” ಕಹಳೆ” ವಾದನದಿಂದ ಕಂಗೊಳಿಸಿದ ಬದುಕು

ಪುರಾಣಗಳಲ್ಲಿ ಯುದ್ಧದ ಸಂದರ್ಭದಲ್ಲಿ ಶಂಖಗಳನ್ನು ಬಳಸಿದಂತೆ ರಾಜರ ಕಾಲದಲ್ಲಿ ಕಹಳೆಗಳನ್ನು ಬಳಸಲಾಗುತ್ತಿತ್ತು. ಕುಮಾರವ್ಯಾಸ ಭಾರತದ ಕರ್ಣಪರ್ವದಲ್ಲಿರುವ ‘ಕನಲಿದವು ನಿಸ್ಸಾಳ ರಿಪುನೃಪ ಜನವ ಬಯ್ದವು ಕಹಳೆ ಬಹುವಿಧ’ ಎಂಬ ಸಾಲು ಕಹಳೆಯ ಪ್ರಾಚೀನ ಜನಪ್ರಿಯತೆಯನ್ನು ಹೇಳುತ್ತದೆ. ಕಹಳೆ ನಾದಗಳು ಸಮಯ ಸೂಚಿಸಲು ಜಾವಗಹಳೆ, ಬೇಟೆಯಲ್ಲಿ ಹುಲಿಗಹಳೆ, ಸಮರದಲ್ಲಿ ರಣಕಹಳೆ ಹೀಗೆ ಹದಿನಾಲ್ಕು ಬಗೆಯಲ್ಲಿದ್ದವಂತೆ. “ಕಹಳೆಗೆ ಇವರ ಉಸಿರು, ಕಹಳೆ ಇವರಿಗೆ ಉಸಿರು” ಹೀಗೆ ಕಹಳೆ ವಾದನವನ್ನು ಬದುಕನ್ನಾಗಿಸಿಕೊಂಡ ಜನಪದ ಕಲಾವಿದ ಛಲವಾದಿ ಕಹಳೆ ಹನುಮಂತಪ್ಪನವರ ಕಹಾನಿ ಇದು.

ಇವರು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ರಾಮಸಾಗರ ಗ್ರಾಮದವರು. ಇವರ ತಾತ ಕಹಳೆ ಹೊನ್ನಳ್ಳಪ್ಪ, ಅಪ್ಪ ಕಹಳೆ ಹುಲುಗಪ್ಪ, ಇವರು ಕಹಳೆ ಹನುಮಂತಪ್ಪ. ಇದೊಂದು ವಿಶಿಷ್ಟವಾದ ಅಪರೂಪದ ಕಲೆ. ಇವರು ರಾಜ ಮಹಾರಾಜರ ಕಾಲದಿಂದಲೂ ವಂಶ ಪಾರಂಪರ್ಯವಾಗಿ ಕಹಳೆ ವಾದ್ಯವನ್ನು ನುಡಿಸುತ್ತ ಬಂದಿದ್ದಾರೆ. ಜಾತ್ರೆ, ಉತ್ಸವಗಳಲ್ಲಿ ಎಲ್ಲ ವಾದ್ಯಗಳಿಗೂ ಮೊದಲು ಶುಭ ಸಂಕೇತವಾಗಿ ಕಹಳೆ ಮೊಳಗಬೇಕು ಎನ್ನುವುದು ರೂಢಿ. ಗಣ್ಯವ್ಯಕ್ತಿಗಳನ್ನು  ಕಾರ್ಯಕ್ರಮದ ವೇದಿಕೆಗೆ ಕರೆತರುವಾಗ ಗೌರವದ ಸಂಕೇತವಾಗಿ ಕಹಳೆ ವಾದನವನ್ನು ನುಡಿಸುತ್ತಾರೆ. ಹಿಂದಿನ ಕಾಲದಲ್ಲಿ ಕೋಟೆಯ ಎತ್ತರದ ಮೇಲೆ ನಿಂತು ಕಾವಲುಗಾರ ದೂರದಲ್ಲಿ ಶತ್ರುಗಳ ಆಗಮನವನ್ನು ಗಮನಿಸಿ ಕಹಳೆ ಊದಿ ಕೋಟೆಯೊಳಗಿನ ಸೈನಿಕರಿಗೆ ಎಚ್ಚರಿಕೆ ಕೊಡುತ್ತಿದ್ದ. ಆ ಕಹಳೆ ಗರ್ಜನೆ ಯುದ್ಧ ಮಾಡಲು ಸೈನಿಕರಲ್ಲಿ ಸ್ಫೂರ್ತಿ ತುಂಬುತ್ತಿತ್ತು. ಇಂತಹ ಸಮಯದಲ್ಲಿ ಕಹಳೆಯ ಶಬ್ದ ಜೋರಾಗಿ ಬಹುದೂರದವರೆಗೆ ಕೇಳಿಸುತ್ತದೆ ಎನ್ನುವ ಕಾರಣಕ್ಕೆ ಇದನ್ನು ಬಳಸುತ್ತಿದ್ದರು.

ಜಾನಪದ ಸಾಹಿತ್ಯದಲ್ಲಿ

’ಕೊಂಬುಗಳು ಕರೆದಾವ ಕಾಳಿಗಳು ಊದ್ಯಾವ |

ದಿಮ್ಮಿ ಕರಡೆಲ್ಲ ಕನಕಣಿಸಿ–ನಿಬ್ಬಣದ|

ಅಬ್ಬರ ಸಂಭ್ರಮ ಕೇಳ್ಯಾವ|’

ಎಂದು ಹೇಳಲಾಗಿದೆ. ಇಲ್ಲಿ ಕೊಂಬುಗಳು ಮದುವೆಯ ದಿಬ್ಬಣದ ಸಂಭ್ರಮ ಸೂಚಕವಾಗಿ ಬಳಕೆಯಾಗಿವೆ. ಹಿಂದಿನ ಕಾಲದಲ್ಲಿ ದನಗಳ ಕೊಂಬುಗಳನ್ನು ಊದಲು ಉಪಯೋಗಿಸುತ್ತಿದ್ದರು. ಆ ಕೊಂಬುಗಳು ಕ್ರಮೇಣ ಈ ಕಹಳೆಗಳತ್ತ ತಿರುಗಿದವು.

ಕಹಳೆಯನ್ನು ಮೂರು ಹಿತ್ತಾಳೆ ತುಂಡುಗಳಿಂದ ಬೆಸುಗೆ ಹಾಕಿ ಮಾಡಿರುತ್ತಾರೆ. ಬೆಸುಗೆಗಳ ಮಧ್ಯದಲ್ಲಿ ಒಂದು ರೀತಿಯ ಬಳೆಗಳನ್ನು ಹಾಕಿರುತ್ತಾರೆ. ಊದುವ ಹತ್ತಿರ ಕಿರಿದಾಗಿದ್ದು ನಂತರ ಅಗಲವಾಗುತ್ತಾ ಕಹಳೆಯು ಅರ್ಧ ಚಂದ್ರನ ಆಕಾರ ಪಡೆಯುತ್ತದೆ. ದೋತ್ರ ಉಟ್ಟುಕೊಂಡು ಮೇಲೆ ಬಿಳಿ ಅಂಗಿ ತೊಟ್ಟು, ನಡುವಿಗೆ ಕೆಂಪು ವಸ್ತ್ರ, ತಲೆಗೆ ಹಳದಿ ಪೇಟ ಸುತ್ತಿಕೊಂಡ ಇವರನ್ನು ನೋಡುವುದೇ ಚೆಂದ. ಕಹಳೆ ವಾದ್ಯಕ್ಕೆ ನಮ್ಮ ನಾಡಬಾವುಟದ ಬಣ್ಣವಾದ ಕೆಂಪು–ಹಳದಿ ವಸ್ತ್ರವನ್ನು ಸುತ್ತಿ ಅಲಂಕಾರ ಮಾಡಿ ಇವರು ಕಹಳೆ ಊದಲು ಆರಂಭಿಸಿದರೆ ನೋಡುಗರಿಗೆ ಮೈ ನವಿರೇಳುತ್ತದೆ.

ಇದನ್ನೂ ಓದಿ : 5000 ಕ್ಕಿಂತಲೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿರುವ ಆಶಾ

ʻನನಗೆ ಅರವತ್ತಾದರೂ ಈಗಲೂ ಬೆಳಗಿನ ಜಾವ ಎದ್ದು ಕಹಳೆ ಊದುವುದು ಅಭ್ಯಾಸ. ಮುಂಜಾನೆ ಅಭ್ಯಾಸ ಮಾಡಿದರೆ ಹಿಡಿತ ಸಿಗುತ್ತದೆ. ಆವಾಗೆಲ್ಲ ನಾವು ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದೆವು. ಆಗ ಅಕ್ಕಪಕ್ಕದ ಜನರು ಇದನ್ನು ತೊಂದರೆಯೆಂದು ಭಾವಿಸುತ್ತಿರಲಿಲ್ಲ. ಈಗ ಅಕ್ಕ ಪಕ್ಕದ ಮನೆಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಹಾಗೂ ಮನೆಯಲ್ಲಿ ಚಿಕ್ಕ ಮಕ್ಕಳು, ಓದುವ ಮಕ್ಕಳಿರುತ್ತಾರೆ ಎಂದು ಮನೆಯಲ್ಲಿ ಅಭ್ಯಾಸ ಮಾಡುವುದಿಲ್ಲ. ಊರಲ್ಲಿ ಹೆಚ್ಚು ಶಬ್ಧ ಮಾಡುವ ಹಾಗಿಲ್ಲ. ಆದ್ದರಿಂದ ನಮ್ಮೂರಿನ ಎತ್ತರದ ಬೆಟ್ಟವನ್ನು ಹತ್ತುತ್ತೇವೆ. ಅಲ್ಲಿ ಸುತ್ತಮುತ್ತಲೂ ಐದು ಹಳ್ಳಿಯ ಸೊಬಗು ಕಾಣಬಹುದು ಹಾಗೇನೇ ಅಲ್ಲಿ ಬೀರಪ್ಪನ ಗುಡಿ ಆಂಜನೇಯನ ಗುಡಿಗಳಿವೆ. ಅಲ್ಲಿ ಹೋಗಿ ಅಭ್ಯಾಸ ಮಾಡುತ್ತೇವೆ’ ಎಂದು ಅವರ ದೈನಂದಿನ ರೂಡಿಯನ್ನು ಹೇಳಿದರು.

‘ಆಗ ನಮಗೆ ಅನ್ನ ಸಿಗುವುದೂ ಕಷ್ಟ. ಕಹಳೆ ವಾದನವೇ ನಮಗೆ ಆಸರೆಯಾಗಿತ್ತು. ಆವಾಗೆಲ್ಲ ರೈತರು ಗದ್ದೆ ಮಾಡಿ, ನೆಲ್ಲು ಕೊಯ್ದು ಮೆದೆ ಕಟ್ಟುವಾಗ ನಾವು ಗದ್ದೆಗಳಿಗೆ ಹೋಗಿ ಕಹಳೆ ಊದಿ ಅವರನ್ನು ಖುಷಿಪಡಿಸಿದರೆ ಒಂದಷ್ಟು ಮೆದೆ ಕೊಡುತ್ತಿದ್ದರು. ನಂತರ ಮತ್ತೊಂದು ಗದ್ದೆಗೆ ಹೋಗುತ್ತಿದ್ದೆವು. ಹೀಗೆ ಗದ್ದೆ ಗದ್ದೆಗೂ ಹೋಗಿ ಕಹಳೆ ಊದಿ ಅವರನ್ನು ಖುಷಿಪಡಿಸಿ ಅವರು ಕೊಡುತ್ತಿದ್ದ ಭತ್ತದ ಮೆದೆಯನ್ನು ಮನೆಗೆ ತರುತ್ತಿದ್ದರು ಅಪ್ಪ. ನಮ್ಮ ಮನೆಯ ಹತ್ತಿರ ವಿಶಾಲವಾದ ಬಂಡೆ ಇತ್ತು. ಅನುಕೂಲವಾದಾಗ ಕೋಣೆಯಲ್ಲಿದ್ದ ಮೆದೆಯನ್ನು ತಂದು ಅಲ್ಲಿ ಹಾಕಿ ಕಣ ಮಾಡಿಕೊಂಡು ಹೊಟ್ಟೆಗೆ ಪ್ರಸಾದ ಮಾಡುತ್ತಿದ್ದೆವು. ಆ ಕಾಲದಲ್ಲಿ ಅನ್ನಕ್ಕೂ ಬಹಳ ತೊಂದರೆಯಿದ್ದದ್ದರಿಂದ ನವಣೆ ಅನ್ನ, ಅಂಬಲಿ ಮಾಡಿ ಅದಕ್ಕೆ ಉಪ್ಪು ನೀರು ಹಾಕಿಕೊಂಡು ಕಾಲ ಕಳೆಯುತ್ತಿದ್ದೆವು. ನಮ್ಮ ತಂದೆಯವರು ಪ್ರತಿದಿನ ನಮಗಾಗಿ ಅವರ ಒಂದು ಹೊತ್ತಿನ ಊಟ ಕಡಿಮೆ ಮಾಡಿ ನಮ್ಮನ್ನು ಸಾಕಿದರು’ ಎಂದು ಅವರ ಕಷ್ಟದ ದಿನಗಳನ್ನು ನೆನೆದರು.

‘ಕನಕಗಿರಿ ಉತ್ಸವ, ಹೊಸಪೇಟೆ ಉತ್ಸವಗಳಿಗೆ ಹೋಗಿ ಅಲ್ಲಿನ ಗಣ್ಯ ವ್ಯಕ್ತಿಗಳು ವೈಭೋಗದಿಂದ ವೇದಿಕೆಗೆ ಬರಲು ನಾವು ಕಹಳೆಯನ್ನು ಊದಿ ಸ್ವಾಗತ ಕೋರುತ್ತೇವೆ. ನನ್ನ ಮಕ್ಕಳು ಕೃಷ್ಣ, ಮಹೇಶ್, ಗಣೇಶ್ ಈಗ ಮೊಮ್ಮಕ್ಕಳಾದ ಉದಯ್, ಕೃಷ್ಣ, ಸಾಗರ್, ಸಂತೋಷ್ ಇವರು ಬಾಲ್ಯದಿಂದಲೇ ವಿಶೇಷ ಆಸಕ್ತಿಯಿಂದ ಕಹಳೆ ವಾದ್ಯ ನುಡಿಸುತ್ತಿರುವುದು ನನಗಂತೂ ತುಂಬ ಖುಷಿ ತಂದಿದೆ. ಏಕೆಂದರೆ ತಲತಲಾಂತರದಿಂದಲೂ ನಾವು ಕಹಳೆಯನ್ನು ನುಡಿಸುತ್ತ ಬಂದಿದ್ದೇವೆ. ಕಹಳೆ ವಾದನವನ್ನು ಹುಬ್ಬಳ್ಳಿಯಿಂದ ತರುತ್ತೇವೆ. ಈಗ ಎಂಟ್ಹತ್ತು ವರ್ಷಗಳ ಹಿಂದೆ 1650 ರೂಪಾಯಿ ಕೊಟ್ಟು ನಾನು ಕಹಳೆ ತಂದಿದ್ದೆ. ಇತ್ತೀಚೆಗೆ ಇದರ ಬೆಲೆ ಒಂದು ಕಹಳೆಗೆ 4000 ರೂಪಾಯಿ ಆಗಿದೆ’ ಎಂದರು.

‘ಕಹಳೆ ವಾದನ ಕಲಿಯಲು ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಬೇಕು. 20–25 ವರ್ಷದ ನಂತರ ಕಲಿಯಲು ಕಷ್ಟ. ನಾನು ಯಾವುದಾದರು ಕಾರ್ಯಕ್ರಮಕ್ಕೆ ಹೋದಾಗ ಇನ್ನೊಮ್ಮೆ ಕಹಳೆ ಊದಿ ಇನ್ನೊಮ್ಮೆ ಊದಿ ಎಂದು ಹುರುಪಿನಿಂದ ಜನ ಕೇಳುತ್ತಿರುತ್ತಾರೆ. ನನಗಾಗ ನನ್ನ ವಯಸ್ಸನ್ನೇ ಮರೆತು ಮೈಮರೆತು ಕಹಳೆ ಊದುವಷ್ಟು ಹುಮ್ಮಸ್ಸು ಬರುತ್ತದೆ, ಕಹಳೆ ಊದಲು ಆರಂಭಿಸಿದರೆ ವಿಶಿಷ್ಟವಾದ ದನಿ ಕೇಳಿಬರುತ್ತದೆ. ಆಗ ಎಲ್ಲರೂ ಬೆರಗಿನಿಂದ ಚಪ್ಪಾಳೆಯೊಂದಿಗೆ ಭೇಷ್ ಚೆನಾಗಿ ನುಡಿಸುತ್ತೀರಿ ಎನ್ನುತ್ತಾರೆ. ಉಸಿರುಕಟ್ಟಿ ನುಡಿಸುವುದರಿಂದ ಒಮ್ಮೊಮ್ಮೆ ಉಸಿರು ಹಿಡಿದಂತೆ ಬೆನ್ನಿನಲ್ಲಿ ನರಗಳು ಹಿಡಿಯುತ್ತವೆ. ಆದರೂ ಅದನ್ನು ಲೆಕ್ಕಿಸದೆ ನಾವು ನುಡಿಸಬೇಕು. ಕಾರ್ಯಕ್ರಮ ಚಂದ ಆಗಬೇಕು ಎನ್ನುವುದು ನಮ್ಮ ಭಾವ, ಹಾಗಾಗಿ ನೋವಾದರೂ ಹಳ್ಳಿ ಹಳ್ಳಿಗೂ ಹೋಗಿ ಕಲಾ ಪ್ರದರ್ಶನ ಮಾಡುತ್ತ ನೋವು ಮರೆಯುತ್ತೇವೆ.

ಕಹಳೆ ವಾದನವನ್ನು ನನ್ನ ನಂತರವೂ ಮುಂದುವರೆಸಬೇಕು ಎಂಬ ಮಹದಾಸೆಯಿಂದ ಇತ್ತೀಚೆಗೆ ತಂಡಕ್ಕೆ ತಲಾ ಹತ್ತು ಜನರಂತೆ ಎರಡು ತಂಡಗಳನ್ನು ಮಾಡಿದ್ದೇವೆ. ಒನಕೆ ಓಬವ್ವ ಕಹಳೆ ವಾದನ ತಂಡ  ಮತ್ತು ವೀರ ಒನಕೆ ಓಬವ್ವ ಕಹಳೆ ವಾದನ ತಂಡ ಎಂಬ ಎರಡು ತಂಡ ಮಾಡಿಕೊಂಡು ಹಂಪಿ ಉತ್ಸವ, ಮೈಸೂರು ದಸರಾ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಬೀದರ್, ಹೊಸಪೇಟೆ ಸುತ್ತಮುತ್ತ ಹಳ್ಳಿ ಹಳ್ಳಿಗಳಿಗೂ ಹೋಗಿ ನಾವು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇವೆ. ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ಕೊಟ್ಟು ಮನವಿ ಮಾಡಿರುವುದರಿಂದ ಅವರು ಪ್ರತೀ ವರ್ಷ ನಮ್ಮ ವಿಳಾಸಕ್ಕೆ ಕಾರ್ಯಕ್ರಮದ ವಿವರ ಬರೆದು ಪತ್ರ ಕಳುಹಿಸುತ್ತಾರೆ ಹಾಗಾಗಿ ಹೇಗೋ ಕಲೆಯೊಂದಿಗೆ ಜೀವನ ಸಾಗಿದೆ’ ಎನ್ನುತ್ತಾರೆ ಕಹಳೆ ಹನುಮಂತಪ್ಪ. ಇವರ ಈ ಪರಿಶ್ರಮ, ಸಾಧನೆಗಾಗಿ ಜಿಲ್ಲಾ ಮಟ್ಟದ ಸಾಕಷ್ಟು ಪ್ರಶಸ್ತಿಗಳು, ಪ್ರಶಂಸಾ ಪತ್ರಗಳು, ಕಾಣಿಕೆಗಳು ಇವರನ್ನು ಅರಸಿ ಬಂದಿವೆ. ಈಗ ಕಹಳೆ ವಾದ್ಯದ ಬಳಕೆ ಕಡಿಮೆಯಾಗುತ್ತಿದ್ದರೂ ಗೌರವದ ಸಂಕೇತವಾಗಿ ಇದು ಅಲ್ಲಲ್ಲಿ ಬಳಕೆಯಲ್ಲಿದೆ. ಕರಾವಳಿ ಭಾಗದಲ್ಲಿ ಕಂಬಳ, ಭೂತಕೋಲಗಳಲ್ಲಿ ಕಹಳೆಯನ್ನು ಬಳಸುತ್ತಾರೆ.

ಈ ಕಲಾವಿದರು ಜೀವನ ನಡೆಸಲು ಕಷ್ಟವಾಗಿರುವುದರಿಂದ ರಾಮಸಾಗರ ಸುತ್ತಮುತ್ತ ನೆಲ್ಲು ಬೆಳೆಯುತ್ತಾರೆ, ಕೃಷಿ ಕೆಲಸದೊಂದಿಗೆ ವ್ಯವಸಾಯ ಮಾಡುತ್ತಾರೆ.

 

Donate Janashakthi Media

Leave a Reply

Your email address will not be published. Required fields are marked *