಿಗಳನ್ನು ಮಾರಾಟ ಮಾಡಲು ಸರ್ಕಾರ ಸಜ್ಜಾಗಿದೆ. ಇಡೀ ರೈಲ್ವೆ ಇಲಾಖೆಯನ್ನು ಖಾಸಗಿಯವರಿಗೆ ಒಪ್ಪಿಸಿ ಮೂರೂವರೆ ಲಕ್ಷ ರೈಲ್ವೆ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಲು ನೀಲ ನಕ್ಷೆ ಸಿದ್ಧವಾಗಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ವಶಕ್ಕೆ ಒಪ್ಪಿಸುವ ಮಸೂದೆಗಳು ಈಗಾಗಲೆ ಜಾರಿಯಾಗಿವೆ. ದೆಹಲಿಯ ರೈತ ಮುಷ್ಕರ ತಾರ್ಕಿಕ ಅಂತ್ಯ ತಲುಪಿದರೂ ಮೋದಿ ಸರ್ಕಾರದ ಮೂಲ ಉದ್ದೇಶ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ದೇಶದ ಸಾರ್ವಜನಿಕ ಪ್ರಜ್ಞೆ ಸಮೂಹ ಸನ್ನಿಗೊಳಗಾಗಿದೆ. ಕರ್ನಾಟಕ ಸರ್ಕಾರ ಭೂ ಸ್ವಾಧೀನ ಕಾಯ್ದೆ ಜಾರಿಗೊಳಿಸುವ ಮೂಲಕ ಕೃಷಿ ಭೂಮಿಯನ್ನು ಕಾರ್ಪೋರೆಟ್ ವಶಕ್ಕೆ ಒಪ್ಪಿಸಲು ಸಜ್ಹಾಗಿದೆ.

ಈಗ ರಸ್ತೆ ಸಾರಿಗೆಯನ್ನು ಖಾಸಗೀಕರಣಗೊಳಿಸುವುದು ಬಿಜೆಪಿ ಸರ್ಕಾರದ ಮುಂದಿನ ಗುರಿ. ಇದಕ್ಕೆ ಅಡ್ಡಿಯಾಗಿರುವುದು ಸಾರಿಗೆ ಸಿಬ್ಬಂದಿಯ ಸಂಘಟನಾಶಕ್ತಿ. ಮೂರು ದಶಕಗಳಿಂದ ಈ ಖಾಸಗೀಕರಣದ ಹುನ್ನಾರವನ್ನು ರಾಜ್ಯ ಸಾರಿಗೆ ಸಿಬ್ಬಂದಿ ವಿಫಲಗೊಳಿಸುತ್ತಾ ಬಂದಿದ್ದರೆ ಅದರ ಹಿಂದೆ ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಪರಿಶ್ರಮ ಇರುವುದನ್ನು ಯಾರಿಂದಲೂ ಅಲ್ಲಗಳೆಯಲಾಗದು. ಸಾರಿಗೆ ಸಿಬ್ಬಂದಿಯ ಈ ಐಕ್ಯತೆ ಮತ್ತು ಐಕಮತ್ಯವನ್ನು ಒಡೆಯದೆ ಹೋದರೆ ಖಾಸಗೀಕರಣದ ಪ್ರಯತ್ನಗಳು ಫಲಗೂಡುವುದಿಲ್ಲ. ಸಾರಿಗೆ ನಿಗಮಗಳ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದರೆ ಅವರು ಏನೆಲ್ಲಾ ಕಳೆದುಕೊಳ್ಳುತ್ತಾರೆ ಎಂಬ ಅರಿವೂ ಕಾರ್ಮಿಕರಿಗೆ ಇರಬೇಕು. ಕಾನೂನು ರೀತ್ಯಾ ಈ ಬೇಡಿಕೆ ಈಡೇರುವುದಕ್ಕೆ ಇರುವ ಅಡ್ಡಿ ಆತಂಕಗಳೇನು ಎನ್ನುವ ವಾಸ್ತವವನ್ನೂ ಗ್ರಹಿಸಬೇಕಿದೆ ಆಂಧ್ರದಲ್ಲಿ ಯಾವ ರೀತಿಯಲ್ಲಿ ಸಾರಿಗೆ ನೌಕರರು ಲಾಭ ಗಳಿಸಿದ್ದಾರೆ ಎಂದು ಪರಿಶೀಲಿಸಬೇಕು. ಸುದೀರ್ಘ ಪರಂಪರೆ ಇರುವ ಕಾರ್ಮಿಕ ಸಂಘಟನೆಯಿಂದ ಇವೆಲ್ಲ ಸಾಧ್ಯ. ಏಕಾಏಕಿ ರಾತ್ರೋರಾತ್ರಿ ಬಾವುಟ ಹಿಡಿದವರಿಂದ ಸಾಧ್ಯವಿಲ್ಲ. ಈ ಅಂಶಗಳನ್ನು ಪರಾಮರ್ಶಿಸದೆ ಸಾರಿಗೆ ಸಿಬ್ಬಂದಿಯ ಐಕಮತ್ಯವನ್ನು ಭಂಗಗೊಳಿಸುವ ಯತ್ನಗಳು ನಡೆಯುತ್ತಿವೆ. ಇಲ್ಕಿ ಕೋಡಿಹಳ್ಳಿ ಚಂದ್ರಶೇಖರ್ ಒಂದು ರಾಜಕೀಯ ದಾಳದಂತೆ ಕಾಣುತ್ತಾರೆ.

ಈಗ ಒಗ್ಗಟ್ಟಿನಿಂದಿದ್ದ ಸಾರಿಗೆ ಕಾರ್ಮಿಕರ ನಡುವೆ ಗೋಡೆ ಕಟ್ಟುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆಳುವ ವರ್ಗಗಳು ಮತ್ತು ಆಡಳಿತ ವ್ಯವಸ್ಥೆಯ ಏಜೆಂಟರು ಈ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಬಂದಿದ್ದಾರೆ. ಈ ಪ್ರಯತ್ನಗಳಿಗೆ ಕಾರ್ಮಿಕರ ಒಂದು ವರ್ಗವೇ ಹೆಗಲುನೀಡಿ, ಕಾರ್ಮಿಕರ ಒಗ್ಗಟ್ಟಿಗೆ ಮಾರಕವಾಗಿರುವುದು ಚಾರಿತ್ರಿಕ ವಾಸ್ತವ . ಇದರ ನೇರ ಪರಿಣಾಮವನ್ನು, ದುಷ್ಪರಿಣಾಮಗಳನ್ನು ಈಗ ಖಾಸಗೀಕರಣಕ್ಕೊಳಗಾಗುತ್ತಿರುವ ಸಾರ್ವಜನಿಕ ಉದ್ದಿಮೆಗಳಲ್ಲಿ, ಬ್ಯಾಂಕ್ ಮತ್ತು ವಿಮಾ ಕ್ಷೇತ್ರದಲ್ಲಿ, ಗಮನಿಸುತ್ತಲೇ ಬಂದಿದ್ದೇವೆ. ಕಾರ್ಮಿಕ ಸಂಘಟನೆಗಳ ವಿಘಟನೆಯಿಂದ ಈ ದೇಶದ ಶ್ರಮಜೀವಿ ವರ್ಗ ಎಂತಹ ದುಸ್ಥಿತಿ ತಲುಪಿದೆ ಎನ್ನುವುದನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ತೋರಿಸಿಕೊಟ್ಟಿದೆ. ಬಾವುಟ, ಬ್ಯಾನರ್, ಪೋಸ್ಟರ್, ವಿಸಿಟಿಂಗ್ ಕಾರ್ಡ್ , ಸ್ವ ಹಿತಾಸಕ್ತಿ, ಸ್ವ ಪ್ರತಿಷ್ಠೆ ಇವೆಲ್ಲವೂ ಕಾರ್ಮಿಕರ ಐಕ್ಯತೆಗೆ ಮಾರಕವಾಗಿ ಪರಿಣಮಿಸಿರುವ ಸುದೀರ್ಘ ಇತಿಹಾಸ ನಮ್ಮ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷ ರಾಜಕಾರಣ, ಜಾತಿ ಅಸ್ಮಿತೆ, ಭಾಷಾ ಅಸ್ಮಿತೆ ಮತ್ತು ಮತೀಯವಾದ ಸೇರ್ಪಡೆಯಾಗಿದೆ.

ರೈತ ಹೋರಾಟದ ಮುಂಚೂಣಿಯಲ್ಲಿರುವ ಕೋಡಿಹಳ್ಳಿ ಅವರಿಗೆ ಇವೆಲ್ಲದರ ಗ್ರಹಿಕೆ ಇದ್ದಿದ್ದಲ್ಲಿ ನಾಯಕತ್ವ ವಹಿಸುವ ಮುನ್ನ ಈಗಾಗಲೇ ಮುಂಚೂಣಿಯಲ್ಲಿರುವ ಕಾರ್ಮಿಕ ಸಂಘಟನೆಗಳ ನಾಯಕರೊಡನೆ ಸಮಾಲೋಚನೆ ನಡೆಸಿ ಹೆಜ್ಜೆ ಇಡಬೇಕಿತ್ತು.  ಕಾರ್ಮಿಕ ಸಂಘಟನೆಯನ್ನು ನಡೆಸುವುದರಲ್ಲಿರುವ ಸೂಕ್ಷ್ಮಗಳು, ಕಾನೂನಾತ್ಮಕ ಅಂಶಗಳು, ನೌಕರರ ಭವಿಷ್ಯದ ಆಲೋಚನೆ, ಸಂಸ್ಥೆಯ ಸ್ವರೂಪ, ಆಡಳಿತ ವರ್ಗದ ಧೋರಣೆ ಹೀಗೆ ಹಲವು ಅಂಶಗಳನ್ನು ಪರಾಮರ್ಶಿಸದೆ ಕಾರ್ಮಿಕರನ್ನು ಹುರಿದುಂಬಿಸುವುದು, ಉನ್ಮಾದ ಸೃಷ್ಟಿಸುವುದು ದಿಕ್ಕು ತಪ್ಪಿಸುವ ಕೆಲಸವಾಗುತ್ತದೆ. ಒಂದುವೇಳೆ ಮುಷ್ಕರ ನಿರತ ಕಾರ್ಮಿಕರ ವಿರುದ್ಧ ಎಸ್ಮಾ ಜಾರಿಗೊಳಿಸಿದ್ದಲ್ಲಿ, ಹತ್ತಾರು ಕಾರ್ಮಿಕರಿಗೆ‌ ಮೆಮೋ ಕೊಟ್ಟು, ಚಾರ್ಜ್ ಶೀಟ್ ನೀಡಿದ್ದಲ್ಲಿ ಅದನ್ನು ನಿಭಾಯಿಸಲು ಕೋಡಿಹಳ್ಳಿಯವರಿಂದ ಸಾಧ್ಯವಾಗುತ್ತಿತ್ತೇ.? ಅವರ ಹೋರಾಟದ ಧ್ಯೇಯ ನ್ಯಾಯ ಸಾಧಿಸುವುದೇ ಆಗಿದ್ದರೆ ಈಗಾಗಲೇ ಸಂಸ್ಥೆಯಲ್ಲಿ ಸಕ್ರಿಯವಾಗಿರುವ ಸಂಘಟನೆಗಳೊಡನೆ ಪೂರ್ವಭಾವಿ ಸಮಾಲೋಚನೆ ನಡೆಸಿ ಕಾರ್ಯತಂತ್ರ ರೂಪಿಸಬೇಕಿತ್ತು. ಎಐಟಿಯುಸಿ, ಸಿಐಟಿಯು, ಬಿಎಂಎಸ್ ಸಂಘಟನೆಗಳು, ಕೆ ಎಸ್ ಶರ್ಮ , ಅನಂತಸುಬ್ಬರಾವ್ ಅವರಂತಹ ಅನುಭವಿ ನಾಯಕರು ಅಲ್ಲಿದ್ದಾರೆ. ಇವರ ಸಹಯೋಗದೊಂದಿಗೆ‌ ಇದೇ ಬೇಡಿಕಗಳೊಡನೆ ಮುಂದುವರೆದಿದ್ದಲ್ಲಿ ಇಂದಿನ ಅರಾಜಕತೆ ತಪ್ಪಿಸಬಹುದಿತ್ತು.

ಸರ್ಕಾರ ಹತ್ತರಲ್ಲಿ ಒಂಬತ್ತು ಬೇಡಿಕೆಗಳಿಗೆ ಒಪ್ಪಿದೆ ಎಂದು ಬೆನ್ನು ತಟ್ಟಿಕೊಳ್ಳುವ ಮುನ್ನ, ಕಾರ್ಮಿಕರಲ್ಲಿ ಒಡಕು ಮೂಡಿಸಿ ನಾಳಿನ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿರುವುದನ್ನೂ ಗಮನಿಸಬೇಕಲ್ಲವೇ. ಬಹುಸಂಖ್ಯೆಯ ಕಾರ್ಮಿಕರನ್ನು ಪ್ರತಿನಿಧಿಸುವ ಸಂಘಟನೆಯಲ್ಲಿ ವಿಘಟನೆ ಉಂಟುಮಾಡಿದರೆ ಸಂಸ್ಥೆಯ ಆಡಳಿತ ವರ್ಗ ಮುಂದಿನ ಹೋರಾಟಗಳನ್ನು ಹೇಗೆ ಹೊಸಕಿ ಹಾಕುತ್ತದೆ ಎಂದು ಗ್ರಹಿಸಲು ಸಂಶೋಧನೆಯೇನೂ ಬೇಕಿಲ್ಲ. ಕಾರ್ಮಿಕ ಚಳುವಳಿಯ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಎಡಪಂಥೀಯ ಕಾರ್ಮಿಕ ಸಂಘಟನೆಗಳೂ ಎಡವಿರುವುದರ ಬಗ್ಗೆ ಅನಂತ ಸುಬ್ಬರಾವ್ ಇತ್ತೀಚೆಗಷ್ಟೇ ನನ್ನೊಡನೆ ಮಾತನಾಡಿದ್ದರು. ಈ ಆತ್ಮಾವಲೋಕನ ಮತ್ತು ಆಂತರ್ಯದ ಪರಿಶೋಧವೇ ಅವರನ್ನು ಮಾದರಿ ನಾಯಕನನ್ನಾಗಿಸುತ್ತದೆ. ಇಲ್ಲಿ ವ್ಯಕ್ತಿಯ ಪ್ರಶ್ನೆಯನ್ನು ಬದಿಗಿರಿಸೋಣ. ಸುಬ್ಬರಾವ್ ಅವರ ಚಾರಿತ್ರ್ಯವಧೆಯ ಪ್ರಯತ್ನಗಳನ್ನು ಕಂಡು ಇದನ್ನು ಹೇಳಬೇಕೆನಿಸಿತಷ್ಟೆ.

ಇದು ಕೋಡಿಹಳ್ಳಿ-ಅನಂತ ಸುಬ್ಬರಾವ್ ನಡುವಿನ ಕದನ ಅಲ್ಲ. ಯಾವುದೇ ಕ್ಷಣದಲ್ಲಾದರೂ ಖಾಸಗಿಯವರ ಮಡಿಲಿಗೆ ಹಾಕಬಹುದಾದ ಒಂದು ಸಂಸ್ಥೆ ಮತ್ತು ಅದರ ಸಿಬ್ಬಂದಿಗಳ ಪ್ರಶ್ನೆ. ರೈಲ್ವೆಯಂತಹ ಬೃಹತ್ ಸಂಸ್ಥೆಯೇ ಈ ಅಪಾಯದ ತೂಗುಗತ್ತಿ ಎದುರಿಸುತ್ತಿದೆ. ಇನ್ನು ರಾಜ್ಯ ಸಾರಿಗೆ ಸಂಸ್ಥೆ ಯಾವ ಲೆಕ್ಕ.  ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಕಾರ್ಮಿಕ ಸಂಘಟನೆಯು, ಸಂಸ್ಥೆಯ ಸ್ವರೂಪ, ಅಸ್ತಿತ್ವವನ್ನು ಉಳಿಸಿಕೊಂಡೇ ಸಿಬ್ಬಂದಿಯ ಯೋಗಕ್ಷೇಮದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಕಾರ್ಮಿಕ ಸಂಘಟನೆಗಳನ್ನು ಮುನ್ನಡೆಸುವಾಗ ಇರಬೇಕಾದ ಎಚ್ಚರಿಕೆಗಳಲ್ಲಿ ಇದೂ ಒಂದು. ಹಾಗೆಂದ ಮಾತ್ರಕ್ಕೆ ಆಡಳಿತ ವರ್ಗಕ್ಕೆ ಶರಣಾಗಬೇಕೆಂದಿಲ್ಲ. ಒಂದು ಮುಷ್ಕರ ಹೂಡುವ ಮುನ್ನ, ಸಾರ್ವತ್ರಿಕ ಮುಷ್ಕರದಲ್ಲಿ ಭಾಗಿಯಾಗುವ ಮುನ್ನ ಹಲವು ಆಯಾಮಗಳಲ್ಲಿ ಯೋಚಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳನ್ನು ನಡೆಸುವಂತೆ ಕಾರ್ಮಿಕ ಸಂಘಟನೆಗಳನ್ನು ಆದೇಶ ಪಾಲನೆಯ ಚೌಕಟ್ಟಿನಲ್ಲಿ ನಡೆಸಲಾಗುವುದಿಲ್ಲ. ಸಂಭಾವ್ಯ ಆಗುಹೋಗುಗಳನ್ನು ತುಲನಾತ್ಮಕವಾಗಿ ಅವಲೋಕನ ಮಾಡದೆ ಅಖಾಡಕ್ಕೆ ಧುಮುಕಿದರೆ ಸುಂಡಿಲಿಯನ್ನು ಗಂಡುಗಲಿಯನ್ನಾಗಿ ಮಾಡಿದಂತಾಗುತ್ತದೆ. ಇದು ಕಾರ್ಮಿಕ ಚಳುವಳಿಯ ಇತಿಮಿತಿಯೂ ಹೌದು, ಈ ಅರಿವು ಪ್ರಜ್ಞೆ ಕಾರ್ಮಿಕ ನಾಯಕರಲ್ಲೂ ಇರಬೇಕು, ಇರುತ್ತದೆ.

ಇಷ್ಟಕ್ಕೂ ಇಂದು ಮುಷ್ಕರ ನಿರತರಾಗಿರುವ ಕಾರ್ಮಿಕರು ಈವರೆಗೂ ಸವಿದಿರುವ, ಸವಿಯುತ್ತಿರುವ ಸವಲತ್ತು, ಸೌಲಭ್ಯ, ಸೌಕರ್ಯ ಮತ್ತು ಪ್ರಯೋಜನಗಳು ಇದೇ ಸುಬ್ಬರಾವ್ ನೇತೃತ್ವದ ಎಐಟಿಯುಸಿ ಸಂಘಟನೆಯ ಕೆಂಬಾವುಟದಡಿ ಗಳಿಸಿರುವುದಲ್ಲವೇ ? ಕೊರತೆಗಳಿದ್ದರೆ, ಪ್ರಮಾದಗಳಾಗಿದ್ದರೆ ಸರಿಪಡಿಸಲು ಸಂಘಟನಾತ್ಮಕವಾದ ಪ್ರಜಾಸತ್ತಾತ್ಮಕ ಮಾರ್ಗಗಳಿವೆ. ನಾಯಕರನ್ನು ಕೆಳಗಿಳಿಸುವ ಶಕ್ತಿ, ಅಧಿಕಾರವೂ ಕಾರ್ಮಿಕರಿಗೆ, ತಾತ್ವಿಕವಾಗಿ, ಇದ್ದೇ ಇದೆ. ತಮ್ಮ ಎಲ್ಲ ಬೇಡಿಕೆಗಳೂ ಈಡೇರುವುದರಲ್ಲಿ ಅಡ್ಡಿ ಆತಂಕಗಳಿದ್ದರೆ , ತೊಡಕುಗಳಿದ್ದರೆ, ಅದಕ್ಕೆ ತಮ್ಮ ವರ್ಗ ಪ್ರಜ್ಞೆಯನ್ನು ಒತ್ತೆಯಿಟ್ಟು ಸಂಘಟನೆಯನ್ನು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ನೋಡುವ ಕಾರ್ಮಿಕರೂ ಕಾರಣ ಅಲ್ಲವೇ ? ಫ್ರೀಡಂ ಪಾರ್ಕ್ ನಲ್ಲಿರುವ ಕಾರ್ಮಿಕರಲ್ಲಿ ಎಷ್ಟು ಜನ ಮೋದಿ ಸರ್ಕಾರದ ವಿರುದ್ಧ ಮತ ನೀಡುತ್ತಾರೆ ಎದೆ ಮುಟ್ಟಿ ಹೇಳಲು ಸಾಧ್ಯವೇ ? ಇದಕ್ಕೆ ನಾಯಕತ್ವ ಅಥವಾ ಸಂಘಟನೆಯ ವೈಫಲ್ಯವೂ ಕಾರಣ ಎನ್ನುವುದನ್ನೂ ಪರಾಮರ್ಶಿಸುವ ಕಾಲಘಟ್ಟ ಇದು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಾರ್ಮಿಕ ವರ್ಗದ ಐಕ್ಯತೆ ಮತ್ತು ಐಕಮತ್ಯ ಮುಖ್ಯ ಅಲ್ಲವೇ ?

ದೇಶಾದ್ಯಂತ ನಡೆಯುತ್ತಿರುವ ರೈತ ಚಳುವಳಿಯ ಒಂದು ಭಾಗವಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಈ ಸೂಕ್ಷ್ಮ ತಿಳಿದಿರಬೇಕಿತ್ತು. ಎಲ್ಲ ಕಾರ್ಮಿಕ ನಾಯಕರಿಗೂ ಈ ಸೂಕ್ಷ್ಮ ಸಂವೇದನೆಯ ಅನಿವಾರ್ಯತೆ ಅರಿವಾಗಬೇಕಿತ್ತು. ಈ ನಿಟ್ಟಿನಲ್ಲಿ ಎಐಟಿಯುಸಿ ಅಥವಾ ಅನಂತಸುಬ್ಬರಾವ್ ತಪ್ಪು ಹೆಜ್ಜೆ ಇಟ್ಟಿದ್ದರೆ, ಎಡವಿದ್ದರೆ, ಚರ್ಚೆಯಾಗಲಿ. ವ್ಯಕ್ತಿ ನಿಂದನೆ , ಚಾರಿತ್ರ್ಯವಧೆ ಬೇಕಿಲ್ಲ ಅಲ್ಲವೇ ? ಹೋರಾಟದ ಕಣದಲ್ಲಿ ಯಾರೂ ಪ್ರಶ್ನಾತೀತರಲ್ಲ. ಅಪ್ರತಿಮರೂ ಅಲ್ಲ. ಇದು ಜನಾಂದೋಲನದ ಮೊದಲನೆಯ ಪಾಠ ಅಲ್ಲವೇ ?

ಈಗ ಇವೆಲ್ಲದಕ್ಕೂ ತಿಲಾಂಜಲಿ ನೀಡಿ ಕಾರ್ಮಿಕರ ನಡುವೆ ಚೀನಾದ ಮಹಾಗೋಡೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾಗಿದೆ. ಒಗ್ಗಟ್ಟಿನಿಂದ ಎಂತೆಂತಹುದೋ ಸವಾಲುಗಳನ್ನು ಮೆಟ್ಟಿ ನಿಂತು, ಸಂಸ್ಥೆಯ ಆಡಳಿತ ವರ್ಗದ ದಬ್ಬಾಳಿಕೆ ಮತ್ತು ದಮನಕಾರಿ ನೀತಿಗಳನ್ನು ಎದುರಿಸಿ ಹೋರಾಡುತ್ತಿದ್ದ ಒಂದು ಬಲಿಷ್ಠ ಕಾರ್ಮಿಕ ಸಮೂಹ ಇಂದು ವಿಭಜನೆ, ವಿಘಟನೆ ಮತ್ತು ವಿನಾಶದ ಮಾರ್ಗಗಳನ್ನು ತಾನೇ ತೆರೆದುಬಿಟ್ಟಿದೆ. ಆಳುವ ವರ್ಗಗಳಲ್ಲಿ ” ಮೊಗ್ಯಾಂಬೋ ಖುಷ್ ” ಆಗದೆ ಇರಲಾದೀತೇ ?

ಮುಂದಿನ ದಿನಗಳಲ್ಲಿ ನೋಡಬಹುದು. ಹೇಗೆ ಸಂಘಿಗಳು ಖಾಸಗೀಕರಣಕ್ಕೆ ತೋರಣಗಳನ್ನು ಕಟ್ಟಲು ಸಜ್ಜಾಗುತ್ತಾರೆ ಎಂದು. ಭಾರತದ ಎಡಪಂಥೀಯ ಕಾರ್ಮಿಕ ಚಳುವಳಿ ಇಂತಹ ಪಲ್ಲಟಗಳ ನಡುವೆಯೇ ನಡೆದು ಬಂದಿದೆ. ಕೆಲವೆಡೆ ಪಾಠ ಕಲಿತಿದೆ. ಕೆಲವೆಡೆ ಕಲಿಯದೆ ಎಡವಿದೆ. ಇಂದು ಯೋಚಿಸಲೂ ಸಮಯ ಇಲ್ಲದ ಸಂದರ್ಭದಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ಇಂದಿಗೂ ಹಿರಿಯ ಜೀವಗಳ ಮನದಾಳದ ನೋವು ಹೊರಬೀಳುತ್ತಲೇ ಇದೆ. ಈ ವಿಷಮ ಸನ್ನಿವೇಶದಲ್ಲೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಕಾರ್ಪೋರೇಟ್ ಪಾಲಾಗದಂತೆ ಸಂರಕ್ಷಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಈ ಪ್ರಜ್ಞೆ ಇದ್ದರೆ ಮಾತ್ರ ಕೆಂಬಾವುಟ ಹಿಡಿಯುವುದೂ ಸಾರ್ಥಕವಾದೀತು.

 

 

 

 

Donate Janashakthi Media

Leave a Reply

Your email address will not be published. Required fields are marked *