ಕಾಡಾನೆ ಹಾವಳಿ: ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ

  • ಕಾಡಾನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ
  • ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಪ್ರತಿಭಟನೆ
  • ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಬಂದ ಡಿಇಒ
  • ಜನರು ಸುರಕ್ಷಿತವಾಗಿ-ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕ ಮೂಲಕ ಮನವಿ

ಸಕಲೇಶಪುರ: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಬೆಳ್ಳಂಬೆಳಿಗ್ಗೆ ಗ್ರಾಮಗಳ ಒಳಗೆ ಒಂಟಿ ಸಲಗಗಳು ಏಕಾಏಕಿ ಪ್ರವೇಶ ಮಾಡಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ. ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಹಗಲು ರಾತ್ರಿ ಎನ್ನದೆ ಗ್ರಾಮದೊಳಗೆ ಸಂಚರಿಸುತ್ತಿರುವುದರಿಂದ ಭೀತಿಗೊಳಗಾಗಿರುವ ಜನರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಬೇಕು ಮತ್ತು ಆನೆಗಳನ್ನು ಸ್ಥಳಾಂತರ ಮಾಡಬೇಕು, ಆನೆಗಳ ಹಾವಳಿಯಿಂದ ಶಾಶ್ವತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಬಾಗೆ ಗ್ರಾಮದ ಬಳಿ ಶಾಸಕ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ಮಾಡಿದರು.

ಸಕಲೇಶಪುರ ತಾಲೂಕಿನಲ್ಲಿ ಕಳೆದ ಎರಡು ವಾರದಲ್ಲಿ ಆನೆ ತುಳಿತಕ್ಕೆ ಒಬ್ಬರು ಬಲಿಯಾಗಿದ್ದು, ಮತ್ತೊಬ್ಬರು ಗಂಭೀರಗೊಂಡಿದ್ದಾರೆ. ಮೊದಲು ರಾತ್ರಿ ವೇಳೆ ಆನೆಗಳು ತೋಟಗಳಲ್ಲಿದ್ದವು. ನಂತರ ಗ್ರಾಮದೊಳಗೆ ಬಂದವು. ಆಗ ರಾತ್ರಿ ಹೊತ್ತು ಮನೆಯಿಂದ ಹೊರಗೆ ಬರಬೇಡಿ ಎಂದು ಹೇಳಿದರು. ಈಗ ಹಗಲು ಹೊತ್ತಿನಲ್ಲೇ ಗ್ರಾಮದೊಳಗೆ ರಾಜಾರೋಷದಿಂದ ಆನೆಗಳು ತಿರುಗಾಡುತ್ತವೆ. ಹಗಲು ಹೊತ್ತೂ ಮನೆಯಿಂದ ಬರದೆ ಹೇಗೆ ಇರುವುದು, ಮನೆ ಕಿಟಕಿ ಒಡೆದು ಅಕ್ಕಿ ಮತ್ತಿತರ ವಸ್ತುಗಳನ್ನು ತಿನ್ನುತ್ತವೆ. ಇದರಿಂದ ಮನೆಗಳೂ ಜನರಿಗೆ ಸುರಕ್ಷಿತವಲ್ಲ ಎಂಬಂತಾಗಿದೆ. ಆನೆಗಳಿಂದ ಜನರಿಗೆ ತೊಂದರೆಯಾದಾಗ ಮಾತ್ರ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸಮಸ್ಯೆಗೆ ಪರಿಹರ ಸಿಗುತ್ತದೆ ಎಂಬ ಭರವಸೆಯೇ ಇಲ್ಲವಾಗಿದೆ. ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ವೇಳೆಗೆ ಎಷ್ಟು ಪ್ರಾಣ ಹಾನಿಯಾಗಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿ ಹೆಚ್ಚಿರುವ ಹಾಸನ ಜಿಲ್ಲೆಯ ಎಲ್ಲಾ ಬೆಳೆಗಾರರ ಸಂಘಟನೆಗಳು ಹಾಗು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಅಲ್ದೂರು ಮತ್ತು ಕೊಡಗು ಜಿಲ್ಲೆಯ ಬೆಳೆಗಾರರು ಭಾಗವಹಿಸಿದ್ದರು.

ತಡವಾಗಿ ಬಂದ ಡಿಎಒಗೆ ತರಾಟೆ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಬಾಗೆಯಲ್ಲಿ ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಬಂದ ಡಿಎಒ ಡಾ. ಬಸವರಾಜ್ ರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಕಾಡಾನೆ ಸಮಸ್ಯೆಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಮಾತ್ರ ನಿರ್ಲಿಪ್ತವಾಗಿದ್ದಾರೆ. ಸಂಕಷ್ಟಕ್ಕೀಡಾದ ಜನರು ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರೆ ನೀವು ಆರಾಮವಾಗಿ ಮಧ್ಯಾಹ್ನ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಮಜಾಯಿಷಿ ನೀಡಲು ಬಂದ ಡಾ. ಬಸವರಾಜ್‌ಗೆ ಮಾತನಾಡಲು ಬಿಡದ ಪ್ರತಿಭಟನಾಕಾರರು ಮೊದಲು ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳುವಂತೆ ಆಗ್ರಹಿಸಿದರು.

ಈ ವೇಳೆ ನಾನು ಉದ್ದೇಶಪೂರ್ವಕವಾಗಿ ತಡವಾಗಿ ಬಂದಿಲ್ಲ. ನಿಗದಿಯ ಕೆಲಸಗಳು ಇದ್ದಿದ್ದರಿಂದ ತಡವಾಯಿತು ಎಂದು ಹೇಳಿ ರೈತರ ಕ್ಷಮೆ ಕೇಳಿದರು.

ಬಳಿಕ ರೈತರು ತಾಲೂಕಿನಲ್ಲಿ ಕಾಡಾನೆ ಹಾವಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ ಬಸವರಾಜ್, ಕಾಡಾನೆ ಹಾವಳ ತಡೆಯಲು ರೈಲ್ವೆ ಕಂಬಿ ಬೇಲಿ ಹಾಕಲು ಸರ್ಕಾರ ಘೋಷಣೆ ಮಾಡಿದೆ. ಅಕಾಲಿಕವಾಗಿ ಮಳೆ ಆರಂಭವಾಗಿದ್ದರಿಂದ ಯೋಜನೆ ಜಾರಿಯಾಗುತ್ತಿಲ್ಲ. ಆನೆಗಳ ಸೆರೆಯೂ ಕೂಡ ಮಳೆಯಿಂದ ಮುಂದಕ್ಕೆ ಹೋಗಿದೆ. ಈ ಬಗ್ಗೆ ಸರ್ಕಾರದ ಜೊತೆಗೆ ಮಾತನಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಬಾಳ್ಳು ಗೋಪಾಲ್ ಮತ್ತಿತರರಿದ್ದರು.

ಬೆಳ್ಳಂಬೆಳಗ್ಗೆ ಊರಿಗೆ ಬಂದ  ಒಂಟಿ ಸಲಗ

ಸಕಲೇಶಪುರ ತಾಲ್ಲೂಕಿನ ಕಿರುಹುಣಸೆ ಸರ್ಕಲ್ ಹಾಗೂ ವಡೂರು ಗ್ರಾಮದಲ್ಲಿ ಹಾದು ಹೋದ ಕಾಡಾನೆ ಕಂಡು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಕಾಡಾನೆಯೊಂದು ರಸ್ತೆಯಲ್ಲಿ ದಿಢೀರನೆ ಎದುರು ಬರುತ್ತಿದ್ದಂತೆ ಬೈಕ್ ನಿಲ್ಲಿಸಿ ಸವಾರರೊಬ್ಬರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಕಿರುಹುಣಸೆ ಗ್ರಾಮದೊಳಗೆ ಎರಡು ಸಲಗಗಳು ಸಂಚಾರ ಮಾಡುವ ವಿಡಿಯೋ ವೈರಲ್ ಆಗಿದ್ದು, ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಆನೆಗಳು ಯಾವಾಗ ನಮ್ಮ ಮೇಲೆ ದಾಳಿ ಮಾಡುತ್ತವೆಯೋ ಎಂದು ಆತಂಕ ಗ್ರಾಮದಲ್ಲಿ ಮನೆ ಮಾಡಿದೆ.

ಕಾಡಾನೆಗಳ ಇರುವ ಮಾಹಿತಿ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡುತ್ತಿದೆ. ಮಠಸಾಗರ, ಟಾಟಾ ಎಸ್ಟೇಟ್ ಬಳಿ ಕಾಡಾನೆಗಳಿದ್ದು, ಎಚ್ಚರಿಕೆಯಿಂದ ಓಡಾಡುವಂತೆ ಮನವಿ ಮಾಡಲಾಗುತ್ತಿದೆ.

ಅರಣ್ಯ ಇಲಾಖೆ ಕಾಡಾನೆಗಳು ಬೀಡು ಬಿಟ್ಟಿರುವ ಹಳೆಬಾಗೆ, ಕುಂಬನಘಟ್ಟ ಭಾಗದಲ್ಲಿ ಮನೆಯಿಂದ ಹೊರಬಾರದಂತೆ ಬೀದಿ ಬೀದಿಯಲ್ಲಿ ಎಚ್ಚರಿಕೆ ನೀಡುತ್ತಿವೆ. ಇಲಾಖೆಯಿಂದ ಸೂಚನೆ ಬಂದ ನಂತರ ಬೆಳಗಿನ ಜಾವ ತೋಟಕ್ಕೆ ಹೋಗಲು ಗ್ರಾಮಸ್ಥರಲ್ಲಿ ಮನವಿ ಮಾಡಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *