ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಅಮಾಯಕ ಬಲಿ

ಸಕಲೇಶಪುರ: ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆ ವಿಚಾರದಲ್ಲಿ ಆಳುವವರ ಮಾತುಗಳು ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗುತ್ತಲೇ ಇದೆ.

ತನ್ನದಲ್ಲದ ತಪ್ಪಿಗೆ ಕೂಲಿ ಕಾರ್ಮಿಕನೊಬ್ಬ ಇಂದು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದಾನೆ. ತಾಲೂಕಿನ ಕಬ್ಬಿನಗದ್ದೆ ಗ್ರಾಮದ ರವಿ(48) ಮೃತ ವ್ಯಕ್ತಿ. ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್‌ನ ಮಾಲೀಕ ಬಸವರಾಜು ಎಂಬುವರ ಕಾಫಿ ತೋಟದಲ್ಲಿ ಇಂದು ಬೆಳಿಗ್ಗೆ ಸುಮಾರು 20 ಮಂದಿ ಕೂಲಿ ಕಾರ್ಮಿಕರು ಎಂದಿನಂತೆ ಕೆಲಸ ಮಾಡುತ್ತಿದ್ದರು.

ಈ ವೇಳೆ ಏಕಾಏಕಿ ದಾಳಿ ಮಾಡಿದ ಒಂಟಿ ಸಲಗ ಯಾರದೋ ಮೇಲಿನ ಸಿಟ್ಟಿಗೆ, ತನ್ನ ಮತ್ತು ತನ್ನನ್ನು ನಂಬಿದವರ ಹೊಟ್ಟೆ ತುಂಬಿಸಿಕೊಳ್ಳಲು ದುಡಿಯಲು ಬಂದಿದ್ದ ಬಡಪಾಯಿ ಕಾರ್ಮಿಕನನ್ನು ತುಳಿದು ಸಾಯಿಸಿದೆ.

ಸಾವಿಗೆ ಕೊನೆ ಎಂದು:

ಮಲೆನಾಡು ಭಾಗದ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಮೊದಲಾದ ಕಡೆಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆ ಹಿಂಡಿನ ಆಟಾಟೋಪಕ್ಕೆ ಕಡಿವಾಣ ಎಂದು ಎಂಬುದು ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ನೊಂದು, ಬೇಯುತ್ತಿರುವ ಜನರ ಪ್ರಶ್ನೆಯಾಗಿದೆ.

ಆನೆ-ಮಾನವರ ನಡುವಿನ ಸಂಘರ್ಷಕ್ಕೆ ಕಡಿವಾಣ ಹಾಕಬೇಕಿದ್ದ ಸರ್ಕಾರ ಮತ್ತು ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ದುರಂತ ಸಂಭವಿಸಿದಾಗ ಮಾತ್ರ ಪರಿಹಾರದ ಮಾತುಗಳನ್ನಾಡಿ ನಂತರ ಸುಮ್ಮನೆ ಕೂರುವುದು ಕಾಡಾನೆ ಕಾಟ ಮಿತಿ ಮೀರಲು ಕಾರಣವಾಗಿದೆ ಎಂಬುದು ಅನೇಕರ ದೂರಾಗಿದೆ.  ಇಷ್ಟಾದರೂ ಅರಣ್ಯ ಇಲಾಖೆ ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೊಂದ ಜನರು ಆಕ್ರೋಶ ಹೊರ ಹಾಕಿದ್ದಾರೆ.

ದಿಢೀರ್ ಪ್ರತಿಭಟನೆ

ಕಾಡಾನೆ ದಾಳಿಯಿಂದ ಸಾವು ಸಂಭವಿಸಿದಾಗಲೆಲ್ಲಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಮಾತುಗಳನ್ನಾಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಂತರ ತಮ್ಮ ಪಾಡಿಗೆ ತಾವಿರುತ್ತಾರೆ ಎಂದು ಆರೋಪಿಸಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ನಂತರ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತದೇ ಭರವಸೆ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಪ್ರತಿ ಸಾವಿನ ಸಂದರ್ಭದಲ್ಲೂ ಎಲ್ಲರಿಂದಲೂ ಇದೇ ರೀತಿಯ ಭರವಸೆ ಹೊರ ಬರುತ್ತವೆ, ನಂತರ ಯಾರೂ ಇತ್ತ ಸುಳಿಯುವುದಿಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅನ್ನೋ ಹಾಗೆ,  ಅಮಾಯಕರು, ಕೂಲಿ ಕಾರ್ಮಿಕರು ಬಲಿಯಾಗಬೇಕಿದೆ ಎಂದು ಸಿಟ್ಟು ಹೊರ ಹಾಕಿದರು.

Donate Janashakthi Media

Leave a Reply

Your email address will not be published. Required fields are marked *