ಬೆಂಗಳೂರು: ಬಿಜೆಪಿಯ ಮಾಜಿ ಸಚಿವ ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೆ.ಸುಧಾಕರ್ ವಿರುದ್ಧ ಗಂಭೀರ ಪ್ರಕರಣವೊಂದು ದಾಖಲಾಗಿದ್ದು, ಐಎಎಸ್ ಅಧಿಕಾರಿ ಮೌನೀಶ್ ಮೌದ್ಗೀಲ್‌ಗೆ ಚುನಾವಣಾ ಆಯೋಗ ವಶಪಡಿಸಿಕೊಂಡಿರುವ 4.8 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆಂಬ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ (ಎಸ್‌ಎಸ್‌ಟಿ) ಸದಸ್ಯ ದಶರತ್ ವಿ ಕುಂಬಾರ್ ದೂರು ದಾಖಲಿಸಿದ್ದು, ಸುಧಾಕರ್ ಕೆ.ಇವರಿಗೆ ಸೇರಿದ್ದ ಮೊಬೈಲ್ ಸಂಖ್ಯೆಯನ್ನು ಹಾಗೂ ಮೌನೀಶ್ ಮೌದ್ಗೀಲ್ ಅವರಿಗೆ ಬಂದಿದ್ದ ಕಾಲ್ ರಿಕಾರ್ಡ್ಸ್ ಹಿಸ್ಟರಿ ಹಾಗೂ ವಾಟ್ಸಪ್ ಮೆಸೇಜ್‌ಗಳ ಸ್ಕ್ರೀನ್ ಶಾಟ್ ಅನ್ನು ದೂರಿನಲ್ಲಿ ಉಲ್ಲೇಖಿಸಿ ಲಗತ್ತಿಸಲಾಗಿದೆ.
ಎಂಸಿಸಿ ನೋಡೆಲ್ ಅಧಿಕಾರಿ ಮೌನೀಶ್ ಮೌದ್ಗೀಲ್, ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯ ಮಾದಾವರ ಗ್ರಾಮದ ಸ್ಥಳವೊಂದರಿಗೆ ಮತದಾರರಿಗೆ ಹಂಚಲು ಇಟ್ಟಿದ್ದ 4.8 ಕೋಟಿ ರೂಪಾಯಿಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆ ಹಣವನ್ನು ವಶಪಡಿಸಿಕೊಂಡಿದ್ದರು. ಅಕ್ರಮವಾಗಿ ಮತದಾರರಿಗೆ ಹಂಚಲು ಇಟ್ಟಿದ್ದ ಈ ಹಣವನ್ನು ಬಿಡುಗಡೆ ಮಾಡುವಂತೆ ಸುಧಾಕರ್ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ ಕರೆ ಮತ್ತು ಮೂರು ಮೆಸೇಜ್‌ಗಳನ್ನು ಮೌನೀಶ್ ಮೌದ್ಗೀಲ್‌ಗೆ ಕಳುಹಿಸಿದ್ದು, ಅದೆಲ್ಲವನ್ನೂ ಮೌದ್ಗೀಲ್ ಸ್ವೀಕರಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ಮೌದ್ಗೀಲ್ ದೂರು ಸಹ ನೀಡಿದ್ದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ ಬಿಜೆಪಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಕೆ.ಸುಧಾಕರ್ ಆಪ್ತನ ಮನೆಯಲ್ಲಿ ಹಣ: ಪ್ರಕರಣ ದಾಖಲಿಸಿದ ಚುನಾವಣಾ ಆಯೋಗ
ಮಾದನಾಯಕನಹಳ್ಳಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 171 ಇ (ಲಂಚ), 171 ಎಫ್ (ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಅಥವಾ ವ್ಯಕ್ತಿಗತ), 171 ಬಿ (ಯಾವುದೇ ಚುನಾವಣಾ ಹಕ್ಕನ್ನು ಚಲಾಯಿಸಲು ಲಂಚ), 171 ಸಿ (ಚುನಾವಣೆಯಲ್ಲಿ ಅನಗತ್ಯ ಪ್ರಭಾವ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮತ್ತು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 123 (ಭ್ರಷ್ಟ ಆಚರಣೆಗಳು) ಅಡಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ನಡೆದ ರಾಜ್ಯ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂ ಬಿಜೆಪಿ ಅಭ್ಯರ್ಥಿಯಾಗಿ ಕೆ ಸುಧಾಕರ್ ಸೋತಿದ್ದರು ಎಂಬುದಿಲ್ಲಿ ಗಮನಾರ್ಹ.ಈ ಬಗ್ಗೆ ದಿ ಫೈಲ್ ಸಹ ವರದಿಮಾಡಿತ್ತು.