– ಪೊಲೀಸರ ಮೇಲೂ ಕ್ರಮಕ್ಕೆ ಸಿಪಿಎಂ ಆಗ್ರಹ
ದೆಹಲಿ: ಉತ್ತರ ಪ್ರದೇಶದ ದಲಿತ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯವನ್ನು ನಿರಾಕರಿಸಿರುವ ಆದಿತ್ಯನಾಥ ಸರಕಾರದ ಕ್ರಮಗಳು ಅತ್ಯಂತ ನಾಚಿಕೆಗೇಡು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಆಕೆಯ ಸಾವು ಸರಕಾರದ ನಿರ್ಲಕ್ಷ್ಯದ ನಿಲುವಿನ ಫಲಿತಾಂಶ. ಆಕೆ ಸೆಪ್ಟೆಂಬರ್ 4ರಂದು ನಾಲ್ವರು ಮೇಲ್ಜಾತಿ ಗಂಡಸರು ಎಸಗಿದ ಅತ್ಯಾಚಾರ ಅಪರಾಧದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯ ನಾಲಗೆಯನ್ನು ಕತ್ತರಿಸಲಾಗಿತ್ತು, ವಿಪರೀತ ರಕ್ತಸ್ರಾವವಾಗುತ್ತಿತ್ತು. ಆದರೆ ಪೋಲೀಸರು ಐದು ದಿನ ಎಫ್‍ಐಆರ್ ಹಾಕಲು ನಿರಾಕರಿಸಿದರು. ಆಕೆಗೆ ತಕ್ಷಣ ವೈದ್ಯಕೀಯ ನೆರವನ್ನೂ ನಿರಾಕರಿಸಿದರು. ವೈದ್ಯಕೀಯ ನೆರವು ಸಿಕ್ಕಿದ್ದರೆ ಆಕೆಯ ಜೀವ ಉಳಿಯುತ್ತಿತ್ತೇನೋ. ಈ ಜಾತಿ ಕ್ರೌರ್ಯದ ಅಂತಿಮ ಕೃತ್ಯದಲ್ಲಿ ಪೊಲೀಸರು ಆಕೆಯ ಮೃತದೇಹವನ್ನೂ ಕುಟುಂಬಕ್ಕೆ ಕೊಡದೆ ತಾವೇ ದಹನ ಮಾಡಿದರು, ಆಮೂಲಕ ತಮ್ಮ ಮಗಳಿಗೆ ಒಂದು ಗೌರವಯುತ ಅಂತಿಮ ಸಂಸ್ಕಾರ ನಡೆಸುವ ಆಕೆಯ ಕುಟುಂಬದ ಹಕ್ಕನ್ನೂ ನಿರಾಕರಿಸಿದರು.
ಈ ಬರ್ಬರ ಜಾತಿ ಆಧಾರಿತ ಅತ್ಯಾಚಾರದ ಅಪರಾಧ ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರದ ಅಡಿಯಲ್ಲಿ ಇರುವ ಸಂಪೂರ್ಣ ಕಾನೂನುಹೀನತೆ ಮತ್ತು ಜಾತಿವಾದಿ ಹಾಗೂ ಪ್ರತಿಗಾಮಿ ಶಕ್ತಿಗಳಿಗೆ ಸಿಗುತ್ತಿರುವ ಪೋಷಣೆಯನ್ನು ಬಿಂಬಿಸುತ್ತದೆ. ಇದರಿಂದಾಗಿ ದಲಿತರು ಮತ್ತು ಮಹಿಳೆಯರ ವಿರುದ್ಧ ಅಪರಾಧಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಉಂಟಾಗಿದೆ. ಇತ್ತೀಚಿನ ಎನ್.ಸಿ.ಆರ್.ಬಿ. ವರದಿ ಇದನ್ನು ದೃಢಪಡಿಸಿದೆ.
ಎಫ್.ಐ.ಆರ್. ಹಾಕಲು ನಿರಾಕರಿಸಿದ ಪೋಲೀಸ್ ಸಿಬ್ಬಂದಿಯ ವಿರುದ್ಧ ಮತ್ತು ಬಲವಂತವಾಗಿ ದಹನ ಕ್ರಿಯೆ ನಡೆಸಿದ ಕ್ರೂರ ಕೃತ್ಯಕ್ಕೆ ಹೊಣೆಗಾರರಾದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.