–ಮೈಸೂರು ದಸರಾ ಮುಗಿಸಿದ ಗಜಪಡೆ ಮರಳಿ ವನವಾಸಕ್ಕೆ
ಕೊಡಗು: ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ತೆರಳಿದ್ದ ಕೊಡಗಿನ ನಾಲ್ಕು ಆನೆಗಳು ಕೊಡಗಿನ ಕಾಡಿಗೆ ಮತ್ತೆ ಮರಳಿವೆ.
ಮೈಸೂರು ದಸರಾದಲ್ಲಿ ಭಾಗವಹಿಸಲು 15 ದಿನಗಳ ಹಿಂದೆ ಕೊಡಗಿನ ಆನೆಕಾಡು ಮತ್ತು ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಆನೆಗಳು ತೆರಳಿದ್ದವು. ದಸರಾ ಮುಗಿಸಿದ ಆನೆಗಳು ಇಂದು ಕೊಡಗಿಗೆ ಮರಳಿದವು.
ಮೈಸೂರಿನಿಂದ ನೇರ ಕೊಡಗಿನ ದುಬಾರೆ ಸಾಕಾನೆ ಶಿಬಿರ ಮತ್ತು ಕುಶಾಲನಗರ ಸಮೀಪದ ಆನೆಕಾಡಿಗೆ ಆನೆಗಳನ್ನು ಲಾರಿಯಲ್ಲಿ ಸಾಗಿಸಲಾಯಿತು. ವಿಕ್ರಮ ಮತ್ತು ಕಾವೇರಿ ಆನೆಯನ್ನು ಆನೆಕಾಡಿನಲ್ಲಿ ಇಳಿಸಲಾಯಿತು. ಆನೆ ರಕ್ಷಣಾ ಲಾರಿಯಲ್ಲಿ ವಿಕ್ರಮ ಆನೆಯನ್ನು ಕರೆತಂದು ಇಳಿಸಲು ಪ್ರಯತ್ನಿಸಿದರೆ, ವಿಕ್ರಮ ಆನೆ ಇಳಿಯಲು ಒಲ್ಲೇ ಎಂದ. ಇಳಿಯುತಿದ್ದ ವಿಕ್ರಮ ಮತ್ತೆ ಲಾರಿಯೆಡೆಗೆ ತಿರುಗಿ ನಿಂತ.
ಕೊನೆಗೆ ಮಾವುತ ಸೂಚನೆ ನೀಡಿ ಲಾರಿಯಿಂದ ಇಳಿಯುವಂತೆ ಮಾಡಿದ. ಆದರೆ ಲಾರಿಯಿಂದ ಇಳಿಯುತ್ತಿದ್ದಂತೆ ವಿಕ್ರಮ ಆನೆ ತನ್ನ ಮೈಯನ್ನು ಮರವೊಂದಕ್ಕೆ ತಿಕ್ಕಿ ತೀಡಿದ ಅರಮನೆ ಆತಿಥ್ಯದ ಬೇಸರ ಹೊರಹಾಕಿದ. ಕೊನೆಗೆ ಮಾವುತ ಚಿಕ್ಕದೊಂದು ಕೋಲಿನಿಂದ ಎರಡು ಪೆಟ್ಟುಕೊಟ್ಟು ಆನೆಯನ್ನು ಅಲ್ಲಿಂದ ಮುಂದೆ ಕಳುಹಿಸಬೇಕಾಯಿತು. ಒಟ್ಟಿನಲ್ಲಿ ಮಹಾನಗರದ ಪರಿಸರದಲ್ಲಿದ್ದ ಆನೆಗಳು ಇಂದು ಮತ್ತೆ ತಮ್ಮ ಕಾಡಿನ ಪರಿಸರಕ್ಕೆ ಬಂದು ಖುಷಿಯಾಗಿವೆ.